Sunday, March 30, 2008

ಒಂದಷ್ಟು ಸಂತೋಷದ ವಿಷಯಗಳು
ತುಂಬ ದಿನಗಳಿಂದ ಎನನ್ನೂ ಬರೆದಿಲ್ಲ ಅದು ನನ್ನ ಸೊಮಾರಿತನ.
. ಸಂತೋಷದ ವಿಷಯವೆಂದರೆ ಗೆಳಯ ಎಮ್ ಡಿ ಅತಿ ರಭಸವಾಗಿ ಮುನ್ನುಗ್ಗುತ್ತಿದ್ದಾನೆ. ಮೊನ್ನೆ ಮೊನ್ನೆ ಅವನ ಬಾಂಬೇ ಟೇಲರ್ - ಲೇಡೀಸ್ ಬ್ಲೌಸ್ (!) ಸ್ಪೇಶಾಲಿಸ್ಟ ದಟ್ಸ್ ಕನ್ನಡ ಅಂರ್ತಜಾಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು
ತುಂಬ ಸುಂದರವಾದ ಕಥೆ ಅದು ಒಮ್ಮೆ ಓದಿ ನೋಡಿ ಒಂದು ಒಳ್ಳೆಯ ಓದಿಗೆ ಖಂಡಿತ ಮೋಸವಿಲ್ಲ. ಮತ್ತೊಂದು ಕಡೆ ಗೆಳೆಯ ಸಂತೋಷರ ಅಮೃತ ಸಿಂಚನ ನಿಜಕ್ಕೂ ಅದ್ಭುತವಾಗಿ ಸಾಗಿದೆ. ಅವರ ಹೋಳಿಯ ಮೆಲುಕು... ಬರಹದಲ್ಲಿ ಉತ್ತರ ಕರ್ನಾಟಕದ ಸಮಸ್ತ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ ಉತ್ತರಕರ್ನಾಟಕ ಅಂದಿದ್ದಕ್ಕೆ ಕ್ಷಮೆ ಇರಲಿ ಉತ್ತರ ಕರ್ನಾಟಕ, ಉತ್ತರಕನ್ನಡ, ದಕ್ಷಿಣಕನ್ನಡ ಇವೆಲ್ಲಾ ನಾವು ಮಾಡಿಕೊಂಡಿರುವ ಮುಚ್ಚಲಾರದಂತಹ ಕಂದರಗಳು ಎಂದಾದರು ಮುಚ್ಚುತಾವೆಯೆ?? ಮತ್ತೊಂದೆಡೆ ಚುನಾವಣೆಯ ಭರಾಟೆ ಜೋರಾಗಿ ಶುರುವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ನಮ್ಮನ್ನು ಮತ್ತು ನಮ್ಮೆಲ್ಲರನ್ನೂ ಸಾಕುತ್ತಿರುವ ಈ ಬೆಂಗಳೂರಿನ ರಸ್ತೆ ಬದಿಯ ಗೋಡೆಗಳನ್ನು ಆ ಕೆಂಪೆಗೌಡರೆ ಕಾಪಾಡಬೇಕು. ಇನ್ನೂ ಪತ್ರಿಕೆಗಳ ವಿಷಯಬಿಡಿ ಅದರ ಬಗ್ಗೆ ಹೇಳುವದಾದರೆ ಮತ್ತೊಂದು ಬ್ಲಾಗನ್ನೆ ಹುಟ್ಟುಹಾಕಬೇಕು. ಚುನಾವಣೆ ಇಲ್ಲದ ದಿನಗಳಲ್ಲೆ ಸಹಿಸಿಕೊಳ್ಳುವುದು ಕಷ್ಟಸಾಧ್ಯ ಇನ್ನೂ ಚುನಾವಣೆ ಪ್ರಕಟವಾದರೆ ಮುಗಿಯಿತು. ಇದಕ್ಕೆ ಪೂರಕವೆಂಬಂತೆ ರವಿ ಬೆಳಗೆರೆಯವರು ಕಳೆದ ಸಾರಿಯ ತಮ್ಮ ಸಂಪಾದಕಿಯದಲ್ಲಿ ಸರಿಯಾಗಿಯೆ ಬರೆದಿದ್ದಾರೆ. ಪತ್ರಿಕೆಯ ಜಾಹೀರಾತು ಮತ್ತು ಗೋಡೆ ಬದಿಯ ವಿನೈಲ್ ಭೂತಗಳಿಂದ ನಮಗೆ ಮುಕ್ತಿ ಎಂದೊ . ಕಡೆಯದಾಗಿ ಇನ್ನೊಂದು ಮಾತು ಯೋಗರಾಜ ಭಟ್ರು ಮತ್ತೊಂದು ಹಾಡನ್ನ ಅರಮನೆ ಚಿತ್ರಕ್ಕಾಗಿ ಬರೆದಿದ್ದಾರೆ "ನನ್ನ ಎದೆಯಲಿ ಇಟ್ಟ ನಾಕು ಹೆಜ್ಜೆಯ ಗುರುತು ಅಳಿಸಿ ಬಿಡು" ಸುಂದರವಾದ ಸಾಹಿತ್ಯವಿರುವಂತಹ ಹಾಡು. ಅದರ ಬಗ್ಗೆ ಮತ್ತೊಮ್ಮೆ ಸವಿಸ್ತಾರವಗಿ ಬರೆಯುತ್ತೆನೆ ಎಮ್ ಡಿ ಯದೆ ಇನ್ನೊಂದು ರಾಪ್ಚಿಕ್ ಪದ್ಯ ಕಣ್ಣು-ನೋಟ ಓದುವುದನ್ನ ಮರೆಯಬೇಡಿ ಧನ್ಯವಾದಗಳೊಂದಿಗೆ ನಿಮ್ಮ

Sunday, March 2, 2008

ಬೆಂದ ಮನಸ್ಸುಗಳಿಗೆ ಸಾಂತ್ವನದ ಕೈ ಇಂತಿ ನಿನ ಪ್ರೀತಿಯ


ಯಾರೊ ಯಾರೊ ಯಾರೊ
ಒಲಿದೊರು ಯಾರೊ
ನಿನ್ನ ತೊರೆದೊರು ಯಾರೊ
ಜೊತೆಗುಳಿದೊರೊ ಯಾರೊ
ಕಡೆಗುಳಿಯೊರು ಯಾರೊ.
ಅವಳು ಕಾರಣ ಹೇಳದೆ ಹೊರಟು ಹೋಗುತ್ತಾಳೆ. ಇವನು ಕುಡಿತದಲ್ಲಿ ಕಾರನ ಹುಡುಕುವ ಪ್ರಯತ್ನ ಪಡುತ್ತಾನೆ. ಕಾರಣ ಮಾತ್ರ ಸಿಗುವುದೆ ಇಲ್ಲ ತಿರುಗಿ ನೋಡಿದರೆ ಜೀವನದ ಆರು ತುಂಬು ವರ್ಷಗಳು ಕೇವಲ ಖಾಲಿ ಕಾಗದ.
ಪ್ರೀತಿಯ ಮಳೆಯಲ್ಲಿ ಬೆಂಕಿಯ ಕೊಡೆಕೊಟ್ಟು ನಿಲ್ಲಿಸದವರಾರೊ
ಪ್ರೀತಿಯ ಹೊಳೆಯಲ್ಲಿ ಇಜಲು ಬರದವನ ಬಿಳಿಸಿದವರಾರೊ ಮುಳುಗಿಸಿದವರಾರೊ.

ಸೂರಿಯವರಲ್ಲದೆ ಬೇರೆ ಯಾರು ಮಾಡಿದ್ದರು ಈ ಸಿನಿಮಾ ಇಷ್ಟೊಂದು ಮನ ಮುಟ್ಟುತ್ತಿರಲಿಲ್ಲ.ಆದರೆ ಬೇರೆಯವರಿಗೆ ಈ ತರಹದ ವಿಷಯಗಳು ಸಿಗಬೇಕಲ್ಲ. ಚಿತ್ರದ ಶುರುವಿನಲ್ಲಿ ನಾಯಿ ಸೀನಪ್ಪನ ಗಾಡಿಯಲ್ಲಿ ಒಂದು ಅನಾಥ ಮಗುವಿನ ಶವದ ಜೊತೆ ಕಿಟ್ಟಿಯ ಸಂಭಷಣೆ ಹೀಗಿದೆ " ಪುಟ್ಟಿ ನಾನು ನೀನು ಫ್ರೆಂಡ್ ಆಗೋಣ ಇದು ನಿನ್ನ ಗಿಫ್ಟು ನಿನಗೆ ಒಂದು ಹೆಸರು ನೀಲಿ ಹೂ " ಬದುಕಿನ ಪ್ರತಿಯೊಂದು ಮಗ್ಗಲು ಗಳನ್ನ ಸೂರಿ ತಮ್ಮ ಕುಂಚದಿಂದ ಹ್ಯಾಗೆ ಬಿಡಿಸಿಡುತ್ತಾರೆ ಅಂದ್ರೆ ಅದು ನೋಡಿಯೆ ಅನುಭವಿಸಬೇಕು. ಇಲ್ಲಿ ಕೇವಲ ಪ್ರೀತಿಯಿಲ್ಲ ಅದರವೆಗಿನ ನಗ್ನ ಬದುಕಿದೆ ಅದರೊಳಗಿನ ತಿಕ್ಕಲುತನಗಳಿವೆ ನಮ್ಮೆಲ್ಲರಲ್ಲು ಇರುವಂತಹವೆ.
ನಗುವನು ತುಟಿಗಿಟ್ಟೊರು ಯಾರೊ
ಕನಸುಗಳನು ಸುಟ್ಟೊರು ಯಾರೊ
ಪ್ರೀತಿಯ ಬಲಿ ಕೊಟ್ಟೊರು ಯಾರೊ
ಉತ್ತರಿಸೊರು ಯಾರೊ.

ಉತ್ತರ ಯಾರಲ್ಲಿದೆ ಕಾರಣ ಹೇಳದೆ ಹೊರಟು ಹೋದವಳಲ್ಲು ಇಲ್ಲ ಉಳಿದುಹೋದವನಲ್ಲು ಇರುವುದಿಲ್ಲ. ಇದು ಬರಿ ಸಿನಿಮಾ ಅಂತ ಅನ್ನಿಸೊದೆ ಇಲ್ಲ ಒಂದು ಸಾಮಾನ್ಯನ ಬದುಕಿದ ಅವನ ಮುರಿದುಹೋದ ಕನಸಿನ ತುಣುಕಿದೆ . ಕೈಹಿಡಿಯುವ ಕುಡಿತ
ಎಲ್ಲಿಗೆ ತಂದು ನಿಲ್ಲಿಸುತ್ತೆ ಅನ್ನೊ ಸತ್ಯವಿದೆ .
ನನ್ನ ಅವಳಒಲವಿಗೆ
ಕೊನೆಯೆ ಇರದ ಕಡಲಿಗೆ
ಸಾವೇ ಬರದ ನೆನಪಿಗೆ
ಅಂತ್ಯವು ಎಲ್ಲಿದೆ

.ಪ್ರತಿಯೊಬ್ಬರ ಬದುಕಿನ ಯಾವುದೊ ಒಂದು ಹಂತದಲ್ಲಿ ಪ್ರೀತಿ ಅನ್ನೊ ಎರಡುವರೆ ಅಕ್ಷರ ಹಾದು ಹೋಗಿರುತ್ತೆ ಆದರೆ ಅದಕ್ಕೆ ಸಾವು ದೇವ್ರಾಣೆಗು ಬರಲ್ಲ ಅದು ಹೋಗೊದು ಎನಿದ್ರು ನಮ್ಮೊಂದಿಗೆನೆ. ಇದನ್ನ ಸೂರಿ ಅದ್ಭುತವಾಗಿ ಪರದೆಗಿಳಿಸಿದ್ದಾರೆ ಕಿಟ್ಟಿ ಕೂಡ ಅಷ್ಟೇ ಅದ್ಭುತವಾಗಿಸಿನಿಮಾ ಪೂರಾ ಆವರಿಸಿದ್ದಾರೆ ಕಿಟ್ಟಿ ಅಭಿನಯ ಆ ಕಂಠ ಸಿನಿಮಾ ನೋಡಿ ಅಚೆ ಬಂದರು ಮತ್ತೆ ಮತ್ತೆ ಕಡುತ್ತೆ. ಕಳೆದು ಹೋದ ಯಾರೊ ತಟ್ಟನೆ ನೆನಪಿನಂಗಳಕೆ ಲಗ್ಗೆ ಹಾಕುತ್ತಾರೆ. ಅದು ಸೂರಿ ನಮ್ಮನ್ನು ಆವರಿಸುವ ರೀತಿ. ಈ ಕೆಲಸ ಬೇರೆ ಯಾರಿಂದಲು ಸಾಧ್ಯವಿಲ್ಲ. ಸರಳವಗಿ ಹೇಳುವುದಾದರೆ " ಇದು ಬೆಂದ ಮನಸ್ಸುಗಳಿಗೆ ಒಂದು ಸಾಂತ್ವನದ
ಕೈಗನ್ನಡಿ, ಪ್ರೀತಿಯ ಮತ್ತೊಂದು ಮಗ್ಗಲು
ಒಂದೊಂದೆ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ

Sunday, February 17, 2008

ನಿಟ್ಟುಸಿರು
ತುಟಿಯಂಚಲಿ ನಗು ವಿಷವಾಗಿದ್ದು
ಕಣ್ಣಂಚ ಪ್ರೀತಿಯ ಪೊರೆ ಕಳಚಿ ಬಿದ್ದದ್ದು
ನೆನಪಾದಾಗಲೆಲ್ಲ ನನ್ನೆದೆಯ ನಿಟ್ಟುಸಿರು ಅಲ್ಲೇ ಸಾಯುತ್ತಿತ್ತು
ಮುಗಿದು ಹೋದ ಹಾಡಲ್ಲಿ
ಕೊಳೆತು ಹೋದ ಪ್ರೀತಿಯದೆ ವಾಸನೆ
ನನ್ನೆದೆಯಲಿ ಅದರದೆ ವೇದನೆ
ಗೋರಿಯೆಡೆಗೆ ಕೈಹಿಡಿದು ನಡೆಸಿದ ನಿನ್ನ ಪ್ರೀತಿಯ ಪರಿ
ನೆನಪಾದಾಗಲೆಲ್ಲ ನನ್ನೆದೆಯ ನಿಟ್ಟುಸಿರು ಅಲ್ಲೇ ಸಾಯುತ್ತಿತ್ತು

ನನ್ನೆದೆಗೆ ನೀ ತುಟಿಯಿಟ್ಟಾಗ
ನಿನ್ನ ಕಣ್ಣಲ್ಲಿ ಮೂಡಿದ್ದು ಪ್ರೀತಿಯೊ? ಅದರಾಚೆಯ ಮೋಸವೊ?

ನನ್ನಿ ಕತೆ ದಿನವೂ ಕೇಳುವ ಈ ಮಾತು ಬಾರದ
ಗೋರಿಗಳಿಗೂ ಒಳಒಳಗೆ ಕುಹುಕದ ನಗೆ
ಗೋರಿಯಾಳದಲ್ಲಿ ಮತ್ತೆ ನನ್ನೆದೆಯ ನಿಟ್ಟುಸಿರು ಸಾಯುತ್ತಿತ್ತು


Thursday, January 31, 2008

ಆದರೂ ಉಸಿರಾಡುತ್ತಿದ್ದೆ ನಾ.............


ಉಸಿರಾಡುತ್ತಿದ್ದೆ
ಕನವರಿಸುತ್ತಿದ್ದೆ
ನಿನಗಾಗಿ ಮಿಡಿಯುತ್ತಿದ್ದೆ
ಹೇಗೆ ಹೇಳಲಿ ನಿನಗೆ
ನಾನಾಗಲೇ ಹೆಣವಾಗಿದ್ದೆ


ನದಿ ಮನಸಿನ ನೀ
ಹರಿಯುತ್ತಿದ್ದೆ ಮೋಹದ ಕಡಲೆಡೆಗೆ
ಹಳ್ಳದಂತೆ ನಿಂತಿದ್ದೆ ನಾ
ಕೊಚ್ಚಿಕೊಂಡು ಹೋದೆ ನೀ!


ನಿನ್ನೊಂದಿಗೆ ಹರಿಯುತ
ಜಲಪಾತದಂಚಿಗೆ ತಲುಪಿದೆ ನಾ
ನೀನೆನೋ ಭೋರ್ಗರೆದೆ
ನಿನ್ನೊಂದಿಗೆ ಬಂದ ನಾ ಧುಮುಕಿ ಹೆಣವಾದೆ!


ಆದರೂ ಉಸಿರಾಡುತ್ತಿದ್ದೆ ನಾ
ಕನವರಿಸುತ್ತಿದ್ದೆ
ನಿನಗಾಗಿ ಮಿಡಿಯುತ್ತಿದ್ದೆ
ಹೇಗೆ ಹೇಳಲಿ ನಿನಗೆ
ನಾನಾಗಲೇ ಹೆಣವಾಗಿದ್ದೆ


Wednesday, January 23, 2008

ವಿಮರ್ಶೆಗೊಂದು ವಿಮರ್ಶೆ ಅನ್ಕೊಬಹುದು!ತುಂಬಾ ಹಳೆಯ ವಿಷಯವೇನಲ್ಲ. ಮೊನ್ನೆಯ ಮೊನ್ನೆಯ ಮಾತು ಒಂದು ತಮಿಳು ಚಿತ್ರದ ಬಗ್ಗೆ ನಮ್ಮ ದೇವಶೆಟ್ಟಿ ಎಂಬ (ವಿ)ಚಿತ್ರ ವಿಮರ್ಶಕರು ವಿಜಯ ಕರ್ನಾಟಕ ಪತ್ರಿಕೆಯ ತುಂಬ ಹೇತರಾಡಿ ಮಾಡಿದ್ರು ಕಡೆಗೆ ಸಿನಿಮಾ ನೋಡಿದರೆ ದೇಹದ ಯಾವ ಭಾಗದಿಂದ ನಗಬೆಕು ಅಂತ ತಿಳಿಲಿಲ್ಲ. ಇನ್ನು ಮೂಲ ವಿಷಯ ಮೊನ್ನೆ ಶುಕ್ರುವಾರ ಬಿಡುಗಡೆಯಾದ ನಮ್ಮೆಲ್ಲರ ಹೆಮ್ಮೆಯ ನಿರ್ದೇಶಕ ಯೋಗರಾಜ ಭಟ್ರ ಗಾಳಿಪಟದ ಚಿತ್ರ ವಿಮರ್ಶೆಯನ್ನ ನಮ್ಮ ದೇವಶೆಟ್ಟಿಯವರು ಶನಿವಾರವೇ ಬರೆದರು "ಮುಂಗಾರುಮಳೆ ಹ್ಯಾಂಗೋವರನಿಂದ ಭಟ್ಟು ಇನ್ನು ಹೊರ ಬಂದಿಲ್ಲ" ಇದು ಚಿತ್ರದ ಒನ್ ಲೈನ ವಿಮರ್ಶೆಯಂತೆ ಅದೂ ಮುಖಪುಟದಲ್ಲಿ ಬಂತು ಇದು ಮುಖಪುಟದ ವಿಷಯವಾ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಶುರುವಾದ ತಕ್ಷಣಕ್ಕೆ ತಿಳಿಯುವ ವಿಷಯವೆಂದ್ರೆ ಇದು ಮುಂಗಾರುಮಳೆಯಲ್ಲ ಅಂತ ಹಾಗಂತ ಚಿತ್ರನೋಡಿದ ಪ್ರತಿಯೊಬ್ಬರು ಹೇಳ್ತಾರೆ. ಈ ಶೆಟ್ರು ಮುಂಗಾರುಮಳೆನಾ ತಲೆಲಿಇಟ್ಟುಕೊಂಡು ಗಾಳಿಪಟ ನೋಡಿದ್ರೆ ಅದು ಯೋಗರಾಜ ಭಟ್ರ ತಪ್ಪಾ. ಅಥವಾ ಸಿನಿಮಾ ನೋಡೊಕೆ ಅಂತ ಹೋದಾಗ ಶೆಟ್ರಿಗೆ ಯಾರಾದ್ರೂ ಅಮೇದ್ಯ ಸೇವನೆ ಮಾಡಿಸಿ ಈ ರೀತಿ ಬರೆಸಿದ್ರಾ ಇದನ್ನ ಶೆಟ್ರೆ ಹೇಳಬೇಕು. ಅದೇ ಹಸಿರು, ಅದೇ ಮಳೆ, ಅದೇ ಗಾಳಿ, ಅದೇ ಹಸಿ ಹಸಿ, ಅದೇ ಮಾತು ಅಂತ ಬರಿತಿರಲ್ಲಾ ಮಾತೆತ್ತಿದರೆ ವಿದೇಶ ಅನ್ನೊ ನಮ್ಮ ನಿರ್ದೇಶಕರಿಗಿಂತ ಕರ್ನಾಟಕದಲ್ಲೇ ಇಷ್ಟೊಂದು ಜಾಗಗಳಿವೆ ಅಂತ ತೋರಿಸಿದ್ದು ತಪ್ಪಾ ವಿಮರ್ಶಕರೆ. ಅಥವಾ ನಿಮಗ್ಯಾವುದಾದರು ಹೊಸಾ ಲೊಕೆಶನ್ ಗೊತ್ತಾ ಹ್ಯಾಗೆ? . ಅಲ್ಲಾರಿ ಮುಂಗಾರುಮಳೆ ಸಿನಿಮಾ ಬರೊದಕ್ಕಿಂತ ಮುಂಚೆ ಅದೆ ಮಚ್ಚು, ಅದೇ ಕೊಲೆ, ಅದೇ ಹಳಸಲು ಡೈಲಾಗು, ಅದೇ ಭೂಗತ ಜಗತ್ತು ಅಂತ ರಕ್ತದ ಮಡುವಿನಲ್ಲಿ ಬಿದ್ದು ವದಾಡ್ತಾ ಇದ್ರಲ್ರೀ ಆಗೆಲ್ಲೆದ್ರಿ ? ಓಹೋ ಕ್ಷಮಿಸಿ ಬಹುಶಃ ನೀವು ಆತ್ಮಚರಿತ್ರೆ ಬರೆಯುವುದರಲ್ಲಿ ಬಿಜಿ ಇದ್ರಿ ಅಂತ ಕಾಣುತ್ತೆ. ಕ್ಯಾಮರಾ ಮನ್ ಅಲ್ಲಿಂದ ಇಲ್ಲಿಗೆ ಕರೆಸಿ ಕೊಟ್ಟಿದ್ದು ಇಷ್ಟೇನಾ ಅಂತ ಕೇಳ್ತಿರಲ್ಲಾ, ಒಂದು ಕನ್ನಡ ಸಿನಿಮಾನಾ ಇದಕ್ಕಿಂತ ಅದ್ಭುತವಾಗಿ ಹ್ಯಾಗೆ ತೋರಿಸೊದು ಅಂತ ಸ್ವಲ್ಪಾ ನಮಗೂ ಹೇಳ್ತಿರಾ ವಿಮರ್ಶಕರೇ. ಮನುಷ್ಯರಲ್ಲಿ ವಿಶಾಲ ಮನೋಭಾವಾ ಅಂತ ಒಂದು ಇರುತ್ತೆ ಅದರ ಬಗ್ಗೆ ನಿಮಗೆನಾದ್ರೂ ಗೊತ್ತಾ. ಗಂಡು ಹುಡುಗಿ, ಕಪ್ಪೆ ಮುಖದವಳು, ಏನ್ರಿ ನೀವು ಒಬ್ಬ ಜವಾಬ್ದಾರಿಯುತ ಪತ್ರಕರ್ತರಾಗಿ ಪತ್ರಿಕೆಯಲ್ಲಿ ಹೆಣ್ಣುಮಕ್ಕಳನ್ನ ಕರೆಯುವ ರೀತಿಯಾ ಇದು. ಅಕಸ್ಮಾತ ಈ ಸಿನಿಮಾದಲ್ಲಿ ನಿಮ್ಮ ಮನೆಯ ಹೆಣ್ಣುಮಕ್ಕಳು ಇದ್ದಿದ್ರೆ ಹೀಗೆಲ್ಲಾ ಬರಿತಿದ್ರಾ ಸಾರ್. ಕಪ್ಪೆ ಮುಖದವರು, ಅತೀಲೋಕ ಸುಂದರಿಯರು ಎಲ್ಲರೂ ಮನುಷ್ಯರೆ ಸರ್ ನಿಮಗೆ ಹುಡುಗಿಯರು ಅಂದ್ರೆ ಇಂದ್ರನ ಆಸ್ಥಾನದ ಅಪ್ಸರೆಯರೇ ಆಗಬೇಕೊ?? ಚಿತ್ರದಲ್ಲಿ ಹಂದಿ ಅನವಶ್ಯಕ ಅಂತೀರಲ್ಲಾ ಕಥೆ ಇರೋದೆ ಅಲ್ಲಿ ಮತ್ತು ಅಷ್ಟು ಸಣ್ನ ಕಥಾ ಎಳೆಯಿಂದ ಕನ್ನಡಕ್ಕೆ ಒಂದು ಟೆಕ್ನಿಕಲ್ಲಿ ಅದ್ಭುತ ಎನಿಸುವಂತಹ ಚಿತ್ರ ಕೊಟ್ರು ಅಂತ ನಿಮಗೆ ಅನಿಸಲೇ ಇಲ್ವಾ. ಚಿತ್ರದಲ್ಲಿ ಗಣೇಶನಿಗೆ ಜಾಸ್ತಿ ಇದೆ ನಿಜ ಆದ್ರೆ ಅದು ಕಮರ್ಷಿಯಲ್ ವಿಷಯ ಅಕಸ್ಮಾತ ಗಾಳಿಪಟಕ್ಕೆ ನೀವು ನಿರ್ದೇಶಕರಾಗಿದ್ರೆ ನೀವು ಅದನ್ನೇ ಮಾಡತಿದ್ರಿ. ಸ್ವಾಮಿ ನಿಮ್ಮ ವಿಮರ್ಶೆಯ ಗಾಳಿಪಟದ ಸೂತ್ರ ಕಿತ್ತು ಅಲ್ಲೆಲ್ಲೊ ಪಕ್ಕದ ರಾಜ್ಯದಲ್ಲಿ ಬಿದ್ದಿದೆ ಮೊದಲು ಅದನ್ನ ಹುಡುಕಿ ತನ್ನಿ. ಹೊಗಳ್ತಾ ಇದ್ರೆ ನಿಮ್ಮನ್ನ ಹೊಗಳ್ತಾನೆ ಇರ್ಬೆಕು ಅನ್ಸುತ್ತೆ. ಹೋಗಿ ಸಾರ್ ಇನ್ನೊಂದೆರಡು ಜೀವನಚರಿತ್ರೆ ಬರೆದು ಬನ್ನಿ ಆಮೇಲೆ ಇದ್ದೇ ಇದೆ ನಿಮ್ಮ ವಿಮರ್ಶೆ ಬರೆಯೋದು.ಕನ್ನಡಿಗರಾಗಿ ಕನ್ನಡಿಗರ ಬಗ್ಗೆ ಇಷ್ಟೊಂದು "ವಿಷ" ಸರಿ ಅಲ್ಲ ಹೌದು ನೀವು ಕನ್ನಡಿಗರೆ ತಾನೆ? ಅಲ್ಲಾ ನನಗೆ ಗೊತ್ತಿಲ್ಲಾ

ಕೊನೆಯದಾಗಿ ಗಾಳಿಪಟದಲ್ಲಿ ನಿವು ಗಂಡುಹುಡುಗಿ ಅಂತ ಹೆಸರಿಸಿರೊ ನೀತು ಸ್ಟೈಲ್ ನಲ್ಲೆ ನಿಮ್ಮ ಚಿತ್ರ ವಿಮರ್ಶೆಗೆ ತಡವಾಗಿಯಾದ್ರೂ ನನ್ನ ಕಡೆಯಿಂದ ದೊಡ್ಡದಾಗಿ ಥೂ................

Sunday, January 20, 2008

ನದಿಯ ನೆನಪಿನ ಹಂಗು


ನದಿಗೆ ನೆನಪಿನ ಹಂಗು ಕಾದಂಬರಿಯಾ, ಕಥೆಯಾ, ಅಥವಾ ನಮ್ಮಂತೆ ನಮ್ಮೊಳಗಿನೊಬ್ಬನ ಆತ್ಮಕಥೆಯಾ . ಇಲ್ಲಾ ಅದು ಇಂತಹದೆ ಎಂದು ಮಾತಿನಲ್ಲಿ ಹೇಳುವುದಕ್ಕೆ ಸಾದ್ಯವಿಲ್ಲ ಅನ್ನ್ಸುತ್ತೆ. ಪರಿಸರ ಅದನ್ನು ಉಳಿಸುವುದಕ್ಕೆ ಹೋರಾಡುವ ಹೋರಾಡುತ್ತಲೇ ಜ್ಞಾನೋದಯವಾದವನ ಹಾಗೆ ಮಾತನಾಡುತ್ತ ತನ್ನನ್ನು ತಾನೆ ಪ್ರಶ್ನಿಸಿಕೊಳ್ಳವ ಪತ್ರಕರ್ತ ಆನಂದ ನಮ್ಮೆಲ್ಲರಲ್ಲೂ ಇರಬಹುದಾ ಅಂತ ಒಂದು ಕ್ಷಣ ಅನ್ನಿಸದೆ ಇರುವುದಿಲ್ಲ. ಕಾದಂಬರಿ ಓದುತ್ತಾ ಸಾಗಿದ ಹಾಗೆ ಸೋಮಯಾಜಿಗಳು ಅವರ ಮಗ ಆನಂದ ಆನಂದನ ಪ್ರೇಯಸಿ ಸುಗಂಧಿ...... ಈ ಮೂರು ಪಾತ್ರಗಳು ಅದೆಷ್ಟು ಕಾಡುತ್ತವೆ . ಸುಗಂಧಿ ಆನಂದರ ಸಂಬಂಧವನ್ನು ಮುಗಿಸಲು ಸೋಮಯಾಜಿಗಳು ಕೊಡುವ ಕಾರಣಗಳು ಹೂಡುವ ತಂತ್ರಗಳು, ಸುಗಂಧಿ ಆತ್ಮಹತ್ಯ ಮಾಡಿಕೋಂಡ ನಂತರ ತಮ್ಮನ್ನು ತಾವೆ ಸಂತೈಸಿಕೊಳ್ಳುವ ರೀತಿ ಅಸಹಾಯಕ ತಂದೆಯ ಹತಾಶ್ ಪ್ರಯತ್ನಗಳಂತೆ ಕಾಣುತ್ತವೆ. ಕಾದಂಬರಿಯ ಮೊದಲಿಗೆ ಬರುವ ಸದಾನಂದ ರೈ ಮಗಳು ವಿಣಾಸರಸ್ವತಿ ಅವಳ ಗಂಡ ನಾಗೇಶ್ ಮಯ್ಯ ನಿರಂಜನನ್ನು ಕೊಲ್ಲಿಸಿದ್ದಾರೆ ಎನ್ನುವ ಗಾಂಪರ ಗುಂಪು ಅದಕ್ಕಾಗಿ ಒಂದು ಹೋರಾಟವೆಂಬ ಹಾರಾಟ ಎಲ್ಲಾ ವಿಚಿತ್ರವಾಗಿ ಕಾಣುತ್ತವೆ. ನಾನಿಲ್ಲಿ ಕಾದಂಬರಿಯ ವಿಶ್ಲೆಷಣೆ ಮಾಡುತ್ತಿಲ್ಲ ಆ ತರಹದ ಘಟನೆಗಳು ನಿಜ ಜೀವನದಲ್ಲಿ ನಡೆಯುತ್ತಲೆ ಇರುತ್ತವೆ ಜೋಗಿಯವರು ಅದನ್ನೆ ಹೇಳುತ್ತಾರೆ ಆದರೆ ಕೇಳೊರು ಯಾರು? ರವಿ ಬೆಳಗೆರೆಯವರು ತಮ್ಮ ಒಂದು ಬರಹದಲ್ಲಿ ಕಾದಂಬರಿಕಾರನಾಗುವವನಿಗೆ ಏನು ಬರದಿದ್ದರು ಸ್ವಲ್ಪ ಸುಳ್ಳು ಹೇಳುವುದಕ್ಕೆ ಬರಬೇಕು ಎಂಬರ್ಥದಲ್ಲಿ ಬರೆಯುತ್ತಾರೆ ಇಲ್ಲಿ ಜೋಗಿಯಯರು ಆ ಮಾತನ್ನು ಸುಳ್ಳು ಮಾಡಿದ್ದಾರೆ. ಇದು ಅವರ ಕನಸೊ ಕಲ್ಪನೆಯೊ ಅಥವಾ ನಾನು ಅದನ್ನು ಹೀಗೆ ಅರ್ಥೈಸಿಕೊಳ್ಳುತ್ತಿದೆನಾ? ಗೊತ್ತಿಲ್ಲ ಅವರು ಪರಿಸರ ಉಳಿಸಿ ಅಂತ ಆನಂದ ಮೂಲಕ ಹೇಳುತ್ತಾರೆ. ನಾವು ಧರ್ಮ ಜಾತಿಗಳನ್ನು ಬಿಟ್ಟು ಬರಲಾರದಷ್ಟು ದೂರ ಸಾಗಿದ್ದೆವೆ ಎಂದು ಗೋಪಾಲಕೃಷ್ಣ ತೋಳ್ಪಡಿತ್ತಾಯರ ಮುಖಾಂತರ ಹೇಲಲು ಪ್ರಯತ್ನಿಸುತ್ತಾ ಸಾಗುತ್ತಾರೆ. ಇನ್ನೂ ಸ್ವಾಮಿಗಳು ಅವರ ಕರ್ಮಕಾಂಡಗಳನ್ನ ಮತ್ತು ಅವರು ಮನುಷ್ಯರೇ ಎಂಬುದನ್ನ ವಿದ್ಯಾನಂದರ ಮುಖೆನ ಹೇಳುವ ಪ್ರಯತ್ನ ಪಟ್ಟಿದ್ದಾರೆ. ರಘುನಂದನ ನರ್ಮದೆ ಅವರ ನಡುವಿನ ಪ್ರೇಮಕಹಾನಿ. ನರ್ಮದೆ ತನ್ನ ತಂದೆ ಗೋಪಾಲಕೃಷ್ಣ ಸೋಮಯಾಜಿಯ ಸಾವಿನಿಂದ ತನ್ನ ಸ್ಥಿಮಿತ ಕಳೆದುಕೊಳ್ಳುವುದು . ರಘು ನರ್ಮದೆಯನ್ನು ಮದುವೆಯಾಗಿ ಎರಡುವರೆ ತಿಂಗಳಿಗೆ ಅವಳಿಗೆ ನಾಲ್ಕು ತಿಂಗಳು ಅಂತ ಗೊತ್ತಾದಾಗ ಆ ಮಗು ನನ್ನದಲ್ಲ ನರ್ಮದೆ ನನ್ನ ಜೊತೆ ನಾಟಕವಾಡುತ್ತಿದ್ದಾಳಾ ಹೀಗೆಲ್ಲ ಯೋಚನೆ ಮಾಡುತ್ತಾನೆ. ಆದರೆ ಓದುವು ಮನಸ್ಸಿಗೆ ಒಂದು ಹೊಲಸು ಅನ್ನಬಹುದಾದಂತಹ ಯೋಚನೆ ಬರುತ್ತದೆ. ಗೋಪಾಲಕೃಷ್ಣ ಸೋಮಯಾಜಿ ಮಗಳನ್ನು ಮೋಹಿಸಿ ಆತ್ಮಹತ್ಯ ಮಾಡಿಕೊಂಡನೆ? ಅದರಿಂದಾಗಿಯೆ ನರ್ಮದೆ ತನ್ನ ಸ್ಥಿಮಿತ ಕಳೆದುಕೊಂಡಳೆ? ಈ ಥರ ನನಗೆ ಗೊತ್ತು ಇದು ತೀರ ಕೀಳುಮಟ್ಟದ ಯೊಚನೆ ಎಂದು ಆದರೂ ತಳ್ಳಿ ಹಾಕುವಂತಿಲ್ಲವಲ್ಲ. ಒಟ್ನಲ್ಲಿ ಕಾದಂಬರಿ ಕಾಡುತ್ತದೆ, ಮನಸ್ಸಿನಲ್ಲಿ ನದಿಯಂತೆ ಭೋರ್ಗರೆಯುತ್ತದೆ ವರ್ಷಕ್ಕೊ ಎರಡು ವರ್ಷಕ್ಕೊ ಒಮ್ಮೆ ಶ್ರಾವಣ ಮಾಸದ ಸೋಮವಾರದಂದು ಧರ್ಮಸ್ಥಳಕ್ಕೆ ಹೋಗಿ ಮುಡಿ ಕೊಟ್ಟು ನೇತ್ರಾವತಿಯಲ್ಲಿ ಮಿಂದು ಧನ್ಯರಾಗುವವರು, ಸಮಾಜ ಸುಧಾರಣೆಯೇ ನಮ್ಮ ಜನ್ಮಸಿದ್ದ ಹಕ್ಕು (ಹಾಗಂತ ಅಂದು ಕೊಂಡಿರುವ ಜನ)ಎಲ್ಲರೂ ಓದಬಹುದಾದಂತಹ ಕಾದಂಬರಿಯ ತರಹದಂತಹ ಬರಹ ನದಿಯ ನೆನಪಿನ ಹಂಗು . ಇಲ್ಲಿ ಪುಸ್ತಕದ ಬಗ್ಗೆ ನನಗನಿಸಿದ್ದನು ಗೀಚಿದ್ದೆನೆ . ಮತ್ತೊಬ್ಬರಿಗೆ ಬೇರೆ ರೀತಿ ಅರ್ಥವಾಗಬಾರದು ಅಂತ ನಿಯಮವೆನಿಲ್ಲ ಅಲ್ವಾ? ಪುಸ್ತಕ ಓದಿ ದಕ್ಷಿಣ ಕನ್ನಡದ ಯಾತ್ರೆ ಮಾಡಿ ಬಂದಂತಾಗುತ್ತೆ ಜೋಗಿಯವರಿಂದ ಇನ್ನಷ್ಟು ಇಂತಹ ಬರಹಗಳನ್ನು ನೀರಿಕ್ಷಿಸುತ್ತಾ

Monday, January 7, 2008

ಪ್ರೀತಿ ಮಾಡಬಾರದು


ರಾಜುವಿನ ಎಲ್ಲ ಪ್ರಯತ್ನಗಳು ವಿಪಲವಾಗಿದ್ದವು. ಅವನು ಅವಳಿಗಾಗಿ ತನ್ನ ಸ್ನೇಹಿತರ ವಲಯದಲ್ಲಿ ಬೇರೆಯದೆ ರೀತಿಯಲ್ಲಿ ಚರ್ಚೆಗೊಳಪಡುತ್ತಿದ್ದ.ಆ ವಿಷಯ ಅವನಿಗೂ ತಿಳಿದೆ ಇತ್ತು ಆದರೆ ಏನೂ ಮಾಡಲಾಗದ ಪರಿಸ್ಥಿತಿ. ವಿಷಯ ಅವನ ಆಫೀಸಿನಲ್ಲಿ ಘಟಿಸಿದ್ದಾಗಿತ್ತು. ಸತತವಾಗಿ ಎರಡು ವರ್ಷ ಜೊತೆಗಿದ್ದಿದ್ದರಿಂದಲೊ ಮತ್ತೊಂದಕ್ಕೊ ರಾಜುಗೆ ಅವಳ ಮೇಲೆ ಒಲವು ಮೂಡಿತ್ತು ಅದನ್ನು ಅವಳಿಗೆ ಮೊದಲ ಬಾರಿಗೆ ತಿಳಿಸಿದಾಗ ಸುಮ್ಮನೆ ನಕ್ಕು ಮುಂದೆ ಸಾಗಿದ್ದಳು. ಅಷ್ಟಕ್ಕೆ ಇವನು ಸುಮ್ಮನಾಗಿದ್ದರೆ ಚೆನ್ನಾಗಿತ್ತೆನು. ಆದರೆ ಇವನ ತಲೆಯಲ್ಲಿ ಪ್ರೀತಿಯ ಭೂತ ಸವಾರ, ಮತ್ತೊಮ್ಮೆ ಲಂಚ್ ಟೈಮಿನಲ್ಲಿ ಅದೇ ವಿಷಯವಾಗಿ ಅವಳೊಂದಿಗೆ ಮಾತನಾಡಿದಾಗ ಅವಳು ಎಲ್ಲರೆದುರು ಅವನನ್ನು ಹಿಗ್ಗಾಮುಗ್ಗಾ ಬೈದಾಡಿ, ಮತ್ತೊಮ್ಮೆ ಈ ವಿಷಯವಾಗಿ ಮಾತನಾಡಿದರೆ ನಾನು ಬೇರೆಯ ರೀತಿಯಲ್ಲಿ ಯೋಚಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದೆ ಕೊನೆ ಆಲಿಂದ ಸೀದಾ ಮನೆಗೆ ಬಂದವನು ಮೂರು ದಿನಗಳಿಂದ ಆಫೀಸಿಗೆ ಹೋಗಿರಲಿಲ್ಲ.
ಮೂರನೇಯ ದಿನ ಅವನಿಗೆ ಅದೆನೆನ್ನಿಸಿತೋ ಮನೆಯಿಂದ ಹೊರಬಿದ್ದವನೆ ನೇರ ಕೆ ಅರ್ ಮಾರುಕಟ್ಟೆಗೆ ಹೋಗಿ ಒಂದು ಉದ್ದನೇಯ ಹಗ್ಗ , ಅಲ್ಲಿಂದ ಮೆಜೆಸ್ಟಿಕ್ಕಿಗೆ ಹೋಗಿ ಸೀಡ್ಸ್ ಅಂಗಡಿಯಲ್ಲಿ ಹತ್ತಿಗೆ ಹೊಡೆಯಲಿಕ್ಕೆ ಎಂದು ಒಂದು ಲೀಟರನಷ್ಟು ಮೆಟಾಸಿಡ್ ಔಷಧಿ, ಮುಂದೆ ತಿಗಳರ ಪೇಟೆಗೆ ಹೋಗಿ ಒಂದು ಹರಿತವಾದ ಚೂರಿ, ಹೀಗೆ ಎಲ್ಲವನ್ನೂ ಖರೀದಿಸಿ ಅಲ್ಲಿಂದಲೇ ಅವಳ ಮೊಬೈಲಿಗೆ ಒಂದು ರೂಪಾಯಿ ನಾಣ್ಯದ ದೂರವಾಣಿಯಿಂದ ಕರೆ ಮಾಡಿದ ಅತ್ತಲಿಂದ "ದಿಲ್ ಮೆ ಮೇರೆ ಹೈ ದರ್ದೆ ಡಿಸ್ಕೊ" ಎಂಬ ಹಾಡು ಬರುತ್ತಿತ್ತು. ಹಾಡು ನಿಂತು ಒಮ್ಮೆಲ್ಲೆ ಅವಳು ಉಲಿದಳು ಹಲೋ, ಅಷ್ಟೇ ಫೋನ ತುಂಡರಿಸಿ ಇವನು ಬಸ್ಟಾಪಿನ ಕಡೆಗೆ ನಡೆದ.
ಮನೆಗೆ ಬಂದವನೇ ತನಗೆ ಅತೀ ಇಷ್ಟವಾದ ಖಾರ್ಖಾರವಾದ ಚಿತ್ರಾನ್ನ ಮಾಡಿಕೊಂಡು ಕಡೆಯ ಬಾರಿಗೆಂಬಂತೆ ಸಾಕೆನಿಸುವಷ್ಟು ತಿಂದು ಮುಂದಿನ ಕೆಲಸದತ್ತ ಗಮನ ಹರಿಸಿದ. ಅವನ ಮೊಬೈಲಂತು ಮುರು ದಿನದಿಂದ ಫೋನ ಮಾಡಿದವರಿಗೆಲ್ಲ ಸ್ವಿಚ್ ಆಫ್ ಎಂದು ಹೇಳುತ್ತಿತ್ತು ಅದರಿಂದ ಅದರ ಕಡೆಗೆ ಹೆಚ್ಚು ಗಮನ ಕೊಡದೆ ಮಾರ್ಕೆಟಿನಿಂದ ತಂದ ಹಗ್ಗವನ್ನು ಕೈಗೆ ತೆಗೆದುಕೊಂಡು ಪ್ಯಾನಿನ ಕಡೆಗೆ ನಡೆದ. ಮೊದಲು ಪ್ಯಾನಿಗೆ ಹಗ್ಗ ಕಟ್ಟಲು ಅನುಕೂಲವಾಗುವಂತೆ ಉದ್ದನೇಯ ಸ್ಟೂಲ ಮೇಲೆ ನಿಂತು ಪ್ಯಾನಿನ ಕುತ್ತಿಗಿಗೆ ಹಗ್ಗ ಬಿಗಿದ ನಂತರ ದೊಡ್ಡ ಸ್ಟೂಲನ್ನು ಪಕ್ಕಕ್ಕೆ ಇಟ್ಟು ಚಿಕ್ಕ ಸ್ಟೂಲನ್ನು ಪ್ಯಾನಿನ ಅಡಿಗೆ ಹಕಿ ಹಗ್ಗವನ್ನು ತನ್ನ ಕುತ್ತಿಗೆಯ ಸಮನಂತರಕ್ಕೆ ತಂದು ಹಗ್ಗಕ್ಕೆ ಕುಣಿಕೆ ಹಾಕಿ ಅದನ್ನು ತನ್ನ ಕೊರಳಿಗೆ ಹಾಕಿಕೊಂಡು ನೋಡಿದ ಸರಿಯಾಗಿತ್ತು ಆಮೇಲೆ ಹಗ್ಗವನ್ನು ಕೈಯಲ್ಲಿ ಹಿಡಿದುಕೊಂಡು ಮಿಟಿದ ಗಟ್ಟಿಯಾಗಿತ್ತು ನಂತರ ಹಗ್ಗವನ್ನು ಕೈಯಲ್ಲಿ ಹಿಡಿಕೊಂಡೆ ಕಾಲಿನಿಂದ ಕೆಳಗೆ ಇದ್ದ ಸ್ಟೂಲಿಗೆ ಝಾಡಿಸಿದ ಅದು ಪಕ್ಕಕ್ಕೆ ವಾಲಿದಾಗ ತೃಪ್ತಿಯ ನಿಟ್ಟುಸಿರು ಬಿಟ್ಟು ಸ್ಟೂಲನ್ನು ಮತ್ತೆ ಮೊದಲಿನ ಜಾಗಕ್ಕೆ ಇಟ್ಟು ಕೊರಳಿಗೆ ಕುಣಿಕೆ ಬಿಗಿದುಕೊಂಡಾಗ ಬಿಗಿಯಾದ ಕುಣಿಕೆ ಗಂಟಳನಾಳಕ್ಕೆ ಒತ್ತಿದಂತಾಗಿ ಆ ಘನ ಕಾರ್ಯವನ್ನ ಅಲ್ಲಿಗೆ ನಿಲ್ಲಿಸಿದ.
ಎದುರಿಗೆ ಟಿ ವಿ ತನ್ನ ಪಾಡಿಗೆ ತಾನು ವಟುಗುಡುತ್ತಿತ್ತು. ರಾಜು ಮೊದಲೆ ನಿರ್ಧರಿಸಿರುವಂತೆ ಈಗ ಮೆಟಾಸಿಡ್ ಪ್ರಯೋಗಕ್ಕೆ ಇಳಿದ. ಅಷ್ಟರಲ್ಲೆ ಟಿ ವಿ ಯಲ್ಲಿ ಶುರುವಾದ ವಾರ್ತೆಯಲ್ಲಿ ಒಬ್ಬ ಇವನಂತೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಕುಡಿದು ವಿಲವಿಲನೆ ಒದ್ದಾಡುತ್ತಿರುವುದನ್ನು ತೋರಿಸುತ್ತಿದ್ದರು. ಈ ಸಾವು ಇಷ್ಟೋಂದು ಯಾತನಾದಾಯಕ ವಾಗಿದ್ರೆ ಬೇಡ ಅಂತ ವಿಷದ ವಿಷಯವನ್ನು ಅಲ್ಲಿಗೆ ಸಮಾಪ್ತಿಗೊಳಿಸಿದ
ಈಗ ಅವನ ಕಣ್ಣು ಮೂರನೇಯ ವಸ್ತುವಿನತ್ತ ತಿರುಗಿತು ತಿಗಳರ ಪೇಟೆಯಿಂದ ತಂದಂತಹ ಚೂರಿ ನಾನಿರುವಾಗ ಚಿಂತೆ ಯಾಕೆ ಬಾ ಬಾ ಎನ್ನುವಂತೆ ಫಳ ಫಳನೆ ಹೊಳೆಯುತ್ತಿತ್ತು. ಇದರಿಂದಲಾದರು ತನ್ನ ಪ್ರಯತ್ನ ಸಫಲವಾಗಲಿ ಎಂದು ಚೂರಿ ಕೈಗೆತ್ತಿಕೊಂಡು ಅದರ ಹರಿತ ಪರೀಕ್ಷಿಸಲು ಬೆರಳಿನಿಂದ ಒಮ್ಮೆ ಸವರಿದ, ಕೈಕೆಂಪಾಗಿ ಕೈಯಿಂದ ರಕ್ತ ತೊಟ್ಟಿಕ್ಕಲಿಕ್ಕೆ ಶುರುವಾಯಿತು. ಚೂರು ಗಾಯವಾಗಿದ್ದಕ್ಕೆ ಇಷ್ಟೊಂದು ಯಮಹಿಂಸೆಯಾಗಬೇಕಾದರೆ ಇನ್ನೂ ಚೂರಿ ಎದೆಯಾಳಕ್ಕೆ ಇಳಿದರೆ ಇನ್ನೆಷ್ಟು ಯಾತನೆಯಾಗಲಿಕ್ಕಿಲ್ಲವೆಂದು ಅದನ್ನು ಅಲ್ಲಿಗೆ ಕೈಬಿಟ್ಟ.
ಒಮ್ಮೆಲೆ ಅವನಿಗೆ ತನ್ನ ಮೇಲೆಯೆ ನಾಚಿಕೆ ಬಂದು ಬಿಟ್ಟಿತು ಸಾಯುವುದಕ್ಕೂ ಆಗುತ್ತಿಲ್ಲ ತನ್ನಿಂದ ಎಂದು. ಮತ್ತೊಂದು ಕ್ಷಣಕ್ಕೆ ತನ್ನ ಮೇಲೆ ಕೋಪ ಬಂದಂತಾಗಿ ರಪರಪ ತನ್ನನ್ನು ತಾನೆ ಹೊಡೆದುಕೊಂಡು ವಿಕೃತವಾಗಿ ನರಿ ಉಳಿಡುವ ತರಹ ಅಳುತ್ತ ಕೂತು ಬಿಟ್ಟ ಹತ್ತು ನಿಮಿಷ ಅತ್ತು ಹಗುರಾಗಿದ್ದರಿಂದ ಅವನಲ್ಲಿ ಹೊಸ ಯೋಜನೆ ಮೂಡಿತ್ತು. ಕಣ್ಣಿರು ಒರೆಸಿಕೊಂಡು ತನ್ನ ಕೋಣೆಯಿಂದ (ಅವನ ಕೋಣೆ ಐದನೇಯ ಮಹಡಿಯಲ್ಲಿತ್ತು ಮತ್ತು ಅದೇ ಕೊನೆಯ ಮಹಡಿ) ಹೊರ ಬಂದವನೆ ಎದುರಿಗಿದ್ದ ಸೊಂಟದೆತ್ತರದ ಗ್ರಿಲ್ಲಿನ ಕಡೆಗೆ ನಡೆದ ಅಲ್ಲಿಂದ ಕೆಳಗೆ ನೆಗೆದರೆ ದೇಹ ನೆಲ ತಲುಪುವುದರ ಒಳಗೇ ದೇಹದಿಂದ ಪ್ರಾಣ ದೂರವಾಗುತ್ತದೆ ಎಂದು ಅವನ ಎಣಿಕೆಯಾಗಿತ್ತು. ಅಷ್ಟರಲ್ಲಿ ಅದೇ ಗ್ರಿಲ್ ಮೇಲೆ ಸರ್ಕಸ ಮಾಡುತ್ತಿದ್ದ ಒಂದು ಪುಟ್ಟ ಹಲ್ಲಿ ಆಯತಪ್ಪಿ ಕೆಳಗೆ ಬಿದ್ದು ತನಗೆ ಏನೂ ಆಗೇ ಇಲ್ಲವೆನ್ನುವಂತೆ ಅಲ್ಲಿಂದ ಹೊರಟು ಹೋಯಿತು. ಇದರಿಂದ ತಾನು ಇಲ್ಲಿಂದ ನೆಗೆದರೆ ಕೇವಲ ಕೈಕಾಲು ಮುರಿಯಬಹುದು ಎನಿಸಿ ಅದಕ್ಕೂ ಇತಿಶ್ರೀ ಹಾಡಿದ. ಈ ಎಲ್ಲ ಘಟನೆಗಳಿಂದ ಅವನ ನಿರ್ಧಾರವೇ ಬದಲಾದಂತಾಗಿ ಸಾಯುವ ಯೋಚನೆಯೇ ತಪ್ಪೆನಿಸಿತು ಒಂದೇ ಕ್ಷಣ ಅಷ್ಟೇ. ಮರುಕ್ಷಣವೇ ಮೂರು ದಿನದಿಂದ ಆಫೀಸಿಗೆ ಹೋಗದೆ ಇರುವುದು ಮತ್ತು ಅದಕ್ಕೆ ಕಾರಣ ಗೊತ್ತಿರುವ ಕಲೀಗ್ಸಗಳು ನಾನು ಮತ್ತೆ ಆಫೀಸಿಗೆ ಹೊದರೆ ಇನ್ನಷ್ಟು ಅವಮಾನ ಮಾಡುತ್ತಾರೆ ಎನಿಸಿ ತಾನು ಮಾಡುತ್ತಿರುವುದೆ ಸರಿ ಎನಸಿತು ಅವನಿಗೆ.
ಎಲ್ಲಾ ಪ್ರಯತ್ನಗಳು ವಿಫಲವಾಗಿ ಏನೂ ತೊಚದೆ ರಾಜು ಕೋಣೆಯ ಬೀಗ ಹಾಕಿ ಚಹಾ ಕುಡಿಯಲೆಂದು ರಸ್ತೆಯತ್ತ ನಡೆದ . ಬೇಕರಿಯಲ್ಲಿ ಚಹಾ ಕುಡಿಯುತ್ತ ರಸ್ತೆಯಲ್ಲಿ ರಭಸವಗಿ ಸಾಗುತ್ತುದ್ದ ವಾಹನಗಳ ಕಡೆಗೆ ನೋಡಿದಾಗ ಅವನ ಕಣ್ಣುಗಳು ವಿಚಿತ್ರವಾಗಿ ಮಿನುಗಿದವು. ಬಸ್ಸಿನ ಕೆಳಗೆ ತಲೆ ಸಿಕ್ಕು ಬಿಟ್ಟರೆ ಪ್ರಾಣ ಹೋಗಿದ್ದು ಸಹ ಗೊತ್ತಾಗುವುದಿಲ್ಲವೆನಿಸಿ ಅತ್ತ ಹೆಜ್ಜೆ ಹಾಕಿದ ಅಷ್ಟರಲ್ಲಿ ಅಪ್ಪ ಈ ತಿಂಗಳ ತನ್ನ ಕಣ್ಣಿಗೆ ಆಪರೇಷನ ಮಾಡೀಸಬೇಕು ಎಂದದ್ದು ನೆನಪಾಯಿತು ಸದ್ಯದ ತೊಂದರೆಗಿಂತ ಅದೇನು ಅಷ್ಟು ಮಹಾ ಅನಿಸಲಿಲ್ಲ ಅವನಿಗೆ.ಮತ್ತೆ ಮುಂದುವರೆದ ಪಾಪಿ ಚಿರಾಯು ಎನ್ನುವಂತೆ ಅವನು ಹೊಗುತ್ತಿದ್ದ ಹಾಗೆ ಟ್ರಾಫಿಕ್ಕಿನ ಕೆಂಪು ದೀಪ ಹತ್ತಿಕೊಂಡಿತು. ಸಿಗ್ನಲ್ ಬಿಳುವುದನ್ನೆ ಕಾಯುತ್ತ ಅವನ ಪಕ್ಕದಲ್ಲೆ ಸ್ಕೂಟಿಯ ಮೇಲೆ ಕುತಿದ್ದ ಒಂದು ಹೆಣ್ಣು ಆಕೃತಿ ಹೆಲ್ಮೆಟ್ ತೆಗೆದು ಅವನ ಕಡೆ ನೋಡಿ ಸಂತೋಷದಿಂದ ಕೂಗು ಹಾಕಿತು. ನೋಡಿದರೆ ಅವಳ ರಾಜುನನ್ನು ತಿರಸ್ಕರಿಸಿದವಳು. ಸ್ಸಾರಿ ರಾಜು ನಿನ್ನ ಅರ್ಥಮಾಡ್ಕೊಳ್ಳಕೆ ಆಗಲಿಲ್ಲ ನನ್ನಿಂದ ನಿನಗೆ ಏನೆನೋ ಅಂದು ಬಿಟ್ಟೆ ಸ್ಸಾರಿ ಡಿಯರ್. ನಿನಗೆ ಫೋನಮಾಡೋಣಂದ್ರೆ ಮೂರು ದಿನದಿಂದ ನಿನ್ನ ಫೋನ ಬೇರೆ ಸ್ವಿಚ್ ಆಫ್ ಅಂತ ಬರ್ತಿತ್ತು. ಮತ್ತೊಮ್ಮೆ ಸ್ಸಾರಿ ಕೇಳಿ ನಾನು ನಿನ್ನನ್ನು ಅಷ್ಟೇ ಪ್ರೀತ್ಸತಿನಿ ಕಣೊ ಅಂದಳು . ಹಾಂ!!!! ಅಷ್ಟೇ ಇವನ ಬಾಯಿಂದ ಹೊರಟ ವಾಕ್ಯ, ರಾಜು ತನ್ನ ಯಾತ್ರೆ ಮುಗಿಸಿ ಹೊರಟು ಹೋಗಿದ್ದ.

Sunday, January 6, 2008

ಕಾಡ ಬೆಳದಿಂಗಳು

ಅಳಿದು ಅಳಿದು ಪೋಪ ಮಕ್ಕಳಿದ್ದೇಕೆ
ತಿಳಿದು ಬುದ್ಧಿಯ ಪೇಳದ ಗುರುವೇಕೆ!

ಇದನ್ನು ಕಾಡಬೆಳದಿಂಗಳು ಸಿನಿಮಾದಲ್ಲಿ ಸರಸ್ವತಿ ಅಮ್ಮ ಮಕ್ಕಳಿಗೆ ಪಠಿಸುತ್ತಿರುತ್ತಾರೆ. ಮೇಲಿನ ಎರಡೇ ಸಾಲು ಸಾಕು ಈಗಿನದ್ದನು ಹೇಳಲು. ಸುಧೀಷ್ಣೆ ರಾಮೊಹಳ್ಳಿಗೆ ಕಾಲಿಟ್ಟಾಗ ಅಲ್ಲಿ ಕೇವಲ ವಯಸ್ಸಾದ ಹಿರಿ ತಲೆಗಳೆ ಕಾಣುತ್ತವೆ ಅವಳಿಗೆ. ಅವಳಿಗೆ ಸಹಾಯಕನಾಗಿ ದೊರೆಯುವ ಅದೇ ಹಳ್ಳಿಯ ಏಕೈಕ ಹುಡುಗ ಕರಿಯ ಸಹ ಬೆಂಗ್ಳೂರಲ್ಲಿ ಕೆಲಸ ಕೊಡಸ್ತಿರಾ ಅಂತ ಅವಳನ್ನೆ ಕೆಳ್ತಾನೆ. ಹಳ್ಳಿಯ ಯುವಕರು ತಾವು ಕಲೆತ ವಿದ್ಯೆಗೆ ಪ್ರಶಸ್ತ ಸ್ಥಳವೆಂದರೆ ಬೆಂಗಳೂರು ಎಂದು ಅಲ್ಲಿಗೆ ಹೋದೆರೆ. ಮತ್ತೊಂದು ಕಡೆ ರಾಮೊಹಳ್ಳಿ, ಪುಟ್ಟಳ್ಳಿ ಮುಂತಾದ ಸುತ್ತಮುತ್ತಲಿನ ಹಳ್ಳಿಗಳು ಸಂರಕ್ಷಿತ ಅರಣ್ಯಪ್ರದೇಶದಡಿಯಲ್ಲಿ ಬರುತ್ತವೆ ಎಂದು ಅಲ್ಲಿಯ ಜನರನ್ನು ಒಕ್ಕಲೆಬ್ಬಿಸುವ ಸರಕಾರದ ಪ್ರಯತ್ನದ ವಿರುದ್ಧ ಬೆಂಗಳೂರಿಗೂ ಹೋಗದೆ ಮನೆಯ ಮುಖವನ್ನೂ ನೋಡದ ಬೆರಳೆಣೆಕೆಯಷ್ಟು ಯುವಕರಿಂದ ಹೋರಾಟ. ಮಾಹಾನಗರ ಸೇರಿದ ಮಕ್ಕಳ ಪೋಷಕರ ಸಂದರ್ಶನವನ್ನು ತಿರುಚಿ ಪ್ರಸಾರ ಮಾಡಿ ಅದನ್ನೆ ಎನ್ ಕ್ಯಾಶ ಮಾಡಿಕೊಳ್ಳುವ ಮೀಡಿಯಾದವರ ಅತೀ ಬುದ್ಧಿವಂತಿಕೆ. ಇನ್ನೊಂದು ಕಡೆ ಸತ್ತವನು ತನ್ನ ಮಗ ಅಲ್ಲವೆಂದು ಹೇಳಿ ನಿಷ್ಕರುಣಿಯಾಗಿ ಕಾಣುವ ಸದಾಶಿವಯ್ಯನವರು ದ್ವೀತಿಯಾರ್ದದಲ್ಲಿ ಅವರು ಅದಕ್ಕೆ ಕೊಡುವ ಕಾರಣ"ಮಗ ಇನ್ನೂ ಬದುಕಿದಾನೆ ಅಂತ ತಿಳ್ಕೊಂಡೆ ನನ್ನ ಹೆಂಡತಿ ಇನ್ನೂ ಬದ್ಕಿದಾಳೆ ಅವಳಿಗೆ ಅವನು ಸತ್ತು ಹೋದ ಸುದ್ದಿ ಗೊತ್ತಾದ ದಿನವೇ ಅವಳು ಸತ್ತು ಹೋಗುತ್ತಾಳೆ" ಇಂತಹವೆ ಇನ್ನುಷ್ಟು ಹೃದಯಂಗಮ ದೃಶ್ಯಗಳಿವೆ ಕಾಡಬೆಳದಿಂಗಳು ಸಿನಿಮಾದಲ್ಲಿ.

ಎ ಸಿ ಕ್ಯಾಬಿನಲ್ಲಿ ಲ್ಯಾಪಟಾಪ ಮುಂದೆ ಕೂತು, ದೂರದಲ್ಲಿ ಎಲ್ಲೋ ವಿದೇಶದಲ್ಲಿರುವ ಬಾಸಗಳ ಬೈಗುಳಗಳನ್ನೆ ಹೋಗಳಿಕೆಯಾಗಿ ಸ್ವಿಕರಿಸಿ, ವಿಕೆಂಡುಗಳಲ್ಲಿ ಶಾಪಿಂಗು, ಮಲ್ಟಿಪ್ಲೆಕ್ಸು, ಪಬ್ಬು ಕ್ಲಬ್ಬು ಅಂತ ಸುತ್ತುವ ಬಹುತೇಕ ಜನರಿಗೆ ಅಪ್ಪ, ಅಮ್ಮ ನೆನಪಾಗುವುದು ಯಾವುದಾದರು ಹಬ್ಬಗಳಲ್ಲೋ ಅಥವಾ ಆನಿವರ್ಸರಿಗಳಲ್ಲೋ ಮಾತ್ರ. ಇನ್ನೂ ಕೆಲವೊಬ್ಬರಿಗೆ ಇವರನ್ನು ವಿದ್ಯಾವಂತರನ್ನಾಗಿ ರೂಪಿಸುವ ಅಪ್ಪ ಅಮ್ಮಂದಿರು ಅನ್ ಏಜುಕೆಟೆಡ್ ಓಲ್ಡ್ ಪೀಪಲ್ . ಇಂತಹವರೆಲ್ಲರೂ ಒಮ್ಮೆಯಾದರೂ ನೋಡಲೇಬೇಕಾದ ಚಿತ್ರ ಕಾಡಬೆಳದಿಂಗಳು ನೋಡಿದ ನಂತರ ಅಕಸ್ಮಾತ ಪಾಪಪ್ರಜ್ಞೆ ಅಂತ ಏನಾದರೂ ಕಾಡಿದರೆ ಅಪ್ಪ ಅಮ್ಮಂದಿರಿಗೆ ಒಂದು ಕ್ಷಮೆಯನ್ನಾದರೂ ಕೇಳಿ ತಕ್ಕ ಮಟ್ಟಿಗೆ ಪ್ರಾಯಶ್ಚಿತ್ ಪಡಬಹುದು ಕೆಲವೊಬ್ಬರಿಗೆ ಆ ಭಾಗ್ಯವು ಇರುವುದಿಲ್ಲ.

ದುರದೃಷ್ಟದ ಸಂಗತಿಯೆಂದರೆ ನಾವು ಇಂತಹ ಚಿತ್ರಗಳಿಗೆ ಕಲಾತ್ಮಕ ಚಿತ್ರಗಳೆಂದು ಹಣೆಪಟ್ಟಿ ಅಂಟಿಸಿಬಿಡುತ್ತೆವೆ. ಮೊದಲನೆದಾಗಿ ಅವುಗಳಿಗೆ ಚಿತ್ರಮಂದಿರಗಳು ಸಿಗುವುದಿಲ್ಲ ಅದರಿಂದಾಗಿಯೆ ಹೆಚ್ಚು ಜನರನ್ನು ತಲಪುವುದು ಇಲ್ಲ. ಸಿನಿಮಾ ನೋಡದವರು ಜೋಗಿಯವರ ಮನೆ http://jogimane.blogspot.com/2007/07/blog-post_26.html ಯಲ್ಲಿ ಈ ಕತೆಯನ್ನು ಓದಬಹುದು

Friday, January 4, 2008

ಯೋಗರಾಜ ಭಟ್,ರ ಇಷ್ಟೆಲ್ಲ ಅಲ್ಲ
ಆಗಿದ್ದೆ ಏಕಾಂಗಿ
ಆದರೆ ಇಷ್ಟೆಲ್ಲಾ ಅಲ್ಲ...
ಇದ್ದೆ ನಾ ಮಂಕಾಗಿ
ಆದರೆ ಇಷ್ಟೆಲ್ಲ ಅಲ್ಲ...

ನೀ ಕಣ್ಣಿಗೆ ಬೀಳುವ ಮೊದಲೂ ಕೂಡಾ
ಆಗಾಗ ಸುಮ್ಮನೆ ಸಾಯಬೇಕೆನಿಸುತ್ತಿತ್ತು...
ಆದರೆ ಇಷ್ಟೆಲ್ಲ ಅಲ್ಲ...

ಕಡಲ ಮದ್ಯ ಬಾಯಾರಿ ನಿಂತರೂ ಒಂತೊಟ್ಟು ನೀರಿಲ್ಲ
ಮೊದಲು ಮರುಭೂಮಿಯಲ್ಲಿದ್ದಾಗ
ದಾಹವೆಂದರೇನೆಂದೇ ಗೊತ್ತಿರಲಿಲ್ಲ...

ನೀ ಕಣ್ಣಿಗೆ ಬೀಳುವ ಮೊದಲೂ ಕೂಡಾ
ಕಾರಣವಿಲ್ಲದೇ ಎದೆ ಬರಡಾದ ಉದಾಹರಣೆಯಿತ್ತು...
ಆದರೆ ಇಷ್ಟೆಲ್ಲ ಅಲ್ಲ...
ನೀನೇಕೋ ನಿಲ್ಲಲಿಲ್ಲ
ಇನ್ನೆಂದೂ ನೀನಿಲ್ಲ...

ನೀ ದೂರನಡೆಯುವಾಗಿನ ನಿನ್ನ ಬಿಳಿಬೆನ್ನ ಮೇಲಾಣೆ
ಹಾಕಿ ಪ್ರಯೀಜನವಿಲ್ಲ...
ಆದರೂ ಆಣೆಯಿಟ್ಟು ಹೇಳುವೆ
ಈ ಹಾಳು ನಿಟ್ಟುಸಿರಿನ ದೆವ್ವಕ್ಕೆ
ನನ್ನೆದೆ ಬಿಟ್ಟರೆ ಬೇರೆ ಮನೆಯಿಲ್ಲ...

ನೀನಿದ್ದಿದ್ದರೆ ಏನೆಲ್ಲ ಆಗಬಹುದಿತ್ತಲ್ಲ
-ಎಂಬ ಕುರುಡು ಕನಸೊಂದಕ್ಕೆ ಸಾವೇ ಇಲ್ಲ...
ನೀ ಹೊರಟ ಕೊನೆ ಘಳಿಗೆಯಲಿ ಕೂಡಾ
ನೀ ತಿರುಗಿ ನೋಡಿ ನಗಬಹುದೆಂಬ ಆಸೆ ಬದುಕಿತ್ತು...
ಆದರೆ ಇಷ್ಟೆಲ್ಲ ಅಲ್ಲ...
ನಿನಗೆ ಹೇಳಬೇಕೆಂದಿರುವುದು
ಇದಾವುದೂ ಅಲ್ಲವೇ ಅಲ್ಲ;


ಕಿತ್ತಪದಗಳಿಗೆ ಅನಿಸಿದ್ದೆಲ್ಲ
ಹೇಳುವ ತಾಕತ್ತಿಲ್ಲ
ಎಂದು ಗೊತ್ತಿದ್ದರೂ ಕೂಡಾ-
ಮತ್ತೆ ಮತ್ತೆ ನೋವು ಬಣ್ಣಿಸುವ

ದರಿದ್ರ ಯತ್ನದಲಿ
ಏನೋ ‘ಸುಖ ’ ಸಿಗುವ
ಭಯಂಕರ ಭರವಸೆಯಿತ್ತು...
ಆದರೆ ಇಷ್ಟೊಂದಲ್ಲ...!
ಆದರಿಂದ ಇದ್ಯಾವುದೂ
ಬರೀ ‘ಇಷ್ಟೇ ’ ಅಲ್ಲ...!(ನಿಟ್ಟುಸಿರು)


ಇದು ಯೋಗರಾಜ ಭಟ್ರು ಕನ್ನಡಪ್ರಭ ದೀಪಾವಳಿ ವಿಶೇಷಾಂಕಕ್ಕೆ ಬರೆದ ಕವಿತೆ (ಪುಟ ೨೩)
ತುಂಬಾ ಕಾಡಿದ ಕವಿತೆ ನೀವೂ ಓದಿ....

Wednesday, December 26, 2007

ಎನ್ನ ಭವದ ಕೇಡು

ಈ ಕಾದಂಬರಿಯ ಬಗ್ಗೆ ಎನಾದರೂ ಬರೆಯದೆ ಇರೋಕೆ ನನ್ನಿಂದ ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನನ್ನನ್ನು ಆವರಿಸಿಕೊಂಡಿದೆ.
ಇದರಲ್ಲಿ ಬರುವ ಗೋವರ್ಧನರಾಯರು, ಪೇಶ್ವೆ ಕಾಲಕ್ಕೆ ಅಹ್ಮದ ನಗರದಿಂದ ನೆಲೆಕಿತ್ತು ಮೂಡಿಗೆರೆಗೆ ಬಂದ ಅವರ ತಂದೆ ಶ್ರೀಹರಿರಾಯರು, ಗೋವರ್ಧನರಾಯರ ಎರಡನೇಯ ಸಂಸಾರ ರಾಧಾ,ಮಕ್ಕಳಾದ ಗಂಗೆ, ಗೋದಾವರಿ ಯಮುನೆ, ಸರಸ್ವತಿ, ರಾಧಾ ಅಂಬಕ್ಕ, ಕಣ್ಣಿರಿನ ಹುಡುಗಿಯನ್ನು ಡೋಲಾಯನ ಸ್ಥಿತಿಗೆ ದೂಡುವ ವಾಸುದೇವ, ಡಾಕ್ಟರ ಮಗ ಅಜಿತ, ಗೋವರ್ಧನರಾಯರ ರಾಜಕಾರಣಿ ಸ್ನೇಹಿತ ಪಂಪಾಪತಿ,ದೂರ್ತ ನೌಕರ ಚಿನ್ಸಾಮಿ, ಸಮಯದ ಫಾಯಿದೆ ತೆಗೆದುಕೊಳ್ಳುವ ಕೃಷ್ಣಮೂರ್ತಿ,ದ್ರೈವರ್ ಅಬ್ಬೂ, ಸಂಗೀತಗಾರ ಬಸ್ರಾಜ,ಇವರೆಲ್ಲರೂ ತಮ್ಮ ತಮ್ಮ ಪಾತ್ರ ಮುಗಿಸಿ ಎದ್ದು ಹೋದರು ಬೃಂದಾವನ ಬಿಡಲೊಲ್ಲೆ ಎನ್ನುವ ಇವರೆಲ್ಲರ ಅಧಿನಾಯಕಿ ಮಾಮಿ,ಅವಳ ಸಾವಿನ ವಾಸನೆ ಪತ್ತೆ ಹಚ್ಚುವ ವಿದ್ಯೆ, ಮಾಮಿಯ ತಿಂಗಳ ಸ್ನಾನದ ವೃತ, ಬೃಂದಾವನದ ಹಿತ್ತಲಿನ ಕರಿಬೇವಿನ ಕಂಪು, ನಮ್ಮನ್ನು ಕಾದಂಬರಿ ಮುಗಿಸಿದ ಮೇಲೂ ಕಾಡುತ್ತಿರುತ್ತವೆ.

ಹೋಟಲ್ಲುಗಳ ಸರಮಾಲೆಯೆ ಇದ್ದ ಮನೆಯಲ್ಲಿ ಗಂಗೆ ಸತ್ತ ಮೂರೇ ದಿನಕ್ಕೆ ಮನೆಯಲ್ಲಿ ತಿನ್ನಲು ಏನು ಇರುವುದಿಲ್ಲ . ಇದು ಕಾದಂಬರಿ ಓದುವಾಗ ಅರಗಿಸಿಕೊಳ್ಳಲು ಕಷ್ಟವಾದರು ವಾಸ್ತವತೆಗೆ ಹತ್ತಿರವಾದದ್ದೆ.
ಡಾವಣಗೆರೆಯಲ್ಲಿ ಕಾಟನ್ ಮಿಲ್ಲುಗಳಿದ್ದಾಗ ನಡೆಯುತ್ತಿದ್ದ ದರ್ಬಾರಗಳು, ನಿಂತಾಗ ಒಂದೊಂದಾಗಿ ಬಿದಿಗೆ ಬಿದ್ದ ಸಂಸಾರಗಳು, ಅಲ್ಲಿನ ಯೂನಿಯನ್ನಗಳು,ಅದರ ಲೀಡರ್ರುಗಳು, ಅವರ ಕಚ್ಚಾಟಗಳು ಕಣ್ಣಿಗೆ ಕಟ್ಟುವಂತಿವೆ.
ಇವೆಲ್ಲಾ ಒಂದು ಕಡೆಯಾದರೆ ಗೋವರ್ಧನರಾಯರ ಸಂಸಾರಭವ ಹಂತಹಂತವಾಗಿ ಕುಸಿಯುವ ರೀತಿ ಕಲ್ಲು ಹೃದಯವನ್ನು ಕರಗಿಸುತ್ತದೆ. ಇನ್ನೊಂದು ಕಡೆ ನಮಗೆ ಸುಳಿವೆ ಕೊಡದೆ ಕಥೆಯೊಂದಿಗೆ ಸಾಗುವ ಸಂಗೀತ, ಅಲ್ಲಿ ಅರಳುವ ಪ್ರೀತಿ, ಅಡುಗೆ ಮನೆಯಲ್ಲೆ ಜಗತ್ತು ಮತ್ತು ತನ್ನ ಪ್ರೀತಿಯನ್ನು ಕಂಡುಕೊಳ್ಳುವ ಸರಸ್ವತಿಯ ರೀತಿ, ಸಂಸಾರ ಮತ್ತು ಮಕ್ಕಳು ಬೇಡವೆಂದ ಮಾಮಿಯ ಯೌವನದ ಮೊದಲ ಹಂತದಲ್ಲಿ ಮುಗ್ಗರಿಸಿದ ಪ್ರೇಮ ಪ್ರಕರಣ,ನೆರಳೆ ಬಣ್ಣದ ಚಾಯೆ ಇಡೀ ದಾವಣಗೆರೆಗೆ ಆವರಿಸುವ ವಿಸ್ಮಯ, ನಾವೆಲ್ಲಾ ಮರೆತೆ ಹೋಗಿರುವ ಶಾವಿಗೆ ಹೊಸೆಯುವ ಸಂಭ್ರಮ, ಕಾದಂಬರಿಯನ್ನು ಹಂಚಿಕೊಂಡರೆ ಮತ್ತೊಮ್ಮೆ ಇಡೀ ಕಾದಂಬರಿಯನ್ನೆ ಹೇಳಬೇಕಾದಿತು.

ಯಮುನೆ ಮತ್ತು ಗೋದಾವರಿಯ ಪಾತ್ರಗಳನ್ನು ಹೀಗೂ ಹೇಳಬಹುದೆನೊ ಮನುಷ್ಯ ಯೋಚಿಸುವುದನ್ನು ನಿಲ್ಲಿಸಿದರೆ ಯಮುನೆಯಂತಾಗುತ್ತಾನೆ। ದುಡುಕಿದರೆ ಗೋದಾವರಿಯಂತಾಗುತ್ತಾನೆ। ನಾವು ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ನಾವು ಕೇವಲ ಇದನ್ನು ಓದುವುದಿಲ್ಲ ಪಾತ್ರಗಳೆ ನಾವಾಗುತ್ತೆವೆ ಅದು ಸುರೇಂಧ್ರನಾಥರ ಕಥೆ ಹೇಳುವ ಪರಿ। ಚಂದನೆಯ ಕಾದಂಬರಿ ಕೊಟ್ಟ ಸುರೇಂಧ್ರನಾಥರಿಗೂ ಛಂದವಾಗಿ ಪ್ರಕಟಿಸಿದ ವಸುಧೇಂದ್ರರಿಗೂ ನನ್ನ ಧನ್ಯವಾದಗಳು

ನೀವು ಕೊಂಡು ಓದಿ