Monday, January 7, 2008

ಪ್ರೀತಿ ಮಾಡಬಾರದು


ರಾಜುವಿನ ಎಲ್ಲ ಪ್ರಯತ್ನಗಳು ವಿಪಲವಾಗಿದ್ದವು. ಅವನು ಅವಳಿಗಾಗಿ ತನ್ನ ಸ್ನೇಹಿತರ ವಲಯದಲ್ಲಿ ಬೇರೆಯದೆ ರೀತಿಯಲ್ಲಿ ಚರ್ಚೆಗೊಳಪಡುತ್ತಿದ್ದ.ಆ ವಿಷಯ ಅವನಿಗೂ ತಿಳಿದೆ ಇತ್ತು ಆದರೆ ಏನೂ ಮಾಡಲಾಗದ ಪರಿಸ್ಥಿತಿ. ವಿಷಯ ಅವನ ಆಫೀಸಿನಲ್ಲಿ ಘಟಿಸಿದ್ದಾಗಿತ್ತು. ಸತತವಾಗಿ ಎರಡು ವರ್ಷ ಜೊತೆಗಿದ್ದಿದ್ದರಿಂದಲೊ ಮತ್ತೊಂದಕ್ಕೊ ರಾಜುಗೆ ಅವಳ ಮೇಲೆ ಒಲವು ಮೂಡಿತ್ತು ಅದನ್ನು ಅವಳಿಗೆ ಮೊದಲ ಬಾರಿಗೆ ತಿಳಿಸಿದಾಗ ಸುಮ್ಮನೆ ನಕ್ಕು ಮುಂದೆ ಸಾಗಿದ್ದಳು. ಅಷ್ಟಕ್ಕೆ ಇವನು ಸುಮ್ಮನಾಗಿದ್ದರೆ ಚೆನ್ನಾಗಿತ್ತೆನು. ಆದರೆ ಇವನ ತಲೆಯಲ್ಲಿ ಪ್ರೀತಿಯ ಭೂತ ಸವಾರ, ಮತ್ತೊಮ್ಮೆ ಲಂಚ್ ಟೈಮಿನಲ್ಲಿ ಅದೇ ವಿಷಯವಾಗಿ ಅವಳೊಂದಿಗೆ ಮಾತನಾಡಿದಾಗ ಅವಳು ಎಲ್ಲರೆದುರು ಅವನನ್ನು ಹಿಗ್ಗಾಮುಗ್ಗಾ ಬೈದಾಡಿ, ಮತ್ತೊಮ್ಮೆ ಈ ವಿಷಯವಾಗಿ ಮಾತನಾಡಿದರೆ ನಾನು ಬೇರೆಯ ರೀತಿಯಲ್ಲಿ ಯೋಚಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದೆ ಕೊನೆ ಆಲಿಂದ ಸೀದಾ ಮನೆಗೆ ಬಂದವನು ಮೂರು ದಿನಗಳಿಂದ ಆಫೀಸಿಗೆ ಹೋಗಿರಲಿಲ್ಲ.
ಮೂರನೇಯ ದಿನ ಅವನಿಗೆ ಅದೆನೆನ್ನಿಸಿತೋ ಮನೆಯಿಂದ ಹೊರಬಿದ್ದವನೆ ನೇರ ಕೆ ಅರ್ ಮಾರುಕಟ್ಟೆಗೆ ಹೋಗಿ ಒಂದು ಉದ್ದನೇಯ ಹಗ್ಗ , ಅಲ್ಲಿಂದ ಮೆಜೆಸ್ಟಿಕ್ಕಿಗೆ ಹೋಗಿ ಸೀಡ್ಸ್ ಅಂಗಡಿಯಲ್ಲಿ ಹತ್ತಿಗೆ ಹೊಡೆಯಲಿಕ್ಕೆ ಎಂದು ಒಂದು ಲೀಟರನಷ್ಟು ಮೆಟಾಸಿಡ್ ಔಷಧಿ, ಮುಂದೆ ತಿಗಳರ ಪೇಟೆಗೆ ಹೋಗಿ ಒಂದು ಹರಿತವಾದ ಚೂರಿ, ಹೀಗೆ ಎಲ್ಲವನ್ನೂ ಖರೀದಿಸಿ ಅಲ್ಲಿಂದಲೇ ಅವಳ ಮೊಬೈಲಿಗೆ ಒಂದು ರೂಪಾಯಿ ನಾಣ್ಯದ ದೂರವಾಣಿಯಿಂದ ಕರೆ ಮಾಡಿದ ಅತ್ತಲಿಂದ "ದಿಲ್ ಮೆ ಮೇರೆ ಹೈ ದರ್ದೆ ಡಿಸ್ಕೊ" ಎಂಬ ಹಾಡು ಬರುತ್ತಿತ್ತು. ಹಾಡು ನಿಂತು ಒಮ್ಮೆಲ್ಲೆ ಅವಳು ಉಲಿದಳು ಹಲೋ, ಅಷ್ಟೇ ಫೋನ ತುಂಡರಿಸಿ ಇವನು ಬಸ್ಟಾಪಿನ ಕಡೆಗೆ ನಡೆದ.
ಮನೆಗೆ ಬಂದವನೇ ತನಗೆ ಅತೀ ಇಷ್ಟವಾದ ಖಾರ್ಖಾರವಾದ ಚಿತ್ರಾನ್ನ ಮಾಡಿಕೊಂಡು ಕಡೆಯ ಬಾರಿಗೆಂಬಂತೆ ಸಾಕೆನಿಸುವಷ್ಟು ತಿಂದು ಮುಂದಿನ ಕೆಲಸದತ್ತ ಗಮನ ಹರಿಸಿದ. ಅವನ ಮೊಬೈಲಂತು ಮುರು ದಿನದಿಂದ ಫೋನ ಮಾಡಿದವರಿಗೆಲ್ಲ ಸ್ವಿಚ್ ಆಫ್ ಎಂದು ಹೇಳುತ್ತಿತ್ತು ಅದರಿಂದ ಅದರ ಕಡೆಗೆ ಹೆಚ್ಚು ಗಮನ ಕೊಡದೆ ಮಾರ್ಕೆಟಿನಿಂದ ತಂದ ಹಗ್ಗವನ್ನು ಕೈಗೆ ತೆಗೆದುಕೊಂಡು ಪ್ಯಾನಿನ ಕಡೆಗೆ ನಡೆದ. ಮೊದಲು ಪ್ಯಾನಿಗೆ ಹಗ್ಗ ಕಟ್ಟಲು ಅನುಕೂಲವಾಗುವಂತೆ ಉದ್ದನೇಯ ಸ್ಟೂಲ ಮೇಲೆ ನಿಂತು ಪ್ಯಾನಿನ ಕುತ್ತಿಗಿಗೆ ಹಗ್ಗ ಬಿಗಿದ ನಂತರ ದೊಡ್ಡ ಸ್ಟೂಲನ್ನು ಪಕ್ಕಕ್ಕೆ ಇಟ್ಟು ಚಿಕ್ಕ ಸ್ಟೂಲನ್ನು ಪ್ಯಾನಿನ ಅಡಿಗೆ ಹಕಿ ಹಗ್ಗವನ್ನು ತನ್ನ ಕುತ್ತಿಗೆಯ ಸಮನಂತರಕ್ಕೆ ತಂದು ಹಗ್ಗಕ್ಕೆ ಕುಣಿಕೆ ಹಾಕಿ ಅದನ್ನು ತನ್ನ ಕೊರಳಿಗೆ ಹಾಕಿಕೊಂಡು ನೋಡಿದ ಸರಿಯಾಗಿತ್ತು ಆಮೇಲೆ ಹಗ್ಗವನ್ನು ಕೈಯಲ್ಲಿ ಹಿಡಿದುಕೊಂಡು ಮಿಟಿದ ಗಟ್ಟಿಯಾಗಿತ್ತು ನಂತರ ಹಗ್ಗವನ್ನು ಕೈಯಲ್ಲಿ ಹಿಡಿಕೊಂಡೆ ಕಾಲಿನಿಂದ ಕೆಳಗೆ ಇದ್ದ ಸ್ಟೂಲಿಗೆ ಝಾಡಿಸಿದ ಅದು ಪಕ್ಕಕ್ಕೆ ವಾಲಿದಾಗ ತೃಪ್ತಿಯ ನಿಟ್ಟುಸಿರು ಬಿಟ್ಟು ಸ್ಟೂಲನ್ನು ಮತ್ತೆ ಮೊದಲಿನ ಜಾಗಕ್ಕೆ ಇಟ್ಟು ಕೊರಳಿಗೆ ಕುಣಿಕೆ ಬಿಗಿದುಕೊಂಡಾಗ ಬಿಗಿಯಾದ ಕುಣಿಕೆ ಗಂಟಳನಾಳಕ್ಕೆ ಒತ್ತಿದಂತಾಗಿ ಆ ಘನ ಕಾರ್ಯವನ್ನ ಅಲ್ಲಿಗೆ ನಿಲ್ಲಿಸಿದ.
ಎದುರಿಗೆ ಟಿ ವಿ ತನ್ನ ಪಾಡಿಗೆ ತಾನು ವಟುಗುಡುತ್ತಿತ್ತು. ರಾಜು ಮೊದಲೆ ನಿರ್ಧರಿಸಿರುವಂತೆ ಈಗ ಮೆಟಾಸಿಡ್ ಪ್ರಯೋಗಕ್ಕೆ ಇಳಿದ. ಅಷ್ಟರಲ್ಲೆ ಟಿ ವಿ ಯಲ್ಲಿ ಶುರುವಾದ ವಾರ್ತೆಯಲ್ಲಿ ಒಬ್ಬ ಇವನಂತೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಕುಡಿದು ವಿಲವಿಲನೆ ಒದ್ದಾಡುತ್ತಿರುವುದನ್ನು ತೋರಿಸುತ್ತಿದ್ದರು. ಈ ಸಾವು ಇಷ್ಟೋಂದು ಯಾತನಾದಾಯಕ ವಾಗಿದ್ರೆ ಬೇಡ ಅಂತ ವಿಷದ ವಿಷಯವನ್ನು ಅಲ್ಲಿಗೆ ಸಮಾಪ್ತಿಗೊಳಿಸಿದ
ಈಗ ಅವನ ಕಣ್ಣು ಮೂರನೇಯ ವಸ್ತುವಿನತ್ತ ತಿರುಗಿತು ತಿಗಳರ ಪೇಟೆಯಿಂದ ತಂದಂತಹ ಚೂರಿ ನಾನಿರುವಾಗ ಚಿಂತೆ ಯಾಕೆ ಬಾ ಬಾ ಎನ್ನುವಂತೆ ಫಳ ಫಳನೆ ಹೊಳೆಯುತ್ತಿತ್ತು. ಇದರಿಂದಲಾದರು ತನ್ನ ಪ್ರಯತ್ನ ಸಫಲವಾಗಲಿ ಎಂದು ಚೂರಿ ಕೈಗೆತ್ತಿಕೊಂಡು ಅದರ ಹರಿತ ಪರೀಕ್ಷಿಸಲು ಬೆರಳಿನಿಂದ ಒಮ್ಮೆ ಸವರಿದ, ಕೈಕೆಂಪಾಗಿ ಕೈಯಿಂದ ರಕ್ತ ತೊಟ್ಟಿಕ್ಕಲಿಕ್ಕೆ ಶುರುವಾಯಿತು. ಚೂರು ಗಾಯವಾಗಿದ್ದಕ್ಕೆ ಇಷ್ಟೊಂದು ಯಮಹಿಂಸೆಯಾಗಬೇಕಾದರೆ ಇನ್ನೂ ಚೂರಿ ಎದೆಯಾಳಕ್ಕೆ ಇಳಿದರೆ ಇನ್ನೆಷ್ಟು ಯಾತನೆಯಾಗಲಿಕ್ಕಿಲ್ಲವೆಂದು ಅದನ್ನು ಅಲ್ಲಿಗೆ ಕೈಬಿಟ್ಟ.
ಒಮ್ಮೆಲೆ ಅವನಿಗೆ ತನ್ನ ಮೇಲೆಯೆ ನಾಚಿಕೆ ಬಂದು ಬಿಟ್ಟಿತು ಸಾಯುವುದಕ್ಕೂ ಆಗುತ್ತಿಲ್ಲ ತನ್ನಿಂದ ಎಂದು. ಮತ್ತೊಂದು ಕ್ಷಣಕ್ಕೆ ತನ್ನ ಮೇಲೆ ಕೋಪ ಬಂದಂತಾಗಿ ರಪರಪ ತನ್ನನ್ನು ತಾನೆ ಹೊಡೆದುಕೊಂಡು ವಿಕೃತವಾಗಿ ನರಿ ಉಳಿಡುವ ತರಹ ಅಳುತ್ತ ಕೂತು ಬಿಟ್ಟ ಹತ್ತು ನಿಮಿಷ ಅತ್ತು ಹಗುರಾಗಿದ್ದರಿಂದ ಅವನಲ್ಲಿ ಹೊಸ ಯೋಜನೆ ಮೂಡಿತ್ತು. ಕಣ್ಣಿರು ಒರೆಸಿಕೊಂಡು ತನ್ನ ಕೋಣೆಯಿಂದ (ಅವನ ಕೋಣೆ ಐದನೇಯ ಮಹಡಿಯಲ್ಲಿತ್ತು ಮತ್ತು ಅದೇ ಕೊನೆಯ ಮಹಡಿ) ಹೊರ ಬಂದವನೆ ಎದುರಿಗಿದ್ದ ಸೊಂಟದೆತ್ತರದ ಗ್ರಿಲ್ಲಿನ ಕಡೆಗೆ ನಡೆದ ಅಲ್ಲಿಂದ ಕೆಳಗೆ ನೆಗೆದರೆ ದೇಹ ನೆಲ ತಲುಪುವುದರ ಒಳಗೇ ದೇಹದಿಂದ ಪ್ರಾಣ ದೂರವಾಗುತ್ತದೆ ಎಂದು ಅವನ ಎಣಿಕೆಯಾಗಿತ್ತು. ಅಷ್ಟರಲ್ಲಿ ಅದೇ ಗ್ರಿಲ್ ಮೇಲೆ ಸರ್ಕಸ ಮಾಡುತ್ತಿದ್ದ ಒಂದು ಪುಟ್ಟ ಹಲ್ಲಿ ಆಯತಪ್ಪಿ ಕೆಳಗೆ ಬಿದ್ದು ತನಗೆ ಏನೂ ಆಗೇ ಇಲ್ಲವೆನ್ನುವಂತೆ ಅಲ್ಲಿಂದ ಹೊರಟು ಹೋಯಿತು. ಇದರಿಂದ ತಾನು ಇಲ್ಲಿಂದ ನೆಗೆದರೆ ಕೇವಲ ಕೈಕಾಲು ಮುರಿಯಬಹುದು ಎನಿಸಿ ಅದಕ್ಕೂ ಇತಿಶ್ರೀ ಹಾಡಿದ. ಈ ಎಲ್ಲ ಘಟನೆಗಳಿಂದ ಅವನ ನಿರ್ಧಾರವೇ ಬದಲಾದಂತಾಗಿ ಸಾಯುವ ಯೋಚನೆಯೇ ತಪ್ಪೆನಿಸಿತು ಒಂದೇ ಕ್ಷಣ ಅಷ್ಟೇ. ಮರುಕ್ಷಣವೇ ಮೂರು ದಿನದಿಂದ ಆಫೀಸಿಗೆ ಹೋಗದೆ ಇರುವುದು ಮತ್ತು ಅದಕ್ಕೆ ಕಾರಣ ಗೊತ್ತಿರುವ ಕಲೀಗ್ಸಗಳು ನಾನು ಮತ್ತೆ ಆಫೀಸಿಗೆ ಹೊದರೆ ಇನ್ನಷ್ಟು ಅವಮಾನ ಮಾಡುತ್ತಾರೆ ಎನಿಸಿ ತಾನು ಮಾಡುತ್ತಿರುವುದೆ ಸರಿ ಎನಸಿತು ಅವನಿಗೆ.
ಎಲ್ಲಾ ಪ್ರಯತ್ನಗಳು ವಿಫಲವಾಗಿ ಏನೂ ತೊಚದೆ ರಾಜು ಕೋಣೆಯ ಬೀಗ ಹಾಕಿ ಚಹಾ ಕುಡಿಯಲೆಂದು ರಸ್ತೆಯತ್ತ ನಡೆದ . ಬೇಕರಿಯಲ್ಲಿ ಚಹಾ ಕುಡಿಯುತ್ತ ರಸ್ತೆಯಲ್ಲಿ ರಭಸವಗಿ ಸಾಗುತ್ತುದ್ದ ವಾಹನಗಳ ಕಡೆಗೆ ನೋಡಿದಾಗ ಅವನ ಕಣ್ಣುಗಳು ವಿಚಿತ್ರವಾಗಿ ಮಿನುಗಿದವು. ಬಸ್ಸಿನ ಕೆಳಗೆ ತಲೆ ಸಿಕ್ಕು ಬಿಟ್ಟರೆ ಪ್ರಾಣ ಹೋಗಿದ್ದು ಸಹ ಗೊತ್ತಾಗುವುದಿಲ್ಲವೆನಿಸಿ ಅತ್ತ ಹೆಜ್ಜೆ ಹಾಕಿದ ಅಷ್ಟರಲ್ಲಿ ಅಪ್ಪ ಈ ತಿಂಗಳ ತನ್ನ ಕಣ್ಣಿಗೆ ಆಪರೇಷನ ಮಾಡೀಸಬೇಕು ಎಂದದ್ದು ನೆನಪಾಯಿತು ಸದ್ಯದ ತೊಂದರೆಗಿಂತ ಅದೇನು ಅಷ್ಟು ಮಹಾ ಅನಿಸಲಿಲ್ಲ ಅವನಿಗೆ.ಮತ್ತೆ ಮುಂದುವರೆದ ಪಾಪಿ ಚಿರಾಯು ಎನ್ನುವಂತೆ ಅವನು ಹೊಗುತ್ತಿದ್ದ ಹಾಗೆ ಟ್ರಾಫಿಕ್ಕಿನ ಕೆಂಪು ದೀಪ ಹತ್ತಿಕೊಂಡಿತು. ಸಿಗ್ನಲ್ ಬಿಳುವುದನ್ನೆ ಕಾಯುತ್ತ ಅವನ ಪಕ್ಕದಲ್ಲೆ ಸ್ಕೂಟಿಯ ಮೇಲೆ ಕುತಿದ್ದ ಒಂದು ಹೆಣ್ಣು ಆಕೃತಿ ಹೆಲ್ಮೆಟ್ ತೆಗೆದು ಅವನ ಕಡೆ ನೋಡಿ ಸಂತೋಷದಿಂದ ಕೂಗು ಹಾಕಿತು. ನೋಡಿದರೆ ಅವಳ ರಾಜುನನ್ನು ತಿರಸ್ಕರಿಸಿದವಳು. ಸ್ಸಾರಿ ರಾಜು ನಿನ್ನ ಅರ್ಥಮಾಡ್ಕೊಳ್ಳಕೆ ಆಗಲಿಲ್ಲ ನನ್ನಿಂದ ನಿನಗೆ ಏನೆನೋ ಅಂದು ಬಿಟ್ಟೆ ಸ್ಸಾರಿ ಡಿಯರ್. ನಿನಗೆ ಫೋನಮಾಡೋಣಂದ್ರೆ ಮೂರು ದಿನದಿಂದ ನಿನ್ನ ಫೋನ ಬೇರೆ ಸ್ವಿಚ್ ಆಫ್ ಅಂತ ಬರ್ತಿತ್ತು. ಮತ್ತೊಮ್ಮೆ ಸ್ಸಾರಿ ಕೇಳಿ ನಾನು ನಿನ್ನನ್ನು ಅಷ್ಟೇ ಪ್ರೀತ್ಸತಿನಿ ಕಣೊ ಅಂದಳು . ಹಾಂ!!!! ಅಷ್ಟೇ ಇವನ ಬಾಯಿಂದ ಹೊರಟ ವಾಕ್ಯ, ರಾಜು ತನ್ನ ಯಾತ್ರೆ ಮುಗಿಸಿ ಹೊರಟು ಹೋಗಿದ್ದ.