ಆಗಿದ್ದೆ ಏಕಾಂಗಿ
ಆದರೆ ಇಷ್ಟೆಲ್ಲಾ ಅಲ್ಲ...
ಇದ್ದೆ ನಾ ಮಂಕಾಗಿ
ಆದರೆ ಇಷ್ಟೆಲ್ಲ ಅಲ್ಲ...
ನೀ ಕಣ್ಣಿಗೆ ಬೀಳುವ ಮೊದಲೂ ಕೂಡಾ
ಆಗಾಗ ಸುಮ್ಮನೆ ಸಾಯಬೇಕೆನಿಸುತ್ತಿತ್ತು...
ಆದರೆ ಇಷ್ಟೆಲ್ಲ ಅಲ್ಲ...
ಕಡಲ ಮದ್ಯ ಬಾಯಾರಿ ನಿಂತರೂ ಒಂತೊಟ್ಟು ನೀರಿಲ್ಲ
ಮೊದಲು ಮರುಭೂಮಿಯಲ್ಲಿದ್ದಾಗ
ದಾಹವೆಂದರೇನೆಂದೇ ಗೊತ್ತಿರಲಿಲ್ಲ...
ನೀ ಕಣ್ಣಿಗೆ ಬೀಳುವ ಮೊದಲೂ ಕೂಡಾ
ಕಾರಣವಿಲ್ಲದೇ ಎದೆ ಬರಡಾದ ಉದಾಹರಣೆಯಿತ್ತು...
ಆದರೆ ಇಷ್ಟೆಲ್ಲ ಅಲ್ಲ...
ನೀನೇಕೋ ನಿಲ್ಲಲಿಲ್ಲ
ಇನ್ನೆಂದೂ ನೀನಿಲ್ಲ...
ನೀ ದೂರನಡೆಯುವಾಗಿನ ನಿನ್ನ ಬಿಳಿಬೆನ್ನ ಮೇಲಾಣೆ
ಹಾಕಿ ಪ್ರಯೀಜನವಿಲ್ಲ...
ಆದರೂ ಆಣೆಯಿಟ್ಟು ಹೇಳುವೆ
ಈ ಹಾಳು ನಿಟ್ಟುಸಿರಿನ ದೆವ್ವಕ್ಕೆ
ನನ್ನೆದೆ ಬಿಟ್ಟರೆ ಬೇರೆ ಮನೆಯಿಲ್ಲ...
ನೀನಿದ್ದಿದ್ದರೆ ಏನೆಲ್ಲ ಆಗಬಹುದಿತ್ತಲ್ಲ
-ಎಂಬ ಕುರುಡು ಕನಸೊಂದಕ್ಕೆ ಸಾವೇ ಇಲ್ಲ...
ನೀ ಹೊರಟ ಕೊನೆ ಘಳಿಗೆಯಲಿ ಕೂಡಾ
ನೀ ತಿರುಗಿ ನೋಡಿ ನಗಬಹುದೆಂಬ ಆಸೆ ಬದುಕಿತ್ತು...
ಆದರೆ ಇಷ್ಟೆಲ್ಲ ಅಲ್ಲ...
ನಿನಗೆ ಹೇಳಬೇಕೆಂದಿರುವುದು
ಇದಾವುದೂ ಅಲ್ಲವೇ ಅಲ್ಲ;
ಕಿತ್ತಪದಗಳಿಗೆ ಅನಿಸಿದ್ದೆಲ್ಲ
ಹೇಳುವ ತಾಕತ್ತಿಲ್ಲ
ಎಂದು ಗೊತ್ತಿದ್ದರೂ ಕೂಡಾ-
ಮತ್ತೆ ಮತ್ತೆ ನೋವು ಬಣ್ಣಿಸುವ
ದರಿದ್ರ ಯತ್ನದಲಿ
ಏನೋ ‘ಸುಖ ’ ಸಿಗುವ
ಭಯಂಕರ ಭರವಸೆಯಿತ್ತು...
ಆದರೆ ಇಷ್ಟೊಂದಲ್ಲ...!
ಆದರಿಂದ ಇದ್ಯಾವುದೂ
ಬರೀ ‘ಇಷ್ಟೇ ’ ಅಲ್ಲ...!(ನಿಟ್ಟುಸಿರು)
ಇದು ಯೋಗರಾಜ ಭಟ್ರು ಕನ್ನಡಪ್ರಭ ದೀಪಾವಳಿ ವಿಶೇಷಾಂಕಕ್ಕೆ ಬರೆದ ಕವಿತೆ (ಪುಟ ೨೩)
ತುಂಬಾ ಕಾಡಿದ ಕವಿತೆ ನೀವೂ ಓದಿ....