Tuesday, December 4, 2007

ಕುರಿಪಲ್ಯ

ನಾನ ಬಡಕೊಂಡೆ ಮುದುಕಿ ಏನೇನು ಆಸೆಪಡ್ತಿತ್ತು ಎಲ್ಲಾ ತಿಂಗಳ ತಿಥಿಗೆ ಮಾಡಿ ಹಾಕ್ರಿ ಅಂತ ಒಬ್ರರ ಕೆಳಿದ್ರೆ ನನ್ನ ಮಾತ, ಅನುಭವಿಸ್ರಿ ಈಗ. ಹಿಡಕೊಣದ, ಹಿಡಕೊಂಡಾಳ ನನಗರ ಹಿಡದಿದ್ದರ ನಾನು ಹೋಗತಿದ್ದೆ ಅತ್ಲಾಗ, ಹೋಗಿ ಆ ಶಾರಿಗೆ ಹಿಡ್ದಾಳ ನಿಮ್ಮವ್ವ . ಶಾರಿಗೆ ಹೊದ ವಾರರ ಗಂಡಿನ ಕಡೆದವ್ರು ನೋಡಿಕೆಂಡ ಹೋಗ್ಯಾರ ಇಲ್ಲಿ ನೋಡಿದ್ರ ಹಿಂಗಾಗಿ ಆಗಿ ಕುಂತದ . ಅಲ್ಲಾ ಅಕಿ ಆಸೆನರ ಎನಿತ್ತಪ್ಪಾ ಕ್ರಿಷ್ಣಪ್ಪ, ಬಂಗಾರ, ಮತ್ತೊಂದ, ಕುರಿ ಪಲ್ಯ ಅಂದ್ರ ಬಾಯಿ ಬಿಡ್ತಿದ್ಲ ತಿಂಗಳ ತಿಥಿಗೆ ಅದನ್ನ ಮಾಡಿಹಾಕಿಲ್ಲ ಅಂತ ಹೀಂಗ ಬಂದ ಕಾಡಾಕತ್ತಾಳ. ಕಾಲಕೇಜಿ ತಂದ ಮಾಡಿ ಹಾಕಿದ್ರ, ಹಿಂಗೆಲ್ಲಾ ಆಗತಿರಲಿಲ್ಲ ನೋಡ್ರಿ ಅಂತ ಮನೆಗೆ ಬಂದ ಪ್ರತಿಯೊಬ್ಬರಿಗೂ ತನ್ನ ಹೆಂಡತಿಯ ದೆವ್ವ ಇಪ್ಪತ್ತು ವರ್ಷದ ಮೊಮ್ಮಗಳು ಶಾರಿಗೆ ಹಿಡಿದಿದೆ ಎಂದು ಖಚಿತಪಡಿಸುತ್ತಿದ್ದ ಪಾಂಡಪ್ಪ . ನಿಮ್ಮಪ್ಪನ ಸುಮ್ಮನ ಕುಂದ್ರಸ್ರಿ ಇನ್ನೇನ ಡಾಕ್ಟರ ಬರೋ ಹೊತ್ತ ಆತು, ಅವರ ಮುಂದನು ಹಿಂಗ ಮಾತಾಡಿ ನಮ್ಮ ಮರ್ಯಾದಿ ಮಣ್ಣಪಾಲ ಮಾಡಿಗಿಡ್ಯಾನು . ಅಂದವಳು ಮುದುಕ ಪಾಂಡಪ್ಪನ ಮಗ ಕ್ರಿಷ್ಣಪ್ಪನ ಹುಬ್ಬಳ್ಳಿ ಹೆಂಡತಿ. ಕ್ರಿಷ್ಣಪ್ಪ ಎಲ್ಲೋ ದಿಗಂತದಲ್ಲಿ ನೋಡುತ್ತ ಹೂಂಗುಟ್ಟಿದ ಆದರೆ ಅಲ್ಲಿಂದ ಕದಲಲಿಲ್ಲ.
ಪಾಂಡಪ್ಪ ಇಡೀ ರಾಣೇಬೆನ್ನೂರಿಗೆ ಪೇಪರ ಪಾಂಡಪ್ಪ ಅಂತಲೇ ಪರಿಚಯ. ಹುಬ್ಬಳ್ಳಿಯಿಂದ ಮುಂಜಾನೆ ನಾಲ್ಕಕ್ಕೇ ಬರುತ್ತಿದ್ದ ಏಕಮಾತ್ರ ಕನ್ನಡ ದಿನ ಪತ್ರಿಕೆ ಸಂಯುಕ್ತ ಕರ್ನಾಟಕದ ಅಧಿಕೃತ ಏಜೆಂಟ ಅವನು. ನಾಲ್ಕು ಘಂಟೆಗೆ ಪ್ರಾರಂಭವಾಗುತ್ತಿದ್ದ ಅವನ ಪೇಪರ ಹಾಕುವ ಕಾರ್ಯಕ್ರಮ ಆರು ಘಂಟೆಗೆಲ್ಲಾ ಮುಗಿದು ಹೋಗುತ್ತಿತ್ತು. ಊರಾದರೂ ಎಷ್ಟು ದೊಡ್ಡದಿತ್ತು , ಈ ಕಡೆ ಗೌಡ್ರ ಓಣಿಯಿಂದ ರೈಲ್ವೇ ಸ್ಟೇಷನವರೆಗೂ , ಆ ಕಡೆ ಪಶ್ಚಿಮ ಪ್ಲಾಟನಿಂದ ಚೌಡವ್ವನ ಗುಡಿಯವರೆಗು ಮುಗಿಯಿತು ಊರು ಇದ್ದಿದ್ದೆ ಅಷ್ಟು. ಅದರಲ್ಲೂ ಕನ್ನಡ ಪತ್ರಿಕೆ ಓದುವುವರು ಶೇಕಡಾ ೬೦ಇದ್ದರು ಅನ್ನಿ, ಮಿಕ್ಕವರು ಎಲ್ಲಾ ಮಾರವಾಡಿ ಶೇಠಗಳೆ ತುಂಬಿದ್ದರು ಊರಿನಲ್ಲಿ. ಪಾಂಡಪ್ಪನೂ ಪಕ್ಕದ ಹಾವನೂರಿನಿಂದ ವಲಸೆ ಬಂದವನೆ . ಅವನ ಪೂರ್ವಜರೆಲ್ಲ ಅವರ ಕುಲಕಸುಬಾದ ನೇಯ್ಗೆ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತ ಬದುಕಿನ ಕಡೆಯ ದಿನಗಳನ್ನು ಮುಗಿಸುವ ಪ್ರಯತ್ನದಲ್ಲಿದ್ದರು. ತಾನು ಇವರಂತಾಗುವುದು ಬೇಡವೆಂದು ಪಾಂಡಪ್ಪ ಮದುವೆಯಾದ ತಕ್ಷಣ ರಾಣೇಬೆನ್ನೂರು ಸೇರಿಕೊಂಡಿದ್ದ. ಕಲೆತ ನಾಲ್ಕನೇ ಕ್ಲಾಸು ಸಂಯುಕ್ತ ಕರ್ನಾಟಕ ಮಾರಾಟಕ್ಕೆ ಸಹಾಯ ಮಾಡಿತ್ತು. ಪಾಂಡಪ್ಪನ ಹೆಂಡತಿ ಸೀತವ್ವ ಗಂಡ ಮುಂಜಾನೆ ನಾಲ್ಕಕ್ಕೆ ಎದ್ದು ಹೋಗುವುದನ್ನ ಭಯ ಮಿಶ್ರಿತ ಆಶ್ಚರ್ಯಗಳಿಂದ ನೋಡುತ್ತಿದ್ದಳು. ತನ್ನ ಕೆಲಸವೇ ಅದು, ಜನರಿಗೆ ಪೇಪರ ಹಂಚುವುದು ಮತ್ತು ಅದರಿಂದಲೇ ನಮ್ಮ ಹೊಟ್ಟೆಗೆ ಅನ್ನ ಅಂತ ಸಿಗುವುದು ಅಂತ ಅವಳಿಗೆ ತಿಳಿಸುವುದರಲ್ಲಿ ಸಾಕು, ಸಾಕಾಗುತ್ತಿತ್ತು ಅವನಿಗೆ.ಹೀಗೆ ಸುಖವಾಗಿ ಸಾಗುತ್ತಿದ್ದ ಪಾಂಡಪ್ಪನ ಸಂಸಾರದಲ್ಲಿ ಮಕ್ಕಳಿಲ್ಲ ಎನ್ನುವ ಕೊರಗು ಮಾತ್ರ ಬಿಟ್ಟು ಬಿಡದೆ ಕಾಡುತ್ತಿತು. ಗಂಡಹೆಂಡತಿ ಸುತ್ತಮುತ್ತಲಿನ ಎಲ್ಲಾ ದೇವರಿಗೂ ಹೋಗಿಬಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಕಡೆಗೆ ಮನೆ ದೇವರಾದ ಹಾವನೂರದ್ಯಾಮವ್ವನಿಗೆ ಜೋಡಿ ಕುರಿಗಳ ಬ್ಯಾಟಿ ಕೊಡುತ್ತೆವೆ ಎಂದು ಹರಕೆ ಹೊತ್ತಾಗಲೇ ಸೀತವ್ವನ ಹೊಟ್ಟೆಯಲ್ಲಿ ಪಾಂಡಪ್ಪನ ಮೊದಲ ಬೀಜ ಮೊಳಕೆಯೊಡೆದಿದ್ದು. ಅದನ್ನು ಸೀತಮ್ಮ ಪ್ರಕಟಿಸಿದ್ದು ತನ್ನ ಕುರಿಪಲ್ಯವನ್ನು ತಿನ್ನುವ ಆಸೆಯಿಂದಲೇ. ಅವತ್ತು ಪಾಂಡಪ್ಪ ಇಡೀ ಊರಿಗೆ ಸಂಯುಕ್ತಕರ್ನಾಟಕದ ಜೊತೆಗೆ ಸಿಹಿಬೂಂದಿಯನ್ನು ಹಂಚಿದ್ದ.ಪೇಪರ ಏಜನ್ಸಿಯಿಂದ ಬರುತ್ತಿದ್ದ ಹಣ ಕೇವಲ ಇಬ್ಬರ ಹೊಟ್ಟೆಗೆ ಸರಿ ಹೋಗುತ್ತಿತ್ತು ಈಗ ಕ್ರಿಷ್ಣನ ಆಗಮನ,ಮತ್ತು ಅವನಿಗಾಗಿ ಹೊತ್ತ ಹರಕೆಗಳನ್ನು ಪೂರೈಸುವುದು, ಇವಿಗಳಿಗೆಲ್ಲಾ ಹಣ ಎಲ್ಲಿಂದ ತರುವುದು . ಸಾಲ ಜನ್ಮದಲ್ಲೆ ಮಾಡುವುದಿಲ್ಲವೆಂದು ನಿರ್ಧಾರ ಬೇರೆ ಮಾಡಿದ್ದನಲ್ಲ. ಆಗ ಪಾಂಡಪ್ಪ ( ಸ.ಕ) ಜೊತೆಗೆ ವರ್ಷದ ಕ್ಯಾಲೆಂಡರ್ ಮಾರುವುದಕ್ಕೆ ಶುರುಮಾಡಿದ. ಅದನ್ನು ಹುಬ್ಬಳ್ಳಿಯಿಂದಲೇ ತರುತ್ತಿದ್ದ. ಪಿ ಸಿ ಶಾಬಾದಿಮಠ ಕ್ಯಾಲೆಂಡರ್ ಅಂದ್ರೆ ಪ್ರತಿಷ್ಠೆಯೇ ಸರಿ ಜನ ಮುಗಿಬಿದ್ದು ಖರೀದಿಸುತ್ತಿದ್ದರು। ಪಾಂಡಪ್ಪನಿಗೆ ಗೊತ್ತಿತ್ತು ಕ್ಯಾಲೆಂಡರ್ ವ್ಯಾಪಾರವೆನಿದ್ದರೂ ಕೇವಲ ಎರಡೇ ತಿಂಗಳಿನದು ಅಂತ ಅದಕ್ಕೆ ಅದರ ಜೊತೆ ಎ ಬಿ ಸಿ ಡಿ , ನಂಬರಿನ ತೂಗುಪಟ, ಆಗ ತಾನೆ ಪ್ರಾರಂಭವಾಗಿದ್ದ ಕರ್ಮವೀರ ವಾರಪತ್ರಿಕೆ,ಹೊಸ ಕನ್ನಡ ಚಿತ್ರಗೀತೆಗಳು , ಸಿನಿಮಾ ನಾಯಕರ ಭಾವಚಿತ್ರಗಳು,ದಸರೆಗೆ ದೇವಿ ಮಹಾತ್ಮೆ, ಊರಿನಲ್ಲಿ ಹೊಸದಾಗಿ ಕಟ್ಟಿದ ಏಸು ಸ್ವಾಮಿ ದೇವಸ್ಥಾನಕ್ಕೆ ಸಂಭಂದಿಸಿದ ಪುಸ್ತಕ, ರಾಜ್ಯೋತ್ಸವ, ಅಗಸ್ಟ ೧೫ ಕ್ಕೆ ಬಾವುಟಗಳ ಮಾರಾಟ, ಹೀಗೆ ಪಟ್ಟಿ ಬೆಳೆಯುತ್ತ ಹೋಯಿತು ಆದರೆ ಪಾಂಡಪ್ಪ ದುಡ್ಡು ಅಂತ ಕಂಡದ್ದು ವರಮಾಹಾಲಕ್ಷ್ಮಿ ಪೋಜೆಯ ಪುಸ್ತಕದಲ್ಲಿಯೇ ಅಷ್ಟೊಂದು ಮಾರಾಟವಾಗುತ್ತಿತ್ತದು । ನಂತರದ ದಿನಗಳಲ್ಲಿ ಪಾಂಡಪ್ಪ ತಿರುಗಾಡಿದ್ದು ಸಾಕೆಂದು ಎಮ್ ಜಿ ರಸ್ತೆಯ(ರಾಣೇಬೆನ್ನೂರಿನಲ್ಲೂ ಒಂದು ಎಮ್ ಜಿ ರಸ್ತೆ ಇದೆ) ಸಂಪತ್ ಸ್ಟೀಲ್ ಅಂಗಡಿಯ ಶೇಠನ ಕೈಕಾಲು ಹಿಡಿದು ಅವನ ಅಂಗಡಿಯ ಎದುರು ತನ್ನ ಪುಸ್ತಕ ಮಾರಾಟಕ್ಕೆ ಜಗ ಗಿಟ್ಟಿಸಿಕೊಂಡ ಆ ಜಾಗ ಸಿಕ್ಕ ಮೇಲೆಯೇ ಪಾಂಡಪ್ಪ ಒಂದು ಸ್ವಂತ ಮನೆ , ಹೆಂಡತಿಯ ಕೊರಳತಾಳಿಗೆ ಎಂಟು ಅರಗು ಮಿಶ್ರಿತ ಬಂಗಾರದ ಗುಂಡುಗಳು, ಬೆಳೆದ ಮಗನಿಗೆ ಒಂದು ಸೈಕಲ್ಲು(ಆದರೆ ಕ್ರಿಷ್ಣ ತನ್ನ ಜೀವಮಾನದಲ್ಲೇ ಸೈಕಲ್ಲ ಓಡಿಸುವುದನ್ನು ಕಲೆಯಲಿಲ್ಲ) ಅಂತ ಮಾಡಿದ್ದು. ಇಷ್ಟೇಲ್ಲಾ ಆದ ನಂತರ ಅವನ ಮನೆಗೆ ಸಂಭಂದಿಕರ ಆಗಮನವು ಹೆಚ್ಚಾಯಿತು. ಮೊದಲು ಪಾಂಡಪ್ಪ ಯಾರ ಮನೆಗಾದರೂ ಹೋದರೆ ಹಣಕ್ಕೆ ಬಂದಿರಬಹುದು ಎಂದು ಊಹಿಸುತ್ತ, ಮತ್ತು ಅವನು ಕೇಳದೆ ಇದ್ದಾಗ ತಮ್ಮ ಊಹೆ ತಪ್ಪಾಯಿತು ಎಂದು ಬೇಸರ ಪಡುತ್ತಿದ್ದ ಅದೇ ಜನ ಈಗ ಅವನ ಬಾಗಿಲಿಗೆ ಬರುವಂತಾಗಿದ್ದರು.ಪಾಂಡಪ್ಪ ಬಂದವರನ್ನು ಸರಿಯಾಗಿ ಉಪಚರಿಸಿಯೆ ಕಳುಹಿಸಿಕೊಡುತ್ತಿದ್ದ.ಕ್ರಿಷ್ಣಪ್ಪ ಎಂಟನೇ ಕ್ಲಾಸಿನ ವರೆಗೂ ಕಲೆತು ನಂತರ ಮುಂದೆ ಶಾಲೆಗೆ ಹೋಗದೆ ಅದೇ ಎಮ್ ಜಿ ರಸ್ತೆಯ ಹರಕಚಂದ ಶೇಠನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ ಪಾಂಡಪ್ಪ ತನ್ನ ಕೆಲಸ ತನ್ನ ಜೊತೆಗೆ ಮಣ್ಣಾಗುತ್ತದೆ ಎಂದು ತುಂಬ ವ್ಯಥೆಪಟ್ಟುಕೊಂಡ. ಕ್ರಿಷ್ಣಪ್ಪ ಮದುವೆ ವಯಸ್ಸಿಗೆ ಬಂದಾಗ ಪಾಂಡಪ್ಪ ಸಭಂದಿಕರಲ್ಲೆ ಹೆಣ್ಣು ತರದೆ ದೂರದ ಹುಬ್ಬಳ್ಳಿಯಿಂದ ಹೊರಗಿನ ಹೆಣ್ಣುತಂದು ಮದುವೆ ಮಾಡಿದ.ಪಾಂಡಪ್ಪನ ಹೆಂಡತಿ ಸೀತವ್ವ ಯಾವುದಕ್ಕೂ ತಕರಾರು ಮಾಡದೆ ತನ್ನ ಪಾಡಿಗೆ ತಾನಿದ್ದಳು। ಒಂದು ರೀತಿಯಲ್ಲಿ ಅವಳ ಜಗತ್ತು ತೀರ ಚಿಕ್ಕದು, ತಾನು, ತನ್ನ ಗಂಡ, ಮತ್ತು ಮಗ, ಇಷ್ಟೇ.ಅವಳ ತವರು ಮನೆಕಡೆಯವರು ಯಾರು ಬದುಕಿರಲಿಲ್ಲ. ಅವಳ ತಮ್ಮನ ಮಗ ಹುಬಳ್ಳಿಯ ಬಸ್ಯ್ಟಾಂಡ ಹತ್ತಿರ ಯಾವುದೊ ಮಿಠಾಯಿ ಅಂಗಡಿಯಲ್ಲಿ ಇದ್ದಾನೆ ಎಂದು ತಿಳಿದಿತ್ತು ಅಷ್ಟೆ ಯಾರು ನೋಡಿರಲಿಲ್ಲ. ಆದರೆ ಆ ಕೊರಗು ಅವಳನ್ನು ಸಾಯುವವರೆಗೂ ಬಿಡಲಿಲ್ಲ. ಸೂಕ್ಷ್ಮಗ್ರಾಹಿ ಪಾಂಡಪ್ಪ ಹುಬ್ಬಳ್ಳಿಗೆ ಹೋದಾಗಲೆಲ್ಲ ಅವನನ್ನು ಹುಡುಕುವ ಪ್ರಯತ್ನ ಪಟ್ಟಿದ್ದ. ಎಲ್ಲಿಂದ ಸಿಕ್ಕಾನು ಅಂತಹ ದೊಡ್ಡ ಶಹರದಲ್ಲಿ ಅವನ ಒಂದು ಫೋಟೊ ಸಹ ಇಲ್ಲ ಇವರ ಹತ್ತಿರ. ಸೀತವ್ವ ಗಂಡ ಊರಿನಿಂದ ಬಂದ ತಕ್ಷಣ ಅವನ ಮುಖ ನೋಡುತ್ತಿದ್ದಳು ಇವನಲ್ಲಿ ಉತಾರವಿರುತ್ತಿರಲಿಲ್ಲ.
ಕೇವಲ ಒಂದೇ ಸಂತಾನ ಪಡೆದಿದ್ದ ಪಾಂಡಪ್ಪನ ಮನೆ ಕ್ರಿಷ್ಣಪ್ಪನ ಮದುವೆಯ ನಂತರವೇ ನಂದಗೋಕುಲವಾಗಿದ್ದು ,ಆದರೆ ಕ್ರಿಷ್ಣಪ್ಪನಿಗೆ ಹುಟ್ಟಿದ ಮೂರು ಮಕ್ಕಳು ಹೆಣ್ಣಾಗಿದ್ದರಿಂದ ಕ್ರಿಷ್ಣಪ್ಪನ ಮುಖದಲ್ಲಿ ಒಂದು ಚಿಂತೆಯ ಗೆರೆ ಅಚ್ಚಳಿಯದಂತೆ ಉಳಿದು ಹೋಯಿತು. ಕ್ರಮೆಣ ಕ್ಷೀಣವಾಗುತ್ತಿದ್ದ ಅಪ್ಪನ ವ್ಯಾಪಾರ ,ರೋಗಗ್ರಸ್ಥ ತಾಯಿ, ಶ್ರೀಮಂತ ಹೆಂಡತಿಯ ಹಂಗಿನ ಮಾತುಗಳು, ಇವುಗಳೆಲ್ಲದರಿಂದ ಕ್ರಿಷ್ಣಪ್ಪ ಈ ಲೋಕದ ಮನುಷ್ಯನಾಗೆ ಇರಲಿಲ್ಲ. ಹುಟ್ಟಿದ ಮೂರು ಮಕ್ಕಳಲ್ಲಿ ನಂತರದ ಎರಡು ಹುಡುಗಿಯರು ಸಣ್ಣ ತಲೆಯವು ಹುಟ್ಟಿದ್ದವು, ಹೀಗೆ ಹೇಳುವುದಾದರೆ ಮನುಷ್ಯರ ದೇಹ ಕುರಿಯ ತಲೆ, ಕ್ರಿಷ್ಣಪ್ಪನ ಹೆಂಡತಿಗೆ ಇದು ಹೊಸದಾಗಿ ಕಂಡರೆ ಅವನ ಅಪ್ಪ, ಅಮ್ಮ, ಇದು ಯಾವ ತಪ್ಪಿ ಹೋದ ಹರಕೆಯ ಶಾಪ ಎಂದು.ಕ್ರಿಷ್ಣಪ್ಪ ಒಂದು ವಿಚಿತ್ರವಾದ ಯಾರಿಗೂ ಹೇಳಿಕೊಳ್ಳಲಿಕ್ಕಾಗದ ಸಂತೋಷದಲ್ಲಿದ್ದ. ಸಣ್ಣ ತಲೆಯ ಮಕ್ಕಳು ಅಬ್ಬಬ್ಬಾ ಅಂದರೆ ಐದು ವರ್ಷ ಬದುಕಿಯಾವು ನೋಡಿಲ್ವಾ ನಾನು ಚಿಕ್ಕಪ್ಪನ ಮಕ್ಕಳೇ ಹುಟ್ಟಿದ್ದವಲ್ಲಾ ಹೀಗೆ ಸಣ್ಣ ತಲೆಯವು ,ಸರಿಯಾಗಿ ಐದು ವರ್ಷವು ಬದುಕಲಿಲ್ಲ ಅವು ಒಂದರಹಿಂದೆ ಒಂದರಂತೆ ಎರಡೇವರ್ಷಗಳ ಅಂತರದಲ್ಲಿ ಹೋರಟೆ. ಗಂಡಾಗಲಿ, ಗಂಡಾಗಲಿ ಎಂದು ಪ್ರಯತ್ನಿಸಿ ಮೂರು ಹೆಣ್ಣನ್ನೆ ಕರೆತಂದಿದ್ದ ಕ್ರಿಷ್ಣಪ್ಪ ಮೂರು ಅದೇ ಆದಾಗ ತನ್ನ ಪ್ರಯತ್ನಕ್ಕೆ ಪೂರ್ಣವಿರಾಮ ಹಾಕಿದ್ದ। ಈಗ ಮೂರರಲ್ಲಿ ಎರಡಕ್ಕೆ ಸಣ್ಣತಲೆ, ಬೆಳೆಯುವ ಮೊದಲೆ ಮುರಿದು ಬಿದ್ದಿದ್ದವು ಅವು. ಕ್ರಿಷ್ಣಪ್ಪ ಅದಕ್ಕೆ ಸಂತೋಷವನ್ನು ಪಡಲಿಲ್ಲ, ದುಖ;ವಂತೂ ಮೊದಲೆ ಆಗಲಿಲ್ಲ. ಈಗ ಉಳಿದಿರುವ ಒಬ್ಬಳು ಖರ್ಚು ಆದರೆ ಮುಗಿಯಿತು ನನ್ನ ಜವಾಬ್ದಾರಿ ಅಂದುಕೊಂಡಿದ್ದ.ಅಷ್ಟರಲ್ಲೆ ಶುರುವಾಯಿತಲ್ಲಾ ಸೀತವ್ವನ ವಿಚಿತ್ರ ಕಾಯಿಲೆ. ಸರುರಾತ್ರಿ ಮನೆಯಿಂದ ಓಡುವುದಕ್ಕೆ ಶುರುಮಾಡಿದಳೆಂದರೆ ಹೋಗಿ ನಿಲ್ಲುತ್ತಿದ್ದದ್ದು ಉಕ್ಕಡಗಾತ್ರಿ ಕಡೆ ಹೋಗುವ ರಸ್ತೆಯ ಕಡೆಗೆ. ಗಂಡಸರ ತರಹ ನಿಂತುಕೊಂಡೆ ಜಲಭಾದೆ ತೀರಿಸುವುದು, ಎಲ್ಲರನ್ನೂ ಅವ್ಯಾಚ್ಚ ಶಬ್ದಗಳಿಂದ ನಿಂದಿಸುವುದು ಇದರಿಂದ ಎಲ್ಲರಿಗೂ ಸಾಕು ಸಾಕಾಗಿತ್ತು ಯಾವುದೊ ದೆವ್ವ ಹಿಡಿದಿದೆ ಅಂತಲೇ ಮಾತಾಡಿಕೊಂಡರು ಅದರೆ ಅವಳಿಗೆ ಬಂದಂತಹ ಕಾಯಿಲೆ ಯಾವುದು ಅಂತ ತಿಳಿದುಕೊಳ್ಳುವುದಕ್ಕೆ ಯಾರು ಪ್ರಯತ್ನ ಪಡಲಿಲ್ಲ. ಅವಳ ಎಲ್ಲ ಆಟಗಳು ನಿಂತಿದ್ದು ಅವಳ ಸಾವಿನ ನಂತರವೇ . ಒಬ ಪಾಂಡಪ್ಪನ ಹೊರತಾಗಿ ಯಾರಿಗೂ ಅಷ್ಟು ನೋವೂ ಆಗಲಿಲ್ಲ.ಪಾಂಡಪ್ಪ ಅಂದಿನಿಂದ ಮಾತೆ ನಿಲ್ಲಿಸಿದ, ಅವನ ಪಕ್ಕದಲ್ಲಿ ತಟ್ಟೆ ಬಂದರೆ ಊಟ ಇಲ್ಲದಿದ್ದರೆ ಊಪವಾಸ . ಕ್ರಿಷ್ಣಪ್ಪನು ಅದರ ಬಗ್ಗೆ ಹೆಚ್ಚು ತೆಲೆ ಕೆಡಿಸಿಕೊಂಡಿರಲಿಲ್ಲ. ಸೀತವ್ವನ ತಿಂಗಳ ತಿಥಿಯಾಗಿ ಸರಿಯಾದ ಒಂದು ವಾರಕ್ಕೆ ಶಾರಿಯ ಹುಚ್ಚಾಟಗಳು ಶುರುವಾಗಿದ್ದವು. ರಾತ್ರಿ ವೇಳೆ ಪೂಜೆಗೆ ಕೂಡುವುದು, ಅಜ್ಜಿಯ ಹಾಗೆ ಗಂಡಸರ ತರಹ ನಿಂತುಕೊಂಡು.. . ಅವಳಂತೆಯೆ ಮಾತನಡುವುದು, ನನ್ನ ಮೊಮ್ಮಗನನ್ನ ಹುಡಕಲಿಲ್ಲ ನೀವು ಎಂದು ಎದೆ , ಎದೆ ಬಡಿದುಕೊಳ್ಳುವುದು, ಇದೆಲ್ಲದರಿಂದ ರೋಸಿಹೋದ ಕ್ರಿಷ್ಣಪ್ಪನ ಹೆಂಡತಿ ಮಗಳನ್ನು ಹೊರಗೆ ಕಳುಹಿಸುವುದನ್ನೆ ನಿಲ್ಲಿಸಿದಳು. ಮನೆಯಲ್ಲಿ ಕುರಿಪಲ್ಯ ಮಾಡಿಹಾಕ್ರೋ ಅಂತ ಮನೆ ಸೂರು ಕಿತ್ತು ಹೋಗುವ ಹಗೆ ಕಿರುಚುವುದು,ಊಟಕ್ಕೆ ಕುಳಿತರೆ ಇಪ್ಪತ್ತು ರೊಟ್ಟಿಗಳನ್ನು ಒಂದೇ ಸಾರಿ ಮುಗಿಸುವುದು, ಮತ್ತು ಅಜ್ಜಿಯ ತರಹವೇ ಉಕ್ಕಡಗಾತ್ರಿಯ ದಾರಿಗೆ ಹೋಗಿ ನಿಲ್ಲುವುದು, ಇನ್ನು ಸುಮ್ಮನಿದ್ದದ್ದು ಸಾಕೆಂದು ಪಾಂಡಪ್ಪ ಬಾಯಿಬಿಟ್ಟಿದ್ದ.ಸೀತವ್ವನ ದೆವ್ವವೇ ಶಾರಿಗೆ ಹಿಡಿದುಕೊಂಡಿರುವುದು ಅಂತ.ಕ್ರಿಷ್ಣಪ್ಪನ ಹೆಂಡತಿ ಹ್ಯಾಗೆ ನಂಬಿಯಾಳು ಅಷ್ಟೊಂದು ಓದಿದವಳು. ಡಾಕ್ಟರ ಸಹ ಕೈಚಿಲ್ಲಿದಾಗ, ಕುರಿಪಲ್ಯ ಮಾಡಿ ಇನ್ನೊಮ್ಮೆ ಸೀತವ್ವನ ತಿಥಿ ಮಾಡಿದರೂ ಹುಚ್ಚಾಟ ನಿಲ್ಲದಿದ್ದಾಗ ಉಕ್ಕಡಗಾತ್ರಿಯ ಅಜ್ಜಯ್ಯನ ಹತ್ತಿರ ಹೋದರೆ ಅಲ್ಲಿ ಶಾರಿ ಹುಚ್ಚು ಅತೀರೆಕಕ್ಕೆ ಹೋಯಿತು ಯಾವುರ್ ಅಜ್ಜಯ್ಯಲೆ ನೀನು ನನ್ನ ಮೊಮ್ಮಗ ಸಿಗೊಗಂಟ ಹೋಗಕಿ ಅಲ್ಲ ನಾನು, ಥೂ ನಿನ್ನ ಜನ್ಮಕ್ಕ ಬೆಂಕಿ ಹಾಕ ನನ್ನ ತಮ್ಮನ ಮಗನಿಗೆ ನನ್ನ ಮೊಮ್ಮಗಳನ್ನ ಕೊಡಬೇಕ ಅನ್ನೋ ಆಸೆ ಹಂಗ ಉಳಿಸಿ ಬಿಟ್ಟೆಲ್ಲೊ ಅಜ್ಜಯ್ಯಾ, ಬರಲಿ ಅಮವಾಸಿ ಅವತ್ತ ಮಾಡತೆನಿ ನಿನಗ ಅಂದವಳೆ ದೇವಸ್ಥಾನ ತುಂಬ ಉರುಳಾಟ ಪ್ರಾರಂಭಿಸಿ ಬಿಟ್ಟಳು. ಊರಿಗೆ ಬಂದ ತಕ್ಷಣ ಕ್ರಿಷ್ಣಪ್ಪ ಒಂದು ವಾರಕ್ಕೆ ಆಗುವಷ್ಟು ಬಟ್ಟೆಗಳೊಂದಿಗೆ ಹುಬಳ್ಳಿಗೆ ಹೊರಟುಹೋದ.

ನಮ್ಮ ಬೀchi ನೆನಪು

ನಾವು ಇಂದು ನೋಡುತ್ತಿರುವ, ಅನುಭವಿಸುತ್ತಿರುವ ಗಬ್ಬುತನವನ್ನು ಬೀಚಿಯವರು ಅಂದೇ ಕಂಡಂತಿದೆ । ಅವರ "ಉತ್ತರಭೂಪ" ಕೃತಿಯಿಂದ ಆಯ್ದ ಪ್ರಶ್ನೋತ್ತರಗಳು ಹೀಗಿವೆ।

ನಮ್ಮ ದೇಶದಲ್ಲಿರುವ ಅದ್ಭುತಾಶ್ಚರ್ಯಗಳಾವುವು??

ಬೇಕಾದಷ್ಟಿವೆ-ಹಣ ಮಾಡದ ರಾಜಕಾರಣಿ,ವಿನಯಶೀಲ ಸಾಹಿತಿ,
ಲೈಟ ಕಂಬಕ್ಕೆ ಕಲ್ಲು ಹೊಡೆಯದ ವಿದ್ಯಾರ್ಥಿ,
ಎಲ್ಲ ತಪ್ಪೂ ವಿದ್ಯಾರ್ಥಿಯದೇ ಅನ್ನದ ಗುರು,
ಹೆಂಡತಿಗೆ ಹೆದರದ ಅಧಿಕಾರಿ,
ಗಂಡನ ಮೇಲೆ ಸಂಶಯವಿಲ್ಲದ ಹೆಂಡತಿ,
ತಾನು ತ್ರಿಲೋಕ ಸುಂದರಿ ಎಂದು ತಿಳಿಯದ ಹೆಣ್ಣು,
ಅಂತಹವಳು ಹಿಂದು ಬರುವಾಗ ತಿರಿತಿರಿಗಿ ನೋಡದ ಮುದುಕ,
ಅಪಪ್ರಚಾರಕ್ಕೆ ಆಸ್ಪದ ಕೊಡದ ಸ್ವಾಮಿಗಳು-ಈ ಒಂಬತ್ತು ಅದ್ಭುತಾಶ್ಚರ್ಯಗಳಲ್ಲವೇ??
ಈಗ ಇವುಗಳನ್ನ ಇಂದಿಗೆ ಹೀಗೆ ಹೊಲಿಸಬಹುದೆ।

ಪಕ್ಷ ಬಿಟ್ಟು ಹೊಗುತ್ತೆನೆ ಎಂದು ಹೇಳುವ ಸಹ ರಾಜಕಾರಣಿಗೆ ನಿನ್ನ ಹಗರಣಗಳನ್ನು ಬಯಲಿಗೆಳೆಯುತ್ತೆನೆ ಅನ್ನದ ರಾಜಕಾರಣಿ,
ಬಡ್ಡಿ ಇಲ್ಲದೆ ಸಾಲ ನೀಡುವ ಬ್ಯಾಂಕುಗಳು,
ಕರೆದಲ್ಲಿಗೆ ಬರುವ ಬೆಂಗಳೂರಿನ ಅಟೋಗಳು,
ಹಗರಣಗಳಿಲ್ಲದ ಸಂಸ್ಥೆಗಳು,
ವಶಿಲಿಗಳಿಲ್ಲದೆ ಸಿಗುವ ನೌಕರಿಗಳು,
ಐದು ವರ್ಷ ಸ್ಥಿರವಾಗಿ ನಡೆಯುವ ಸರ್ಕಾರಗಳು,
ಸಹೊದ್ಯೋಗಿಗಳಿಗೆ ಕಿರಿಕಿರಿ ಮಾಡದ ಪ್ರೊಜೆಕ್ಟ ಮ್ಯಾನೆಜರಗಳು,
ಆಸ್ತಿಯಿಲ್ಲದ ಹೈಟೆಕ್ ಸ್ವಾಮಿಗಳು,
ಮತ್ತು ಹೋದ ತಕ್ಷಣಕ್ಕೆ ಆಗುವ ಸರ್ಕಾರಿ ಕೆಲಸಗಳು।

ಇನ್ನಷ್ಟು ಬೀಚಿಯವರ ಬರಹಗಳು ಹೀಗಿವೆ।

ಮನುಷ್ಯನ ಅಧ:ಪತನದ ನಾಂದಿ, ಯಾವುದು??

ಪರ ವಂಚನೆಯಿಂದ ನಾಂದಿ, ಆತ್ಮ ವಂಚನೆಯಿಂದ ಮುಕ್ತಾಯ।

ಇನ್ನೊಂದು
ದಿನದಿನಕ್ಕೆ ಮಾನವ ಸುಧಾರಿಸಿದಂತೆ
ಅವನ ಅಕಾರವೇಕೆ ಬದಲಾಗುತ್ತಿಲ್ಲ??

ಆಕಾರ ಇದ್ದ ಹಾಗೇ ಇರುತ್ತದೆ।ವಿಕಾರಗಳಷ್ಟೇ ಬೇಗ ಬೇಗ ಬದಲಾಗುತ್ತದೆ।
ಮತ್ತೊಂದು
ಆಹಾರ ಸಮಸ್ಯ ಎಂದಿನವರೆಗೆ?
ಹಸಿವು ಇರುವವರೆಗೆ ಮಾತ್ರ।
ಬರೆದರೆ ಬ್ಲಾಗೆ ತುಂಬಿತು ಅಂತ ನೀವೆನಂತೀರಿ??