Sunday, December 9, 2007

ಲೇಖಕ.......!

ಅಯ್ಯೋ ಈ ಪೆನ್ನೂ ಮುದವಲ್ಲದಾ, ಇರೋದ ಇದ ಒಂದ ಪೆನ್ ಬ್ಯಾರೆ ತಗೋಳಾಕ ರೊಕ್ಕ ಸಯಿತ ಇಲ್ಲ ನನ್ನ ಹತ್ರ। ಈ ಪುಸ್ತಕ ಕನ್ನಡಕ್ಕ ಬದಲಿಸಿ ಕೊಟ್ರ ಸಾವಿರ ರೂಪಾಯಿ ಕೊಡ್ತೆನಿ ಅಂತ ಹೇಳ್ಯಾರ ಸುಭಾಷ ರೋಡಿನ್ಯಾಗಿರೊ ಬುಕ್ಕಿನ ಅಂಗಡಿ ಸವ್ಕಾರ. ಶೆಟ್ಟಿ ಅಂಗಡ್ಯಾಗ ಪೆನ್ ತರೋ ಟೈಮು ಅಲ್ಲ ಇದು, ಟೈಮ ಆಗಲೇ ರಾತ್ರಿ ಹನ್ನೆರಡ ಮಲಗಿರ್ತಾನ ಅಂವ. ನಾಳಿ ತನಕ ಹೇಂಗರ ಉಪವಾಸ ಇದ್ದೆನೀ, ಇಗೇನರ ಪೆನ್ ಸಿಗಲಿಲ್ಲಾ ಅಂದರ ನಾಳೆನೂ ಊಟ ಇಲ್ಲ ನಾಡದೂ ಇಲ್ಲ, ಹಂಗಂದ್ರ ನಾಡದ ನಾ ಸಾಯತೆನಾ. ಹೀಗೆ ಸಾಗಿತ್ತು ಅವನ ಯೋಚನಾ ಲಹರಿ.

ಅವನ ಹೆಸರು ಸೋಮಪ್ಪ, ದೇವರ ಗುಡ್ಡದಲ್ಲಿ ನೆಲೆಸಿದ್ದ ಮೈಲಾರಲಿಂಗನ ಭಕ್ತೆ ಪಾರವ್ವನ ಏಕೈಕ ಸಂತಾನ। ಪಾರವ್ವ ತಾನು ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಗ್ವಾರವ್ವನ ಸೇವೆಯ ನೆರಳು ತಾಗದಂತೆ ಪಕ್ಕದ ರಾಣೇಬೆನ್ನೂರಿನ ಶಾಲೆಗೆ ಕಳುಹಿಸುತ್ತಿದ್ದಳು। ಪಾರವ್ವನ ಗಂಡ ದ್ಯಾಮಪ್ಪ, ದೇವರಗುಡ್ಡದ ಮೈಲಾರಲಿಂಗ ದೇವರ ಪಾದ ಸೆರಿ ಸುಮಾರು ವರ್ಷಗಳಾಗಿತ್ತು। ದೇವರಗುಡ್ಡದ ಪಕ್ಕದ ಹಳ್ಳಿ ಕೂನಬೇವಿನವಳಾದ ಪಾರವ್ವ, ದ್ಯಾಮಪ್ಪನ ಮದುವೆಯಾಗಿ ದೇವರಗುಡ್ದಕ್ಕೆ ಬಂದಾಗ ಅವಳಿಗೆ ಬರಿ ಹದಿನೈದು ವರ್ಷ, ಗಂಡ ದ್ಯಾಮಪ್ಪ ಅವರ ಮನೆಯ ಕುಲಕಸುಬಾದ ಗ್ವಾರಪ್ಪನ ವೇಷ ಧರಿಸಿ ಸುತ್ತಮುತ್ತ ಹಳ್ಳಿಗಳಲ್ಲಿ ಭಿಕ್ಷೆ ಬೇಡುವ ಕಾಯಕ ಮಾಡುತ್ತಿದ್ದ. ಹೆಗಲಮೆಲೆ ಒಂದು ದಪ್ಪನೆಯ ಕಂಬಳಿ, ಒಂದು ಕೈಯಲ್ಲಿ ಢಮರುಗ, ಇನ್ನೂಂದು ಕೈಯಲ್ಲಿ ತ್ರಿಶೂಲ, ಬಗಲಲ್ಲಿ ಬಂಡಾರ ತುಂಬಿದ ಚರ್ಮದಿಂದ ಮಾಡಿದಂದಹ ಉದ್ದನೆಯ ಜೋಳಿಗೆ, ತಲೆಯ ಮೇಲೆ ಕಪ್ಪನೆಯ ಉದ್ದು ಕೂದಲಿನ ಮುಂಡಾಸಿನಂತಹ ಟೊಪ್ಪಿಗೆ ಕಾಲಲ್ಲಿ ಭಾರಿ ಎನಿಸುವಂತಹ ಚರ್ಮದ ಚಪ್ಪಲಿಗಳನ್ನು ಧರಿಸಿ ಮನೆಗಳ ಮುಂದೆ ನಿಂತು ಏಳುಕೋಟಿ ,ಏಳುಕೋಟಿ ಎಂದು ಹುಂಕರಿಸಿದನೆಂದರೆ ಜನ ಭಯಭಕ್ತಿಯಿಂದ ಅವನನ್ನು ಮನೆಯೊಳಗೆ ಕರೆದು ಭಿಕ್ಷೆ ನೀಡುತ್ತಿದ್ದರು. ಗ್ವಾರಪ್ಪ ಆದಂತಹವರು ಯಾವುದೇ ಮನೆ , ನೆಲ, ಹೊಲಕ್ಕೆ ಕಾಲಿಟ್ಟರೆ ಅದು ಯಾವತ್ತೂ ಸಮೃದ್ಧಿಯಿಂದ ತುಂಬಿ ತುಳುಕುತ್ತದೆ ಎಂದು ಪ್ರತೀತಿ ಯಾವತ್ತಿನಿಂದಲೂ ಇದೆ. ಅದಕ್ಕೆ ದೇವರಗುಡ್ಡದ ಸುತ್ತಮುತ್ತ ನಡೆಯುತ್ತಿದ್ದ ಹೊಲದ ಪೂಜೆ, ನಾಮಕರಣ, ಮನೆ ಪ್ರವೇಶ,ಮದುವೆ ಹೀಗೆ ಏನೇ ಶುಭ ಕಾರ್ಯಗಳಾದರೂ ದ್ಯಾಮಪ್ಪನಿಗೆ ಕರೆ ಹೋಗುತ್ತಿತ್ತು. ಸಂಪಾದನೆಯು ಚೆನ್ನಾಗಿತ್ತು. ಆದರೆ ಅವನ ಕುಡಿತದ ಚಟ ಅವನಿಗೆ ಈ ಭೂಮಿಯಿಂದಲೇ ಆಚೆ ನೂಕಿತ್ತು. ದ್ಯಾಮಪ್ಪ ಕಾಲವಾದಾಗ ಪಾರವ್ವನ ಹೊಟ್ಟೆಯಲ್ಲಿದ್ದ ಕೂಸಿಗೆ ಬರಿ ಐದೇ ತಿಂಗಳು, ಹೀಗಾಗಿ ಸೋಮನಿಗೆ ತಂದೆಯೆಂಬ ಮಾಹಾತ್ಮನ ಪರಿಚಯವಾಗಲೇ ಇಲ್ಲ ಪಾರವ್ವನು ಮಗನಿಗೆ ತನ್ನ ಪತಿದೇವರ ವಿಷಯ ಹೆಳಿ ಸಂಭ್ರಮಿಸಲಿಲ್ಲ. ಸೋಮನಿಗೆ ಐದು ವರ್ಷ ತುಂಬುವ ತನಕ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪಾರವ್ವನಿಗೆ ಒಂದು ದಿನ ಸಕ್ಷಾತ ಮೈಲಾರಲಿಂಗ ದೇವರೆ ಕನಸಿನಲ್ಲಿ ಬಂದು ಕುಲಧರ್ಮ ಮರೆತೆನೆ ಪಾರವ್ವ ಎಂದು ಕೇಳಿದಂತಾಗಿತ್ತು. ಕನಸುಗಳ ಕಾಟ ಹೆಚ್ಚಾದಾಗ ಪಾರವ್ವ ತುಂಬ ತಳಮಳಗೊಂಡಿದ್ದಳು . ಆದರೆ ಆ ದಿನವೂ ಬಂದಿತ್ತು ಸೋಮ ಅವ್ವನ ಹೊಸ ವೇಷ ನೋಡಿ ಗಾಬರಿಯಾಗಿದ್ದ. ಹಣೆ ತುಂಬ ಭಂಡಾರ, ಕೈಯಲ್ಲಿ ತ್ರಿಶೂಲ, ಢಮರುಗ, ಆರು ವರ್ಷದ ಸೋಮ ತನ್ನ ಭಾಷೆಯಲ್ಲಿ ಅವ್ವನಿಗೆ ದೇವರು ಎಂದಿದ್ದ. ಅವನು ಶಾಲೆ ಬಿಟ್ಟು ತನ್ನಂತೆ ಇದೇ ಕಾಯಕಕ್ಕೆ ಇಳಿದಾನು ಎಂದು ಪಾರವ್ವ ಊರ ಗೌಡರ ಸಹಾಯದಿಂದ ಮಗನಿಗೆ ಪಕ್ಕದ ರಾಣೇಬೆನ್ನೂರಿನಲ್ಲಿ ಶಾಲೆಗೆ ಸೇರಿಸಿದ್ದಳು. ಅಷ್ಟು ಕಡುಬಡತನವಿಟ್ಟುಕೊಂಡು ಅವನನ್ನು ಪಿ ಯು ಸಿ ವರೆಗು ಓದಿಸಿದ್ದು ಆ ತಾಯಿಯ ಸಾಧನೆಯೆ ಸರಿ।

ಮಗನ ಪಿ ಯು ಸಿ ಮುಗಿದ ನಂತರ ಪಾರವ್ವ ಅವನನ್ನು ಅಲ್ಲೇ ರಾಣೇಬೆನ್ನೂರಿನ ಒಂದು ಅರಿವೆಯಂಗಡಿಯಲ್ಲಿ ಕೆಲಸಕ್ಕೆ ಸೇರಿಸುವ ಯೋಚನೆ. ಆದರೆ ಮಗನಿಗೆ ಇಷ್ಟು ಓದಿದ ತಾನು ಬಟ್ಟೆಯಂಗಡಿಯಲ್ಲಿ ಸೀರೆ ಮಡಿಚುವುದು ಕ್ಷುಲ್ಲುಕವಾಗಿ. ಅದಲ್ಲದೇ ಅವನಿಗೆ ಬರವಣಿಗೆಯ ಭೂತವೊಂದು ಮೆಟ್ಟಿಕೊಂಡು ಬಿಟ್ಟಿತ್ತು। ಅದಕ್ಕೆ ಸಾಕ್ಷಿಯಾಗಿ ಹಿಂದಿಯಲ್ಲಿ ಪ್ರಬಂಧ ಮಂಡಿಸಿದ್ದಕ್ಕೆ ಸಿಕ್ಕ ಮೊದಲ ಬಹುಮಾನವಿತ್ತು. ಅವನದು ಒಂದೇ ವಾದ ನಾನು ಕಾಲೇಜು ಕಲೆತದ್ದು ಮರವಾಡಿ ಅಂಗಡಿಯಲ್ಲಿಯಲ್ಲಿರುವ ಹೆಣ್ಣು ಗೊಂಬೆಗೆ ಸೀರೆ ಉಡಿಸುವುದಕ್ಕೆ ಅಲ್ಲ ಗೊತ್ತಾತ ಅವ್ವ . ಆಗೆಲ್ಲಾ ಪಾರವ್ವ, ಮಗನಿಗೆ ಯಾವುದೊ ಮಾಸ್ತರ ಭೂತ ಬಡಿದಿದೆ ಎಂದೇ ಯೋಚಿಸಿತ್ತಿದ್ದಳು . ಒಂದೆರಡು ಸಾರಿ ಮೈಲಾರಕ್ಕೆ ಹೋಗಿ ಹೇಳಿಕೆಯನ್ನು ಕೇಳಿಸಿಕೊಂಡು ಬಂದಿದ್ದಳು. ಆದರೆ ಸೋಮನಿಗೆ ಹಿಡಿದಿರುವುದು ಮಾಸ್ತರನ ಭೂತವಲ್ಲ , ಅದೇ ಊರಿನ ಪೂಜಾರಿಯ ಮಗಳು ಸಾವಿತ್ರಿಯ ಮೇಲಿನ ಪ್ರೀತಿಯ ಭೂತವೆಂದು ಪಾರವ್ವನಿಗೆ ಹೇಗೆ ತಿಳಿದಿತು.

ಆಗಿದ್ದು ಇಷ್ಟು ಸೋಮ ರಾಣೇಬೆನ್ನೂರಿನಲ್ಲಿ ಇದ್ದರು ಅವ್ವನ ಭೇಟಿಗಾಗಿ ಪ್ರತಿ ಭಾನುವಾರ ಉರಿಗೆ ಬರುತ್ತಿದ್ದ ಅಂತಹ ಒಂದು ಭಾನುವಾರ ಸಾವಿತ್ರಿಯು ಊರಿಗೆ ಬರುತ್ತಿದ್ದಳು ಅವಳ ಮೇಲೆ ಇವನಿಗೆ ಮೊದಲಿನಿಂದಲೂ ಮನಸ್ಸಿತ್ತು. ಆದ್ರೆ ಹೇಳಲಾರದೆ ತುಂಬ ವಿಲಿಗುಟ್ಟಿದ್ದ. ಆದರೆ ಅವತ್ತು ಇಲ್ಲದ ಧೈರ್ಯ ತಂದುಕೊಂಡು ಅಲ್ಲೇ ಭೀಮಣ್ಣನ ಓಲಾಡುತ್ತಿದ್ದ ಲಟಾರಿ ಟೆಂಪೋದಲ್ಲಿಯೇ ಕುಳಿತುಕೊಂಡು ಒಂದು ಅದ್ಭುತವೆನಿಸುವಂತಹ ಪ್ರೇಮಪತ್ರವನ್ನು ಹಿಂದಿ ಭಾಷೆಯಲ್ಲಿ ಬರೆದು ಅವಳ ಕೈಗಿಟ್ಟಿದ್ದ. ಅವಳು ಕೂಡ ಅದನ್ನು ಅಲ್ಲಿಯೇ ಓದಿ ತನ್ನದೇ ಆದ ರೀತಿಯಲ್ಲಿ. ಯಾಕ ಪ್ರೀತಿ ಗಿತಿ ಅಂತ ತಲಿ ಕೆಡಸಕೊತಿ ಸೋಮ ನಿಂದ ಬರವಣಿಗಿ ಏನೊ ಛಂದ ಐತಿ, ಬರೆ ಅದನ್ನ ನೋಡಿ ನಿನ್ನ ಮದುವಿ ಹೆಂಗ ಅಗೋದು ಅದರಾಗ ಎನರ ಒಂದ ಸಾಧಿಸಿ ತೋರಿಸು ಆವಾಗ ನಾನ ನಮ್ಮಪ್ಪಂಗ ಹೇಳ್ತೇನಿ ನಿನಗ ಕೊಟ್ಟ ಮದುವಿ ಮಾಡಂತ। ಅದನ್ನ ಬಿಟ್ಟ ಹುಚ್ಚ್ರಂಗ ಪತ್ರ ಬರದರ ಏನೂ ಸಿಗಂಗಿಲ್ಲ ನೋಡು ಅಂತ ಅವನನ್ನು ಸುಮ್ಮನಾಗಿಸಿದ್ದಳು. ಅವರ ಎಲ್ಲ ಮಾತುಕತೆಯು ಹಿಂದಿಯಲ್ಲೆ ಸಾಗಿದ್ದರಿಂದ ಯಾರಿಗು ಅಷ್ಟಾಗಿ ತಿಳಿಯಲಿಲ್ಲ. ಅಷ್ಟರಲ್ಲಿ ಊರು ಬಂದಿತ್ತು.

ಎಲ್ಲರೂ ಕೆಳಗೆ ಇಳಿದು ಸೋಮನು ಇಳಿಯುವಾಗ ಅವನನ್ನು ತಡೆದ ಡ್ರೈವರ್ ಭೀಮಣ್ಣ ತನ್ನ ಗಿತೋಪದೇಶ ಪ್ರಾರಂಭಿಸಿದ್ದ। ಆ ಹುಡುಗಿ ಹೇಳಿದ್ದು ನನಗೂ ಅರ್ಥ ಆತಲೆ ಸೋಮ, ನನಗು ಚೂರ ಮುಸಲರ ಭಾಷೆ ಗೊತ್ತ (ಭೀಮಪ್ಪನ ದೃಷ್ಟಿಯಲ್ಲಿ ಹಿಂದಿ ಎಂದರೆ ಮುಸಲ್ಮಾನಿ ಭಾಷೆ). ನೀನ ಇಲ್ಲೇ ಹುಡುಗಿ ನಿನಗ ದಕ್ಕೊಂಗಿಲ್ಲ ನೋಡ, ಅಕಿ ಬೇಕ ಅಂದ್ರ ನೀನ ಧಾರವಾಡಕ್ಕ ಹೋಗಬೇಕ ಅಲ್ಲಿ ಬರೆ ನಿನ್ನಂತ ಜನಾನ ತುಂಬ್ಯಾರಂತ ಕತಿ ,ಹಾಡ ಬರಿಯೊ ಮಂದಿ. ಅಲ್ಲಿ ಹೋಗಿ ಸ್ವಲ್ಪ ದಿನಾ ದುಡಿಯಲೆ ಅವಾಗ ನಿಂದು ಕತಿ, ಹಾಡು ಪೇಪರನ್ಯಾಗ ಬಂದಾವು ಪೆಪರನ್ಯಾಗ ಬಂದಮ್ಯಾಲೆನ ರೊಕ್ಕಾನು ಬರತೆತಿ ಇಲ್ಲಿದ್ರ ಅಷ್ಟ ನೀನ ಉದ್ದಾರ ಆದಹಂಗ. ಭೀಮಣ್ಣ ಅಷ್ಟು ಹೇಳಿದ್ದೆ ನೆಪ ಸೋಮನಿಗೆ, ಸಾವಿತ್ರಿಗೆ ತಾನೆನೆಂದು ತೋರಿಸುವುದಕ್ಕೆ ಒಂದು ಅಖಾಡ ಸಿಕ್ಕಂತಾಗಿತ್ತು. ಮಗನ ಹುಚ್ಚು ನಿರ್ಧಾರ ಕೇಳಿ ಪಾರವ್ವನಿಗೆ ದಿಗಿಲಿಗಿಡಾಗಿತ್ತು. ಪಾರವ್ವ ಜಪ್ಪಯ್ಯ ಅಂದರು ಸೋಮನಿಗೆ ಧಾರವಾಡಕ್ಕೆ ಹೋಗುವುದಕ್ಕಾಗಿ ಹಣ ಕೊಡಲು ನಿರಾಕರಿಸಿದ್ದಳು. ಮಗ ಈಗಲಾದರೂ ಕಣ್ಣ್ಮುಂದೆ ಇರಲಿ ಎನ್ನುವ ಆಸೆ ಅವಳದು,ಸಾವಿತ್ರಿಯ ಮನಸ್ಸು ಗೆಲ್ಲಬೇಕೆಂದ್ರೆ ಧಾರವಾಡಕ್ಕೆ ಹೋಗಲೇಬೇಕೆಂಬ ಹಟ ಇವನದು. ಕಡೆಗೆ ಪಾರವ್ವ ಭಿಕ್ಷೆಗೆ ಅಂತ ಹೋದಾಗ ಸೊಮ ಅವಳು ದೇವರಿಗೆ ಮುಡಿಪು ಅಂತ ಎತ್ತಿಟ್ಟಿದ್ದ ದುಡ್ಡಿನಲ್ಲಿ ಭಂಡಾರ ಮಿಶ್ರಿತ ಐದು ರೂಪಾಯಿಯ ನಾಲ್ಕು ನೋಟುಗಳೊಂದಿಗೆ ಮನೆ ಬಿಟ್ಟಿದ್ದ. ಅವನು ಬಸ್ಟ್ಯಾಂಡಿಗೆ ಬರುವುದಕ್ಕೆ ಸರಿಯಾಗಿ ಭೀಮಣ್ಣನ ಪುಷ್ಪಕ ವಿಮಾನ ಬಂದಿತ್ತು। ಭೀಮಣ್ಣ ನೀ ಹೇಳಿದಂಗ ಧಾರವಾಡಕ್ಕ ಹೊಂಟೆನಿ ಸ್ವಲ್ಪ ರಾಣೇಬೆನ್ನೂರ ತನಕ ಬಿಡತೀಯಾ ಅಂತ ಕೇಳಿದ್ದ। ತನ್ನ ಉಪದೇಶ ಅವನಿಗೆ ನಾಟಿದ್ದಕ್ಕೆ ಸೋಮನನ್ನು ರಾಣೇಬೆನ್ನೂರಿನವರೆಗು ಪುಕ್ಕಟೆಯಾಗಿ ಕರೆದುಕೊಂಡು ಹೋಗಲು ಒಪ್ಪಿದ್ದ। ಸೋಮ ಗಾಡಿಯಲ್ಲಿ ಕುಳಿತು ಒಂದು ತಿಂಗಳಿನಿಂದ ನಡೆಯುತ್ತಿದ್ದ ಘಟನೆಗಳನ್ನು ನೆನಪಿಸಿಕೊಳ್ಳತೊಡಗಿದ. ಸಾವಿತ್ರಿಯ ಅಪ್ಪಣೆಯಾದ ನಂತರ ಸೋಮ ಗಂಭೀರವಾಗಿ ಬರವಣೆಗೆಯಲ್ಲಿ ತೊಡಗಿದ. ಒಂದು ಸಂಯುಕ್ತಕರ್ನಾಟಕದಲ್ಲೂ ಪ್ರಕಟವಾಗಿತ್ತು. ಅವತ್ತು ಸೋಮ ಮುಂಜಾನೆಯಿಂದ ತನ್ನ ಕಥೆ ಹಿಡಿದುಕೊಂಡು ಇಡೀ ದೇವರಗುಡ್ಡವನ್ನು ಸುತ್ತುಹೊಡೆದಿದ್ದ. ಸಾವಿತ್ರಿ ತುಟಿಯಂಚಲೇ ನಕ್ಕಿದ್ದಳು. ಅಂತೂ ಭೀಮಣ್ಣನ ಟೆಂಪೋ ಭರ್ತಿಯಾಗಿತ್ತು. ಅಷ್ಟರಲ್ಲೇ ಭೀಮಣ್ಣ ವರಾತ ಶುರು ಮಾಡಿದ ಗಾಡಿ ಯಾಕೋ ಚಾಲು ಆಗವಲ್ದು ಸ್ವಲ್ಪ ತಳ್ರೆಪಾ , ಜನ ಶಪಿಸುತ್ತಲೇ ಅವನ ಕೆಲಸ ಮಾಡಿಕೊಟ್ಟಿದ್ದರು. ಆ ಟೆಂಪೋ ಎಷ್ಟು ಹಳೆಯದೆಂದರೆ ಸೋಮನ ತಂದೆ ದ್ಯಾಮಪ್ಪ ತನ್ನ ಮದುವೆಗೆ ಅದರಲ್ಲಿಯೇ ಕೂನಬೇವಿಗೆ ಹೋಗಿದ್ದು, ಮತ್ತು ಸೋಮನ ನಾಮಕರಣಕ್ಕೂ, ಈಗ ಸ್ವತಃ ಸೋಮನೇ ಹೋಗುತ್ತಿದ್ದಾನೆ ಅದರಲ್ಲಿ ತನ್ನ ಕನಸುಗಳನ್ನು ಸಕಾರಗೊಳಿಸಲು.

ಅಂತೂ ಸೋಮ ಧಾರವಾಡ ತಲುಪಿದ. ಆದರೆ ಇರುವುದು ಎಲ್ಲಿ, ಏನೂ ಅಂತ ಒಂದು ತಿಳಿಯಲಿಲ್ಲ. ಸಾಹಿತಿಯಾಗಲಿಕ್ಕೆ ಬಂದವನಿಗೆ ಸ್ವಹಿತಕ್ಕೊಂದು ನೆಲೆಯಿರಲಿಲ್ಲ ಅಲ್ಲಿ. ಸುಮಾರು ದಿನಗಳ ಸತತ ಪ್ರಯತ್ನದಿಂದ ಸೋಮನಿಗೆ ಸುಭಾಷ ರೋಡಿನಲ್ಲಿ ಒಂದು ಚಾಕರಿ ದೊರಕಿತ್ತು. ಅವನಲ್ಲಿದ್ದ ಬರೆಯಬೇಕೆಂಬ ಉತ್ಸಾಹ ಕಂಡು ಪುಸ್ತಕದಂಗಡಿಯ ಮಾಲಿಕರು ಈ ತರ್ಜುಮೆ ಕೆಲಸವನ್ನು ನೀಡಿದ್ದರು ಈಗ ನೋಡಿದರೆ ಪೆನ್ನೆ ಮುಡುತ್ತಿಲ್ಲ, ಹೊಸ ಪೆನ್ನಿಗೆ ಹಣವಿಲ್ಲ. ಸರಿಯಾಗಿ ಅದೇ ಹೊತ್ತಿಗೆ ಅಲ್ಲಿ ದೇವರಗುಡ್ದದಲ್ಲಿ ಸಾವಿತ್ರಿ ಮದುವೆಯಾಗಿ ತನ್ನ ಗಂಡನೊಂದಿಗೆ ಮೊದಲ ಮಗುವಿನ ಹರಕೆಗಾಗಿ ಮೈಲಾರಲಿಂಗಯ್ಯನ ಗುಡ್ಡದ ಮೆಟ್ಟಿಲನ್ನು ಏರುತ್ತಿದ್ದಳು.
ಮಹೇಶ ಎಸ್ ಲಕ್ಶ್ಮೆಶ್ವರ