Wednesday, October 24, 2007

ಮಳೆ

ಇನ್ನೂ ಎರಡೆ ನಿಮಿಷ ಕಾಲುವೆ ತುಂಬಲಿಕ್ಕೆ ರಸ್ತೆಯ ಮಟ್ಟದಿಂದ ಆರಡಿ ಕೆಳಗೆ ಕಾಲುವೆ ಇದೆ, ಇದೇ ರೀತಿ ಮಳೆ ಸುರಿದರೆ ಪಕ್ಕದಲ್ಲಿರುವ ಗುಡಿಸಲುಗಳಿಗು ನುಗ್ಗುತ್ತೆ ನೀರು, ಯಾವ ಕಾಲವಾಗಿತ್ತು ಬೆಂಗಳೂರಿಗೆ ಇಂತಹ ಮಳೆ ಬಂದು, ನಾನು ಮೂರು ವರ್ಷದವನಿದ್ದಾಗ ಬಂದಿತ್ತಂತೆ ಇಂತಹದೆ ಮಳೆ ಆಗ ನಮ್ಮೆಲ್ಲ ಗುಡಿಸಲುಗಳು ತೆಲಿಕೊಂಡು ಹೋಗಿದ್ವಂತೆ. ಇದು ಅಂತಹದೆ ಮಳೆನಾ ಮತ್ತೊಮ್ಮೆ ಮುಗಿಲಿನತ್ತ ಮುಖ ಮಾಡಿದ ಎಪ್ಪತ್ತು ವರ್ಷದ ವೃದ್ದ ಶಂಕ್ರಯ್ಯ , ಮತ್ತೆನು ಬೆಂಗಳೂರಿಗೆ ಬೆಂಗಳೂರೆ ಮಾತಾಡಿಕೊಳ್ತಿಲ್ವಾ ಈ ಮಳೆ ಬಗ್ಗೆ.

ಮುಂಜಾನೆಯೆ ಶುರುವಾಗಿದೆ ಈ ಶನಿ ಮಳೆ ಮುಗಿಲೆ ಹರಿದು ಹೋಗಿದೆಯೆನೊ ಅನ್ನೋ ತರಹ. ಏ ಸೋಮ ಆ ಬಕೆಟ ತಾ ಇಲ್ಲಿ ಇನ್ನೇನು ನೀರು ಒಳಗೆ ಬರಬಹುದು ಹಾಗೆ ನಿಮ್ಮ ಅಜ್ಜಿಗೆ ಸ್ವಲ್ಪ ಬೆಚ್ಚಗಿರೊ ಜಾಗದಲ್ಲಿ ಮಲಗಿಸು. ಎ ಕಾಳ ಮಲಗಿದಿಯೆನೊ ಅಂದಿದ್ದಕ್ಕೆ ಅವನ ಮುದ್ದಿನ ಕಡುಗಪ್ಪು ನಾಯಿ ಇಲ್ಲವೆನ್ನುವಂತೆ ಒಮ್ಮೆ ಮೆಲ್ಲಗೆ ಬೊಗಳಿತು,ಥೂ ಇನ್ನೂ ಜೋರಾಯಿತು ಈ ಮನೆಹಾಳು ಮಳೆ ಹೀಗೆ ಸಾಗಿತ್ತು ಶಂಕ್ರಯ್ಯನ ಸ್ವಗತ .
ಶಂಕ್ರಯ್ಯನಿಗೆ ವಯಸ್ಸು ಎಪ್ಪತ್ತಾದರು ಇನ್ನೂ ನಲವತ್ತರ ಹರೆಯದವರ ಹಾಗೆ ತುಂಬ ಲವಲವಿಕೆಯಿಂದಿರುರ ಮನುಷ್ಯ, ಸೋಮ ಅವನ ಖಾಸಾ ಮೊಮ್ಮಗ ಶಂಕ್ರಯ್ಯನ ಮಗ ಮತ್ತು ಸೊಸೆಯನ್ನ ಇದೇ ಬೆಂಗಳೂರಿನ ಟ್ರಾಫಿಕ್ಕು ನುಂಗಿತ್ತು ಮತ್ತು ಆವಾಗಲು ಮಳೆ ಬರ್ತಿತ್ತು ಅದಕ್ಕೆ ಮಳೆ ಅಂದ್ರೆ ಶಂಕ್ರಯ್ಯನಿಗೆ ಜನ್ಮ ಜನ್ಮಾಂತರಗಳ ದ್ವೇಷ.

ಶಂಕ್ರಯ್ಯನ ತಂದೆ ಸೋಮಯ್ಯ ದೂರದ ಕಂಚೀಪುರದಿಂದ ಹೊಟ್ಟೆಪಾಡಿಗಾಗಿ ತನ್ನ ಹದಿಮೂರನೆ ವಯಸ್ಸಿಗೆ ಬೆಂಗಳೂರಿಗೆ ಬಂದು ಸೇರಿದ್ದ. ಆ ಕಂಚೀಪುರವೆಂಬ ಕುಗ್ರಾಮದಲ್ಲಿ ಸುಮಾರು ವರ್ಷ ಮಳೆ ಬಾರದೆ ಸುತ್ತಲಿನ ಕಾಡೆಲ್ಲಾ ಒಣಗಿಹೋಗಿತ್ತು ಕಾಡನ್ನೆ ನಂಬಿ ಬದುಕು ನಡೆಸುತ್ತಿದ್ದ ಕಂಚೀಪುರದ ಜನ ಸಾಮೂಹಿಕವಾಗಿ ಊರನ್ನು ತೊರೆಯುತ್ತಿದ್ದ .ಅವರೆಲ್ಲಾ ಆ ಊರನ್ನು ಬಿಡಲು ಇನ್ನೊಂದು ಪ್ರಬಲ ಕಾರಣ ಕಂಚೀಪುರದ ಗುಡ್ಡದಲ್ಲಿದ್ದ ಸಸ್ಯಹಾರಿ ಪ್ರಾಣಿಗಳೆಲ್ಲಾ ಒಂದೊಂದಾಗಿ ಹಸಿವೆಯಿಂದ ಮತ್ತು ಗುಡ್ಡದಲ್ಲಿ ಬಿಡುಬಿಟ್ಟಿದ್ದ ಜೋಡಿ ಹುಲಿಗಳಿಗೆ ಆಹಾರವಾಗಿ ಸಂಪೂರ್ಣನಾಶವಾದಾಗ. ಹುಲಿಗಳಿಗೆ ಆಹಾರ ದೊರಕದಂತಾಗಿ ಅವು ಕಂಚೀಪುರದತ್ತ ನಡೆದಾಗಲೆ ಎಲ್ಲರೂ ಊರನ್ನು ಖಾಲಿ ಮಾಡಿದ್ದು,ಎಲ್ಲರೂ ದಾವಣಗೆರೆ, ಚಿತ್ರದುರ್ಗ, ಸೇರಿದರೆ ಸೋಮಯ್ಯ ದೂರದ ಬೆಂಗಳೂರಿಗೆ ಬಂದು ಸೇರಿದ್ದ. ಇಲ್ಲಿ ಬಂದವನಿಗೆ ತಕ್ಷಣಕ್ಕೆ ಮೈಸೂರು ರೋಡಿನಲ್ಲಿ ಅವನ ಕುಲ ಕಸುಬಾದ ಕಟ್ಟಿಗೆ ಒಡೆಯುವ ಕೆಲಸವೆ ದೊರಕಿತ್ತು ಊರಲ್ಲಿ ಮರ ಊರುಳಿಸುತ್ತಿದ್ದ ಇಲ್ಲಿ ಊರುಳಿಸಿ ತಂದ ಮರಗಳನ್ನು ತುಂಡು ಮಾಡುವ ಕೆಲಸ ಒಟ್ಟಿನಲ್ಲಿ ಪರಿಸರ ನಾಶಕರ್ತರಲ್ಲಿ ಅವನು ಒಬ್ಬ ಆದರೆ ಆ ವಿಷಯ ಅವನಿಗೆ ಹೊಟ್ಟೆಪಾಡು. ಅಂತಹ ಸೋಮಯ್ಯನಿಗೆ ಬೆಂಗಳೂರಿಗೆ ಬಂದು ಎರಡು ವರ್ಷಕ್ಕೆ ಮದುವೆನೂ ಆಗಿತ್ತು. ಹುಡುಗಿ ತಿಗಳರಪಾಳ್ಳ್ಯದ ಚಕ್ಕೆ(ಮರದ ತೊಗಟೆ) ಆರಿಸುವ ಸಾವಿ ಅಂತ.ಸೋಮಯ್ಯ ಶಂಕ್ರ ಹುಟ್ಟಿದ ಮೇಲೆನೆ ಒಂದು ಗುಡಿಸಲು ಅಂತ ಕಟ್ಟಿದ್ದು ಮೈಸೂರು ರೋಡಿನ ಋಷಭಾವತಿಯ ದಂಡೆಯ ಮೇಲೆ. ಕಾಲ ಉರುಳಿದಂತೆ ಸೋಮಯ್ಯ ಸಾವಿತ್ರಮ್ಮ ಶಂಕ್ರಯ್ಯನಿಗೆ ಮದುವೆ ಮಾಡಿ ಮೊಮ್ಮಗನನ್ನು ಕಂಡು ಕಾಲವಾಗಿದ್ದು ಅದೇ ಬಂಗಲೆ!!!!! ಯಲ್ಲೆ. ಶಂಕ್ರಯ್ಯ ತನ್ನ ಮಗನ ಮದುವೆ ಮಾಡಿ ಅವನ ಮಗನಿಗೆ ಸೋಮಯ್ಯ ಅಂತ ತನ್ನ ತಂದೆಯ ಹೆಸರಿಟ್ಟು ಧನ್ಯನಾಗಿದ್ದ . ಇಷ್ಟೆಲ್ಲಾ ಆದರೂ ಬೆಂಗಳೂರು ತನ್ನ ಪಾಡಿಗೆ ನಗುತ್ತ ನಗಿಸುತ್ತ ಸಾಗಿತ್ತು. ಆದರೆ ಇಂದು ಯಾರಮೇಲಿನ ಕೋಪದಿಂದಲೋ ಅಥವಾ ದುಖ:ದಿಂದಲೊ ಸುರಿಸುತ್ತಿದ್ದ ಮಳೆ ನಿಲ್ಲವ ಸೂಚನೆಯನ್ನೆ ಕೊಡುತ್ತಿಲ್ಲ.

ಏ ಸೋಮ ನಿಮ್ಮ ಅಜ್ಜಿ ಮಲಗಿದ್ಲಾ ಅಂತ ನೋಡಪ್ಪ ಸ್ವಲ್ಪ ನನ್ನದು ಅಂತ ಇರೋದು ಅದೇ ಒಂದು ಜೀವ. ಅದೇ ಗುಡಿಸಲಿನಲ್ಲಿ ನಾಲ್ಕು ಸಾವನ್ನು ಕಂಡ ಶಂಕ್ರಯ್ಯನ ಮಾತಿನಲ್ಲಿ ದುಖ: ಸಹಜವಾಗಿ ಹೊರಹೊಮ್ಮಿತ್ತು. ಮಳೆ ಇನ್ನೂ ಭೋರ್ಗರೆದು ಅಕ್ಕಪಕ್ಕದ ಗುಡಿಸಲುಗಳೆಲ್ಲಾ ಸ್ವಲ್ಪ ಸ್ವಲ್ಪವೆ ನೀರಿಗೆ ಆಹುತಿಯಾಗುತ್ತಿದ್ದವು. ರಸ್ತೆಯ ಪಕ್ಕದ ಬಸ್ಟ್ಯಾಂಡಿನಲ್ಲಿ ಜನರ ಹಾಹಾಕಾರ ಮುಗಿಲು ಮುಟ್ಟುವಂತಿತ್ತು, ಅವರನ್ನು ನೋಡುತ್ತಿದ್ದರೆ ಕುರಿಯ ಮಂದೆ ನೆನಪಿಗೆ ಬರುವಂತಿತ್ತು. ನೀರಿನ ರಭಸಕ್ಕೆ ಗುಡಿಸಲುಗಳಲ್ಲಿಯ ಪ್ಲಾಸ್ಟಿಕಿನ ಸಾಮಾನುಗಳೆಲ್ಲ ರಸ್ತೆಗೆ ಬರುತ್ತಿದ್ದಂತೆ ಶಂಕ್ರಯ್ಯ ಒಂದು ನಿರ್ಧಾರಕ್ಕೆ ಬಂದವನಂತೆ ಮೊಮ್ಮಗ ಸೋಮನನ್ನು ಹತ್ತಿರ ಕರೆದು ಮಗ ನೀನು ಕಾಳನ ಜೊತೆ ಸ್ಟ್ಯಾಂಡಿನಲ್ಲಿ ನಿಂತಿರು ನಾನು ನಿಮ್ಮ ಅಜ್ಜಿಯನ್ನು ಕರೆದುಕೊಂಡು ಬರುತ್ತೆನೆ ಅಂತ ಸೋಮನನ್ನು ಕಳುಹಿಸಿ ಆಮೇಲೆ ತಾನು ಗುಡಿಸಲಿನಲ್ಲಿ ಸೇರಿಕೊಂಡಬಿಟ್ಟ. ಶಂಕ್ರಯ್ಯ ತನ್ನ ಹೆಂಡತಿ ಎದುರಿಗೆ ನಿಂತುಕೊಂಡು ನೀಲು ಇದೇ ಗುಡಿಸಲಿನಲ್ಲಿ ನನ್ನ ಅಪ್ಪ, ಅವ್ವ ಸತ್ರು ಇದರ ಮುಂದೆನೆ ಮಗ ಸೊಸೆನು ಸತ್ರು ,ಮೊಮ್ಮಗನು ಇಲ್ಲೆ ಇದ್ದು ಸಾಯೊದು ಬೇಡ ಅಂತ ಹೋರಗೆ ಕಳಿಸಿದೆ ಕಣೆ ನೀನು ಕೋಪ ಮಾಡಿಕೊಳ್ಳಬೇಡ ಈ ಸಾವು ಅನ್ನೊದು ನಮಗೆ ಇದೇ ಗುಡಿಸಲಿನಲ್ಲಿ ಬರೆದಿದ್ದರೆ ಇಲ್ಲೆ ಸಾಯಣಾ ಅಂತ ಹೆಂಡತಿ ಕೈ ಹಿಡಿದರೆ ಎಲ್ಲಿಯ ಕೋಪ ಅವಳಾಗಲೆ ಚಳಿಗಾಳಿ ತಡೆಯಲಾರದೆ ಸಾವಿನ ಮನೆಯನ್ನು ಸೇರಿಯಾಗಿತ್ತು. ಶಂಕ್ರಯ್ಯ ಕಣ್ಣಿರು ಸಹ ಹಾಕಲಿಲ್ಲ ತಾನು ಇನ್ನೆನು ಸಾಯುವವನೆ ನನಗೆ ಎಂತಹ ಕಣ್ಣಿರು ಅನ್ನುವ ರೀತಿ ಇತ್ತು ಅವನ ಮುಖ .ನೀರು ಆಗಲೆ ನೀಲವ್ವನ ಅರ್ಧ ದೇಹವನ್ನು ಆವರಿಸಿಕೊಂಡಿತ್ತು ಶಂಕ್ರಯ್ಯ ಕೊನೆಯ ಬಾರಿಗೆ ಗುಡಿಸಲಿನಿಂದ ಹೊರಗೆ ಬಂದು ಬಸ್ಟ್ಯಾಂಡಿನತ್ತ ಕಣ್ಣಾಡಿಸಿದ ಅವನ ವಂಶದ ಕೊನೆಯ ಕುಡಿ ಮತ್ತು ಅವನ ಮುದ್ದಿನ ನಾಯಿ ಕಾಳ ಸುರಕ್ಷಿತವಾಗಿರುವುದನ್ನು ಕಂಡು ಒಳಗೆ ಹೋದವನು ಮತ್ತೆಂದು ಹೋರಗೆ ಬರಲೆ ಇಲ್ಲ .ಸೋಮನಿಗೆ ತನ್ನ ಗುಡಿಸಲು ಇಷ್ಟಿಷ್ಟೆ ನೀರಿನಲ್ಲಿ ಮುಳುಗುತ್ತಾ ಕಡೆಗೆ ನೀರು ಮಾತ್ರ ಕಾಣುವಂತಾಯಿತು, ಮಳೆ ಮಾತ್ರ ಇನ್ನೂ ನಿಂತಿಲ್ಲ. ಸೋಮ ತನ್ನ ಅಜ್ಜ,ಅಜ್ಜಿಯ ದಾರಿ ಇನ್ನೂ ಕಾಯುತ್ತಿದ್ದಾನೆ.