Wednesday, December 26, 2007

ಎನ್ನ ಭವದ ಕೇಡು

ಈ ಕಾದಂಬರಿಯ ಬಗ್ಗೆ ಎನಾದರೂ ಬರೆಯದೆ ಇರೋಕೆ ನನ್ನಿಂದ ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ನನ್ನನ್ನು ಆವರಿಸಿಕೊಂಡಿದೆ.
ಇದರಲ್ಲಿ ಬರುವ ಗೋವರ್ಧನರಾಯರು, ಪೇಶ್ವೆ ಕಾಲಕ್ಕೆ ಅಹ್ಮದ ನಗರದಿಂದ ನೆಲೆಕಿತ್ತು ಮೂಡಿಗೆರೆಗೆ ಬಂದ ಅವರ ತಂದೆ ಶ್ರೀಹರಿರಾಯರು, ಗೋವರ್ಧನರಾಯರ ಎರಡನೇಯ ಸಂಸಾರ ರಾಧಾ,ಮಕ್ಕಳಾದ ಗಂಗೆ, ಗೋದಾವರಿ ಯಮುನೆ, ಸರಸ್ವತಿ, ರಾಧಾ ಅಂಬಕ್ಕ, ಕಣ್ಣಿರಿನ ಹುಡುಗಿಯನ್ನು ಡೋಲಾಯನ ಸ್ಥಿತಿಗೆ ದೂಡುವ ವಾಸುದೇವ, ಡಾಕ್ಟರ ಮಗ ಅಜಿತ, ಗೋವರ್ಧನರಾಯರ ರಾಜಕಾರಣಿ ಸ್ನೇಹಿತ ಪಂಪಾಪತಿ,ದೂರ್ತ ನೌಕರ ಚಿನ್ಸಾಮಿ, ಸಮಯದ ಫಾಯಿದೆ ತೆಗೆದುಕೊಳ್ಳುವ ಕೃಷ್ಣಮೂರ್ತಿ,ದ್ರೈವರ್ ಅಬ್ಬೂ, ಸಂಗೀತಗಾರ ಬಸ್ರಾಜ,ಇವರೆಲ್ಲರೂ ತಮ್ಮ ತಮ್ಮ ಪಾತ್ರ ಮುಗಿಸಿ ಎದ್ದು ಹೋದರು ಬೃಂದಾವನ ಬಿಡಲೊಲ್ಲೆ ಎನ್ನುವ ಇವರೆಲ್ಲರ ಅಧಿನಾಯಕಿ ಮಾಮಿ,ಅವಳ ಸಾವಿನ ವಾಸನೆ ಪತ್ತೆ ಹಚ್ಚುವ ವಿದ್ಯೆ, ಮಾಮಿಯ ತಿಂಗಳ ಸ್ನಾನದ ವೃತ, ಬೃಂದಾವನದ ಹಿತ್ತಲಿನ ಕರಿಬೇವಿನ ಕಂಪು, ನಮ್ಮನ್ನು ಕಾದಂಬರಿ ಮುಗಿಸಿದ ಮೇಲೂ ಕಾಡುತ್ತಿರುತ್ತವೆ.

ಹೋಟಲ್ಲುಗಳ ಸರಮಾಲೆಯೆ ಇದ್ದ ಮನೆಯಲ್ಲಿ ಗಂಗೆ ಸತ್ತ ಮೂರೇ ದಿನಕ್ಕೆ ಮನೆಯಲ್ಲಿ ತಿನ್ನಲು ಏನು ಇರುವುದಿಲ್ಲ . ಇದು ಕಾದಂಬರಿ ಓದುವಾಗ ಅರಗಿಸಿಕೊಳ್ಳಲು ಕಷ್ಟವಾದರು ವಾಸ್ತವತೆಗೆ ಹತ್ತಿರವಾದದ್ದೆ.
ಡಾವಣಗೆರೆಯಲ್ಲಿ ಕಾಟನ್ ಮಿಲ್ಲುಗಳಿದ್ದಾಗ ನಡೆಯುತ್ತಿದ್ದ ದರ್ಬಾರಗಳು, ನಿಂತಾಗ ಒಂದೊಂದಾಗಿ ಬಿದಿಗೆ ಬಿದ್ದ ಸಂಸಾರಗಳು, ಅಲ್ಲಿನ ಯೂನಿಯನ್ನಗಳು,ಅದರ ಲೀಡರ್ರುಗಳು, ಅವರ ಕಚ್ಚಾಟಗಳು ಕಣ್ಣಿಗೆ ಕಟ್ಟುವಂತಿವೆ.
ಇವೆಲ್ಲಾ ಒಂದು ಕಡೆಯಾದರೆ ಗೋವರ್ಧನರಾಯರ ಸಂಸಾರಭವ ಹಂತಹಂತವಾಗಿ ಕುಸಿಯುವ ರೀತಿ ಕಲ್ಲು ಹೃದಯವನ್ನು ಕರಗಿಸುತ್ತದೆ. ಇನ್ನೊಂದು ಕಡೆ ನಮಗೆ ಸುಳಿವೆ ಕೊಡದೆ ಕಥೆಯೊಂದಿಗೆ ಸಾಗುವ ಸಂಗೀತ, ಅಲ್ಲಿ ಅರಳುವ ಪ್ರೀತಿ, ಅಡುಗೆ ಮನೆಯಲ್ಲೆ ಜಗತ್ತು ಮತ್ತು ತನ್ನ ಪ್ರೀತಿಯನ್ನು ಕಂಡುಕೊಳ್ಳುವ ಸರಸ್ವತಿಯ ರೀತಿ, ಸಂಸಾರ ಮತ್ತು ಮಕ್ಕಳು ಬೇಡವೆಂದ ಮಾಮಿಯ ಯೌವನದ ಮೊದಲ ಹಂತದಲ್ಲಿ ಮುಗ್ಗರಿಸಿದ ಪ್ರೇಮ ಪ್ರಕರಣ,ನೆರಳೆ ಬಣ್ಣದ ಚಾಯೆ ಇಡೀ ದಾವಣಗೆರೆಗೆ ಆವರಿಸುವ ವಿಸ್ಮಯ, ನಾವೆಲ್ಲಾ ಮರೆತೆ ಹೋಗಿರುವ ಶಾವಿಗೆ ಹೊಸೆಯುವ ಸಂಭ್ರಮ, ಕಾದಂಬರಿಯನ್ನು ಹಂಚಿಕೊಂಡರೆ ಮತ್ತೊಮ್ಮೆ ಇಡೀ ಕಾದಂಬರಿಯನ್ನೆ ಹೇಳಬೇಕಾದಿತು.

ಯಮುನೆ ಮತ್ತು ಗೋದಾವರಿಯ ಪಾತ್ರಗಳನ್ನು ಹೀಗೂ ಹೇಳಬಹುದೆನೊ ಮನುಷ್ಯ ಯೋಚಿಸುವುದನ್ನು ನಿಲ್ಲಿಸಿದರೆ ಯಮುನೆಯಂತಾಗುತ್ತಾನೆ। ದುಡುಕಿದರೆ ಗೋದಾವರಿಯಂತಾಗುತ್ತಾನೆ। ನಾವು ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ ನಾವು ಕೇವಲ ಇದನ್ನು ಓದುವುದಿಲ್ಲ ಪಾತ್ರಗಳೆ ನಾವಾಗುತ್ತೆವೆ ಅದು ಸುರೇಂಧ್ರನಾಥರ ಕಥೆ ಹೇಳುವ ಪರಿ। ಚಂದನೆಯ ಕಾದಂಬರಿ ಕೊಟ್ಟ ಸುರೇಂಧ್ರನಾಥರಿಗೂ ಛಂದವಾಗಿ ಪ್ರಕಟಿಸಿದ ವಸುಧೇಂದ್ರರಿಗೂ ನನ್ನ ಧನ್ಯವಾದಗಳು

ನೀವು ಕೊಂಡು ಓದಿ

Saturday, December 22, 2007

ಇನ್ನಷ್ಟು ಮನಸ್ಸಿನ ಮಾತುಗಳು

ಪ್ರತಿಯೊಬ್ಬರು ಅಮರ ಪ್ರೇಮಿಗಳಾಗಿದ್ದರೆ
ಗಲ್ಲಿಗೊಂದು ತಾಜಮಹಲಗಳಾಗುತ್ತಿದ್ದವು.


ಬದುಕು ಕಾಮನಬಿಲ್ಲಿದ್ದಂತೆ.
ಬಣ್ಣಗಳನ್ನು ಆರಿಸಿಕೊಳ್ಳುವವರ ಮೇಲೆ ಅವರ ಬದುಕು ನಿರ್ಧಾರವಾಗುತ್ತದೆ.
ಕೆಲವೊಬ್ಬರು ಏಳು ಬಣ್ಣಗಳನ್ನ ಎತ್ತಿಟ್ಟುಕೊಂಡರೆ
ತುಂಬ ಜನ ಕಪ್ಪು ಬಿಳುಪನ್ನ ಮಾತ್ರ ಆರಿಸಿಕೊಳ್ಳುತ್ತಾರೆ.

ಗೆಳೆತನ ಮತ್ತು ಪ್ರೀತಿ ಸವಿಯುವಂತಿರಬೇಕು
ಸಹಿಸಿಕೊಳ್ಳುವಂತಿರಬಾರದು!



ಎಲ್ಲರೂ ಪ್ರೀತಿಸುತ್ತಾರೆ
ಸ್ವಲ್ಪ ಜನ ಮತ್ತೊಬ್ಬರನ್ನು
ತುಂಬ ಜನ ತಮ್ಮನ್ನು!

ಬದುಕಿಗೂ ಪ್ರೀತಿಗು ಇರುವ ವ್ಯತ್ಯಾಸ
ಬದುಕು ತನ್ನನ್ನು ಪ್ರೀತಿಸಲು ಹೇಳುತ್ತೆ
ಪ್ರೀತಿ ಮತ್ತೊಬ್ಬ್ಬರನ್ನು ಪ್ರೀತಿಸಲು ಹೇಳುತ್ತೆ
ತನ್ನನ್ನು ಪ್ರೀತಿಸದವ ಈ ಜಗದಲ್ಲಿ ಬದುಕಲಾರ!

Wednesday, December 19, 2007

ಕೆಲವೊಂದು ಹನಿಗಳು

ಹಾಗೆ ಮನಸ್ಸಿಗೆ ಮೂಡಿದ್ದು


ಭ್ರಮೆಯೆಡೆಗೆ ಸೆಳೆಯುವ ಹೂವಿಗಿಂತ
ವಾಸ್ತವತೆಯೆಡೆಗೆ ಕೈಹಿಡಿದು ಜಗ್ಗುವ ಮುಳ್ಳೆ ವಾಸಿ

ಕಲ್ಲು ಕರಗುವ ಸಮಯಕ್ಕೆ ಬಂದ ಅವಳು
ನೆಸರನ ಮೊದಲ ಕಿರಣ ಭೂವಿಗೆ ಸೊಕುವ ಮೊದಲೆ
ಹೋರಟು ಹೋದಳು
ಕರಗಿದ ಕಲ್ಲು ಶೀಲೆಯಾಗಿತ್ತು


ಚುರು ವಿಶ್ವೆಶ್ವರ ಭಟ್ಟರ ವಕ್ರತುಂಡೋಕ್ತಿ ತರಹವಿದ್ದರು ಇವು ಅವಲ್ಲ . ಆದರೆ ಇವು ಅಂತಹದೆ
ನಿಮಗೆ ಎನೆನ್ನಿಸುತ್ತದೆ?? ತಿಳಿಸಿ

ಹುಡುಗಿಯರ ಕೈಯಲ್ಲಿ ಮೊಬೈಲ್ ಸಿಕ್ಕರೆ
ಅದರಲ್ಲೂ ಕನ್ನಡಿ ಹುಡುಕುತ್ತಾರೆ

ಗಂಡಸರ ಕೈಗೆ ಮೊಬೈಲ್ ಬಿಲ್ಲ ಸಿಕ್ಕರು
ಹೆಂಗಸರ ಕೈಗೆ ಮೊಬೈಲ್ ಸಿಗಬಾರದು

ಮೊಬೈಲ್ ಬ್ಯಾಟರಿ ಮತ್ತು ಹುಡುಗಿಯರಿಗೆ ಹೆಚ್ಚು ವ್ಯತ್ಯಾಸವಿಲ್ಲ
ಎರಡು ಯಾವತ್ತಿದ್ದರು ಕೈ ಕೊಡುವಂತಹವೇ

ಹುಡುಗಿಯರ ಪ್ರೀತಿ, ಮೊಬೈಲ ನೆಟವರ್ಕು ಎರಡು
ಸಿಟಿಯಲ್ಲಿ ಇದ್ದಾಗ ಮಾತ್ರ ಹೆಚ್ಚಿಗೆ ಸಿಗೋದು

ಕೆಲವೊಂದು ಜನ ಆಗಾಗ ಮೊಬೈಲ್ ಬದಲಿಸಿದರೆ
ತುಂಬ ಜನ ಬಾಯಪ್ರೆಂಡು, ಗರ್ಲಫ್ರೆಂಡುಗಳನ್ನು ಮಾತ್ರ ಹೆಚ್ಚು ಬದಲಿಸುತ್ತಾರೆ



Sunday, December 9, 2007

ಲೇಖಕ.......!

ಅಯ್ಯೋ ಈ ಪೆನ್ನೂ ಮುದವಲ್ಲದಾ, ಇರೋದ ಇದ ಒಂದ ಪೆನ್ ಬ್ಯಾರೆ ತಗೋಳಾಕ ರೊಕ್ಕ ಸಯಿತ ಇಲ್ಲ ನನ್ನ ಹತ್ರ। ಈ ಪುಸ್ತಕ ಕನ್ನಡಕ್ಕ ಬದಲಿಸಿ ಕೊಟ್ರ ಸಾವಿರ ರೂಪಾಯಿ ಕೊಡ್ತೆನಿ ಅಂತ ಹೇಳ್ಯಾರ ಸುಭಾಷ ರೋಡಿನ್ಯಾಗಿರೊ ಬುಕ್ಕಿನ ಅಂಗಡಿ ಸವ್ಕಾರ. ಶೆಟ್ಟಿ ಅಂಗಡ್ಯಾಗ ಪೆನ್ ತರೋ ಟೈಮು ಅಲ್ಲ ಇದು, ಟೈಮ ಆಗಲೇ ರಾತ್ರಿ ಹನ್ನೆರಡ ಮಲಗಿರ್ತಾನ ಅಂವ. ನಾಳಿ ತನಕ ಹೇಂಗರ ಉಪವಾಸ ಇದ್ದೆನೀ, ಇಗೇನರ ಪೆನ್ ಸಿಗಲಿಲ್ಲಾ ಅಂದರ ನಾಳೆನೂ ಊಟ ಇಲ್ಲ ನಾಡದೂ ಇಲ್ಲ, ಹಂಗಂದ್ರ ನಾಡದ ನಾ ಸಾಯತೆನಾ. ಹೀಗೆ ಸಾಗಿತ್ತು ಅವನ ಯೋಚನಾ ಲಹರಿ.

ಅವನ ಹೆಸರು ಸೋಮಪ್ಪ, ದೇವರ ಗುಡ್ಡದಲ್ಲಿ ನೆಲೆಸಿದ್ದ ಮೈಲಾರಲಿಂಗನ ಭಕ್ತೆ ಪಾರವ್ವನ ಏಕೈಕ ಸಂತಾನ। ಪಾರವ್ವ ತಾನು ಹೊಟ್ಟೆಪಾಡಿಗಾಗಿ ಮಾಡುತ್ತಿದ್ದ ಗ್ವಾರವ್ವನ ಸೇವೆಯ ನೆರಳು ತಾಗದಂತೆ ಪಕ್ಕದ ರಾಣೇಬೆನ್ನೂರಿನ ಶಾಲೆಗೆ ಕಳುಹಿಸುತ್ತಿದ್ದಳು। ಪಾರವ್ವನ ಗಂಡ ದ್ಯಾಮಪ್ಪ, ದೇವರಗುಡ್ಡದ ಮೈಲಾರಲಿಂಗ ದೇವರ ಪಾದ ಸೆರಿ ಸುಮಾರು ವರ್ಷಗಳಾಗಿತ್ತು। ದೇವರಗುಡ್ಡದ ಪಕ್ಕದ ಹಳ್ಳಿ ಕೂನಬೇವಿನವಳಾದ ಪಾರವ್ವ, ದ್ಯಾಮಪ್ಪನ ಮದುವೆಯಾಗಿ ದೇವರಗುಡ್ದಕ್ಕೆ ಬಂದಾಗ ಅವಳಿಗೆ ಬರಿ ಹದಿನೈದು ವರ್ಷ, ಗಂಡ ದ್ಯಾಮಪ್ಪ ಅವರ ಮನೆಯ ಕುಲಕಸುಬಾದ ಗ್ವಾರಪ್ಪನ ವೇಷ ಧರಿಸಿ ಸುತ್ತಮುತ್ತ ಹಳ್ಳಿಗಳಲ್ಲಿ ಭಿಕ್ಷೆ ಬೇಡುವ ಕಾಯಕ ಮಾಡುತ್ತಿದ್ದ. ಹೆಗಲಮೆಲೆ ಒಂದು ದಪ್ಪನೆಯ ಕಂಬಳಿ, ಒಂದು ಕೈಯಲ್ಲಿ ಢಮರುಗ, ಇನ್ನೂಂದು ಕೈಯಲ್ಲಿ ತ್ರಿಶೂಲ, ಬಗಲಲ್ಲಿ ಬಂಡಾರ ತುಂಬಿದ ಚರ್ಮದಿಂದ ಮಾಡಿದಂದಹ ಉದ್ದನೆಯ ಜೋಳಿಗೆ, ತಲೆಯ ಮೇಲೆ ಕಪ್ಪನೆಯ ಉದ್ದು ಕೂದಲಿನ ಮುಂಡಾಸಿನಂತಹ ಟೊಪ್ಪಿಗೆ ಕಾಲಲ್ಲಿ ಭಾರಿ ಎನಿಸುವಂತಹ ಚರ್ಮದ ಚಪ್ಪಲಿಗಳನ್ನು ಧರಿಸಿ ಮನೆಗಳ ಮುಂದೆ ನಿಂತು ಏಳುಕೋಟಿ ,ಏಳುಕೋಟಿ ಎಂದು ಹುಂಕರಿಸಿದನೆಂದರೆ ಜನ ಭಯಭಕ್ತಿಯಿಂದ ಅವನನ್ನು ಮನೆಯೊಳಗೆ ಕರೆದು ಭಿಕ್ಷೆ ನೀಡುತ್ತಿದ್ದರು. ಗ್ವಾರಪ್ಪ ಆದಂತಹವರು ಯಾವುದೇ ಮನೆ , ನೆಲ, ಹೊಲಕ್ಕೆ ಕಾಲಿಟ್ಟರೆ ಅದು ಯಾವತ್ತೂ ಸಮೃದ್ಧಿಯಿಂದ ತುಂಬಿ ತುಳುಕುತ್ತದೆ ಎಂದು ಪ್ರತೀತಿ ಯಾವತ್ತಿನಿಂದಲೂ ಇದೆ. ಅದಕ್ಕೆ ದೇವರಗುಡ್ಡದ ಸುತ್ತಮುತ್ತ ನಡೆಯುತ್ತಿದ್ದ ಹೊಲದ ಪೂಜೆ, ನಾಮಕರಣ, ಮನೆ ಪ್ರವೇಶ,ಮದುವೆ ಹೀಗೆ ಏನೇ ಶುಭ ಕಾರ್ಯಗಳಾದರೂ ದ್ಯಾಮಪ್ಪನಿಗೆ ಕರೆ ಹೋಗುತ್ತಿತ್ತು. ಸಂಪಾದನೆಯು ಚೆನ್ನಾಗಿತ್ತು. ಆದರೆ ಅವನ ಕುಡಿತದ ಚಟ ಅವನಿಗೆ ಈ ಭೂಮಿಯಿಂದಲೇ ಆಚೆ ನೂಕಿತ್ತು. ದ್ಯಾಮಪ್ಪ ಕಾಲವಾದಾಗ ಪಾರವ್ವನ ಹೊಟ್ಟೆಯಲ್ಲಿದ್ದ ಕೂಸಿಗೆ ಬರಿ ಐದೇ ತಿಂಗಳು, ಹೀಗಾಗಿ ಸೋಮನಿಗೆ ತಂದೆಯೆಂಬ ಮಾಹಾತ್ಮನ ಪರಿಚಯವಾಗಲೇ ಇಲ್ಲ ಪಾರವ್ವನು ಮಗನಿಗೆ ತನ್ನ ಪತಿದೇವರ ವಿಷಯ ಹೆಳಿ ಸಂಭ್ರಮಿಸಲಿಲ್ಲ. ಸೋಮನಿಗೆ ಐದು ವರ್ಷ ತುಂಬುವ ತನಕ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪಾರವ್ವನಿಗೆ ಒಂದು ದಿನ ಸಕ್ಷಾತ ಮೈಲಾರಲಿಂಗ ದೇವರೆ ಕನಸಿನಲ್ಲಿ ಬಂದು ಕುಲಧರ್ಮ ಮರೆತೆನೆ ಪಾರವ್ವ ಎಂದು ಕೇಳಿದಂತಾಗಿತ್ತು. ಕನಸುಗಳ ಕಾಟ ಹೆಚ್ಚಾದಾಗ ಪಾರವ್ವ ತುಂಬ ತಳಮಳಗೊಂಡಿದ್ದಳು . ಆದರೆ ಆ ದಿನವೂ ಬಂದಿತ್ತು ಸೋಮ ಅವ್ವನ ಹೊಸ ವೇಷ ನೋಡಿ ಗಾಬರಿಯಾಗಿದ್ದ. ಹಣೆ ತುಂಬ ಭಂಡಾರ, ಕೈಯಲ್ಲಿ ತ್ರಿಶೂಲ, ಢಮರುಗ, ಆರು ವರ್ಷದ ಸೋಮ ತನ್ನ ಭಾಷೆಯಲ್ಲಿ ಅವ್ವನಿಗೆ ದೇವರು ಎಂದಿದ್ದ. ಅವನು ಶಾಲೆ ಬಿಟ್ಟು ತನ್ನಂತೆ ಇದೇ ಕಾಯಕಕ್ಕೆ ಇಳಿದಾನು ಎಂದು ಪಾರವ್ವ ಊರ ಗೌಡರ ಸಹಾಯದಿಂದ ಮಗನಿಗೆ ಪಕ್ಕದ ರಾಣೇಬೆನ್ನೂರಿನಲ್ಲಿ ಶಾಲೆಗೆ ಸೇರಿಸಿದ್ದಳು. ಅಷ್ಟು ಕಡುಬಡತನವಿಟ್ಟುಕೊಂಡು ಅವನನ್ನು ಪಿ ಯು ಸಿ ವರೆಗು ಓದಿಸಿದ್ದು ಆ ತಾಯಿಯ ಸಾಧನೆಯೆ ಸರಿ।

ಮಗನ ಪಿ ಯು ಸಿ ಮುಗಿದ ನಂತರ ಪಾರವ್ವ ಅವನನ್ನು ಅಲ್ಲೇ ರಾಣೇಬೆನ್ನೂರಿನ ಒಂದು ಅರಿವೆಯಂಗಡಿಯಲ್ಲಿ ಕೆಲಸಕ್ಕೆ ಸೇರಿಸುವ ಯೋಚನೆ. ಆದರೆ ಮಗನಿಗೆ ಇಷ್ಟು ಓದಿದ ತಾನು ಬಟ್ಟೆಯಂಗಡಿಯಲ್ಲಿ ಸೀರೆ ಮಡಿಚುವುದು ಕ್ಷುಲ್ಲುಕವಾಗಿ. ಅದಲ್ಲದೇ ಅವನಿಗೆ ಬರವಣಿಗೆಯ ಭೂತವೊಂದು ಮೆಟ್ಟಿಕೊಂಡು ಬಿಟ್ಟಿತ್ತು। ಅದಕ್ಕೆ ಸಾಕ್ಷಿಯಾಗಿ ಹಿಂದಿಯಲ್ಲಿ ಪ್ರಬಂಧ ಮಂಡಿಸಿದ್ದಕ್ಕೆ ಸಿಕ್ಕ ಮೊದಲ ಬಹುಮಾನವಿತ್ತು. ಅವನದು ಒಂದೇ ವಾದ ನಾನು ಕಾಲೇಜು ಕಲೆತದ್ದು ಮರವಾಡಿ ಅಂಗಡಿಯಲ್ಲಿಯಲ್ಲಿರುವ ಹೆಣ್ಣು ಗೊಂಬೆಗೆ ಸೀರೆ ಉಡಿಸುವುದಕ್ಕೆ ಅಲ್ಲ ಗೊತ್ತಾತ ಅವ್ವ . ಆಗೆಲ್ಲಾ ಪಾರವ್ವ, ಮಗನಿಗೆ ಯಾವುದೊ ಮಾಸ್ತರ ಭೂತ ಬಡಿದಿದೆ ಎಂದೇ ಯೋಚಿಸಿತ್ತಿದ್ದಳು . ಒಂದೆರಡು ಸಾರಿ ಮೈಲಾರಕ್ಕೆ ಹೋಗಿ ಹೇಳಿಕೆಯನ್ನು ಕೇಳಿಸಿಕೊಂಡು ಬಂದಿದ್ದಳು. ಆದರೆ ಸೋಮನಿಗೆ ಹಿಡಿದಿರುವುದು ಮಾಸ್ತರನ ಭೂತವಲ್ಲ , ಅದೇ ಊರಿನ ಪೂಜಾರಿಯ ಮಗಳು ಸಾವಿತ್ರಿಯ ಮೇಲಿನ ಪ್ರೀತಿಯ ಭೂತವೆಂದು ಪಾರವ್ವನಿಗೆ ಹೇಗೆ ತಿಳಿದಿತು.

ಆಗಿದ್ದು ಇಷ್ಟು ಸೋಮ ರಾಣೇಬೆನ್ನೂರಿನಲ್ಲಿ ಇದ್ದರು ಅವ್ವನ ಭೇಟಿಗಾಗಿ ಪ್ರತಿ ಭಾನುವಾರ ಉರಿಗೆ ಬರುತ್ತಿದ್ದ ಅಂತಹ ಒಂದು ಭಾನುವಾರ ಸಾವಿತ್ರಿಯು ಊರಿಗೆ ಬರುತ್ತಿದ್ದಳು ಅವಳ ಮೇಲೆ ಇವನಿಗೆ ಮೊದಲಿನಿಂದಲೂ ಮನಸ್ಸಿತ್ತು. ಆದ್ರೆ ಹೇಳಲಾರದೆ ತುಂಬ ವಿಲಿಗುಟ್ಟಿದ್ದ. ಆದರೆ ಅವತ್ತು ಇಲ್ಲದ ಧೈರ್ಯ ತಂದುಕೊಂಡು ಅಲ್ಲೇ ಭೀಮಣ್ಣನ ಓಲಾಡುತ್ತಿದ್ದ ಲಟಾರಿ ಟೆಂಪೋದಲ್ಲಿಯೇ ಕುಳಿತುಕೊಂಡು ಒಂದು ಅದ್ಭುತವೆನಿಸುವಂತಹ ಪ್ರೇಮಪತ್ರವನ್ನು ಹಿಂದಿ ಭಾಷೆಯಲ್ಲಿ ಬರೆದು ಅವಳ ಕೈಗಿಟ್ಟಿದ್ದ. ಅವಳು ಕೂಡ ಅದನ್ನು ಅಲ್ಲಿಯೇ ಓದಿ ತನ್ನದೇ ಆದ ರೀತಿಯಲ್ಲಿ. ಯಾಕ ಪ್ರೀತಿ ಗಿತಿ ಅಂತ ತಲಿ ಕೆಡಸಕೊತಿ ಸೋಮ ನಿಂದ ಬರವಣಿಗಿ ಏನೊ ಛಂದ ಐತಿ, ಬರೆ ಅದನ್ನ ನೋಡಿ ನಿನ್ನ ಮದುವಿ ಹೆಂಗ ಅಗೋದು ಅದರಾಗ ಎನರ ಒಂದ ಸಾಧಿಸಿ ತೋರಿಸು ಆವಾಗ ನಾನ ನಮ್ಮಪ್ಪಂಗ ಹೇಳ್ತೇನಿ ನಿನಗ ಕೊಟ್ಟ ಮದುವಿ ಮಾಡಂತ। ಅದನ್ನ ಬಿಟ್ಟ ಹುಚ್ಚ್ರಂಗ ಪತ್ರ ಬರದರ ಏನೂ ಸಿಗಂಗಿಲ್ಲ ನೋಡು ಅಂತ ಅವನನ್ನು ಸುಮ್ಮನಾಗಿಸಿದ್ದಳು. ಅವರ ಎಲ್ಲ ಮಾತುಕತೆಯು ಹಿಂದಿಯಲ್ಲೆ ಸಾಗಿದ್ದರಿಂದ ಯಾರಿಗು ಅಷ್ಟಾಗಿ ತಿಳಿಯಲಿಲ್ಲ. ಅಷ್ಟರಲ್ಲಿ ಊರು ಬಂದಿತ್ತು.

ಎಲ್ಲರೂ ಕೆಳಗೆ ಇಳಿದು ಸೋಮನು ಇಳಿಯುವಾಗ ಅವನನ್ನು ತಡೆದ ಡ್ರೈವರ್ ಭೀಮಣ್ಣ ತನ್ನ ಗಿತೋಪದೇಶ ಪ್ರಾರಂಭಿಸಿದ್ದ। ಆ ಹುಡುಗಿ ಹೇಳಿದ್ದು ನನಗೂ ಅರ್ಥ ಆತಲೆ ಸೋಮ, ನನಗು ಚೂರ ಮುಸಲರ ಭಾಷೆ ಗೊತ್ತ (ಭೀಮಪ್ಪನ ದೃಷ್ಟಿಯಲ್ಲಿ ಹಿಂದಿ ಎಂದರೆ ಮುಸಲ್ಮಾನಿ ಭಾಷೆ). ನೀನ ಇಲ್ಲೇ ಹುಡುಗಿ ನಿನಗ ದಕ್ಕೊಂಗಿಲ್ಲ ನೋಡ, ಅಕಿ ಬೇಕ ಅಂದ್ರ ನೀನ ಧಾರವಾಡಕ್ಕ ಹೋಗಬೇಕ ಅಲ್ಲಿ ಬರೆ ನಿನ್ನಂತ ಜನಾನ ತುಂಬ್ಯಾರಂತ ಕತಿ ,ಹಾಡ ಬರಿಯೊ ಮಂದಿ. ಅಲ್ಲಿ ಹೋಗಿ ಸ್ವಲ್ಪ ದಿನಾ ದುಡಿಯಲೆ ಅವಾಗ ನಿಂದು ಕತಿ, ಹಾಡು ಪೇಪರನ್ಯಾಗ ಬಂದಾವು ಪೆಪರನ್ಯಾಗ ಬಂದಮ್ಯಾಲೆನ ರೊಕ್ಕಾನು ಬರತೆತಿ ಇಲ್ಲಿದ್ರ ಅಷ್ಟ ನೀನ ಉದ್ದಾರ ಆದಹಂಗ. ಭೀಮಣ್ಣ ಅಷ್ಟು ಹೇಳಿದ್ದೆ ನೆಪ ಸೋಮನಿಗೆ, ಸಾವಿತ್ರಿಗೆ ತಾನೆನೆಂದು ತೋರಿಸುವುದಕ್ಕೆ ಒಂದು ಅಖಾಡ ಸಿಕ್ಕಂತಾಗಿತ್ತು. ಮಗನ ಹುಚ್ಚು ನಿರ್ಧಾರ ಕೇಳಿ ಪಾರವ್ವನಿಗೆ ದಿಗಿಲಿಗಿಡಾಗಿತ್ತು. ಪಾರವ್ವ ಜಪ್ಪಯ್ಯ ಅಂದರು ಸೋಮನಿಗೆ ಧಾರವಾಡಕ್ಕೆ ಹೋಗುವುದಕ್ಕಾಗಿ ಹಣ ಕೊಡಲು ನಿರಾಕರಿಸಿದ್ದಳು. ಮಗ ಈಗಲಾದರೂ ಕಣ್ಣ್ಮುಂದೆ ಇರಲಿ ಎನ್ನುವ ಆಸೆ ಅವಳದು,ಸಾವಿತ್ರಿಯ ಮನಸ್ಸು ಗೆಲ್ಲಬೇಕೆಂದ್ರೆ ಧಾರವಾಡಕ್ಕೆ ಹೋಗಲೇಬೇಕೆಂಬ ಹಟ ಇವನದು. ಕಡೆಗೆ ಪಾರವ್ವ ಭಿಕ್ಷೆಗೆ ಅಂತ ಹೋದಾಗ ಸೊಮ ಅವಳು ದೇವರಿಗೆ ಮುಡಿಪು ಅಂತ ಎತ್ತಿಟ್ಟಿದ್ದ ದುಡ್ಡಿನಲ್ಲಿ ಭಂಡಾರ ಮಿಶ್ರಿತ ಐದು ರೂಪಾಯಿಯ ನಾಲ್ಕು ನೋಟುಗಳೊಂದಿಗೆ ಮನೆ ಬಿಟ್ಟಿದ್ದ. ಅವನು ಬಸ್ಟ್ಯಾಂಡಿಗೆ ಬರುವುದಕ್ಕೆ ಸರಿಯಾಗಿ ಭೀಮಣ್ಣನ ಪುಷ್ಪಕ ವಿಮಾನ ಬಂದಿತ್ತು। ಭೀಮಣ್ಣ ನೀ ಹೇಳಿದಂಗ ಧಾರವಾಡಕ್ಕ ಹೊಂಟೆನಿ ಸ್ವಲ್ಪ ರಾಣೇಬೆನ್ನೂರ ತನಕ ಬಿಡತೀಯಾ ಅಂತ ಕೇಳಿದ್ದ। ತನ್ನ ಉಪದೇಶ ಅವನಿಗೆ ನಾಟಿದ್ದಕ್ಕೆ ಸೋಮನನ್ನು ರಾಣೇಬೆನ್ನೂರಿನವರೆಗು ಪುಕ್ಕಟೆಯಾಗಿ ಕರೆದುಕೊಂಡು ಹೋಗಲು ಒಪ್ಪಿದ್ದ। ಸೋಮ ಗಾಡಿಯಲ್ಲಿ ಕುಳಿತು ಒಂದು ತಿಂಗಳಿನಿಂದ ನಡೆಯುತ್ತಿದ್ದ ಘಟನೆಗಳನ್ನು ನೆನಪಿಸಿಕೊಳ್ಳತೊಡಗಿದ. ಸಾವಿತ್ರಿಯ ಅಪ್ಪಣೆಯಾದ ನಂತರ ಸೋಮ ಗಂಭೀರವಾಗಿ ಬರವಣೆಗೆಯಲ್ಲಿ ತೊಡಗಿದ. ಒಂದು ಸಂಯುಕ್ತಕರ್ನಾಟಕದಲ್ಲೂ ಪ್ರಕಟವಾಗಿತ್ತು. ಅವತ್ತು ಸೋಮ ಮುಂಜಾನೆಯಿಂದ ತನ್ನ ಕಥೆ ಹಿಡಿದುಕೊಂಡು ಇಡೀ ದೇವರಗುಡ್ಡವನ್ನು ಸುತ್ತುಹೊಡೆದಿದ್ದ. ಸಾವಿತ್ರಿ ತುಟಿಯಂಚಲೇ ನಕ್ಕಿದ್ದಳು. ಅಂತೂ ಭೀಮಣ್ಣನ ಟೆಂಪೋ ಭರ್ತಿಯಾಗಿತ್ತು. ಅಷ್ಟರಲ್ಲೇ ಭೀಮಣ್ಣ ವರಾತ ಶುರು ಮಾಡಿದ ಗಾಡಿ ಯಾಕೋ ಚಾಲು ಆಗವಲ್ದು ಸ್ವಲ್ಪ ತಳ್ರೆಪಾ , ಜನ ಶಪಿಸುತ್ತಲೇ ಅವನ ಕೆಲಸ ಮಾಡಿಕೊಟ್ಟಿದ್ದರು. ಆ ಟೆಂಪೋ ಎಷ್ಟು ಹಳೆಯದೆಂದರೆ ಸೋಮನ ತಂದೆ ದ್ಯಾಮಪ್ಪ ತನ್ನ ಮದುವೆಗೆ ಅದರಲ್ಲಿಯೇ ಕೂನಬೇವಿಗೆ ಹೋಗಿದ್ದು, ಮತ್ತು ಸೋಮನ ನಾಮಕರಣಕ್ಕೂ, ಈಗ ಸ್ವತಃ ಸೋಮನೇ ಹೋಗುತ್ತಿದ್ದಾನೆ ಅದರಲ್ಲಿ ತನ್ನ ಕನಸುಗಳನ್ನು ಸಕಾರಗೊಳಿಸಲು.

ಅಂತೂ ಸೋಮ ಧಾರವಾಡ ತಲುಪಿದ. ಆದರೆ ಇರುವುದು ಎಲ್ಲಿ, ಏನೂ ಅಂತ ಒಂದು ತಿಳಿಯಲಿಲ್ಲ. ಸಾಹಿತಿಯಾಗಲಿಕ್ಕೆ ಬಂದವನಿಗೆ ಸ್ವಹಿತಕ್ಕೊಂದು ನೆಲೆಯಿರಲಿಲ್ಲ ಅಲ್ಲಿ. ಸುಮಾರು ದಿನಗಳ ಸತತ ಪ್ರಯತ್ನದಿಂದ ಸೋಮನಿಗೆ ಸುಭಾಷ ರೋಡಿನಲ್ಲಿ ಒಂದು ಚಾಕರಿ ದೊರಕಿತ್ತು. ಅವನಲ್ಲಿದ್ದ ಬರೆಯಬೇಕೆಂಬ ಉತ್ಸಾಹ ಕಂಡು ಪುಸ್ತಕದಂಗಡಿಯ ಮಾಲಿಕರು ಈ ತರ್ಜುಮೆ ಕೆಲಸವನ್ನು ನೀಡಿದ್ದರು ಈಗ ನೋಡಿದರೆ ಪೆನ್ನೆ ಮುಡುತ್ತಿಲ್ಲ, ಹೊಸ ಪೆನ್ನಿಗೆ ಹಣವಿಲ್ಲ. ಸರಿಯಾಗಿ ಅದೇ ಹೊತ್ತಿಗೆ ಅಲ್ಲಿ ದೇವರಗುಡ್ದದಲ್ಲಿ ಸಾವಿತ್ರಿ ಮದುವೆಯಾಗಿ ತನ್ನ ಗಂಡನೊಂದಿಗೆ ಮೊದಲ ಮಗುವಿನ ಹರಕೆಗಾಗಿ ಮೈಲಾರಲಿಂಗಯ್ಯನ ಗುಡ್ಡದ ಮೆಟ್ಟಿಲನ್ನು ಏರುತ್ತಿದ್ದಳು.
ಮಹೇಶ ಎಸ್ ಲಕ್ಶ್ಮೆಶ್ವರ

Tuesday, December 4, 2007

ಕುರಿಪಲ್ಯ

ನಾನ ಬಡಕೊಂಡೆ ಮುದುಕಿ ಏನೇನು ಆಸೆಪಡ್ತಿತ್ತು ಎಲ್ಲಾ ತಿಂಗಳ ತಿಥಿಗೆ ಮಾಡಿ ಹಾಕ್ರಿ ಅಂತ ಒಬ್ರರ ಕೆಳಿದ್ರೆ ನನ್ನ ಮಾತ, ಅನುಭವಿಸ್ರಿ ಈಗ. ಹಿಡಕೊಣದ, ಹಿಡಕೊಂಡಾಳ ನನಗರ ಹಿಡದಿದ್ದರ ನಾನು ಹೋಗತಿದ್ದೆ ಅತ್ಲಾಗ, ಹೋಗಿ ಆ ಶಾರಿಗೆ ಹಿಡ್ದಾಳ ನಿಮ್ಮವ್ವ . ಶಾರಿಗೆ ಹೊದ ವಾರರ ಗಂಡಿನ ಕಡೆದವ್ರು ನೋಡಿಕೆಂಡ ಹೋಗ್ಯಾರ ಇಲ್ಲಿ ನೋಡಿದ್ರ ಹಿಂಗಾಗಿ ಆಗಿ ಕುಂತದ . ಅಲ್ಲಾ ಅಕಿ ಆಸೆನರ ಎನಿತ್ತಪ್ಪಾ ಕ್ರಿಷ್ಣಪ್ಪ, ಬಂಗಾರ, ಮತ್ತೊಂದ, ಕುರಿ ಪಲ್ಯ ಅಂದ್ರ ಬಾಯಿ ಬಿಡ್ತಿದ್ಲ ತಿಂಗಳ ತಿಥಿಗೆ ಅದನ್ನ ಮಾಡಿಹಾಕಿಲ್ಲ ಅಂತ ಹೀಂಗ ಬಂದ ಕಾಡಾಕತ್ತಾಳ. ಕಾಲಕೇಜಿ ತಂದ ಮಾಡಿ ಹಾಕಿದ್ರ, ಹಿಂಗೆಲ್ಲಾ ಆಗತಿರಲಿಲ್ಲ ನೋಡ್ರಿ ಅಂತ ಮನೆಗೆ ಬಂದ ಪ್ರತಿಯೊಬ್ಬರಿಗೂ ತನ್ನ ಹೆಂಡತಿಯ ದೆವ್ವ ಇಪ್ಪತ್ತು ವರ್ಷದ ಮೊಮ್ಮಗಳು ಶಾರಿಗೆ ಹಿಡಿದಿದೆ ಎಂದು ಖಚಿತಪಡಿಸುತ್ತಿದ್ದ ಪಾಂಡಪ್ಪ . ನಿಮ್ಮಪ್ಪನ ಸುಮ್ಮನ ಕುಂದ್ರಸ್ರಿ ಇನ್ನೇನ ಡಾಕ್ಟರ ಬರೋ ಹೊತ್ತ ಆತು, ಅವರ ಮುಂದನು ಹಿಂಗ ಮಾತಾಡಿ ನಮ್ಮ ಮರ್ಯಾದಿ ಮಣ್ಣಪಾಲ ಮಾಡಿಗಿಡ್ಯಾನು . ಅಂದವಳು ಮುದುಕ ಪಾಂಡಪ್ಪನ ಮಗ ಕ್ರಿಷ್ಣಪ್ಪನ ಹುಬ್ಬಳ್ಳಿ ಹೆಂಡತಿ. ಕ್ರಿಷ್ಣಪ್ಪ ಎಲ್ಲೋ ದಿಗಂತದಲ್ಲಿ ನೋಡುತ್ತ ಹೂಂಗುಟ್ಟಿದ ಆದರೆ ಅಲ್ಲಿಂದ ಕದಲಲಿಲ್ಲ.
ಪಾಂಡಪ್ಪ ಇಡೀ ರಾಣೇಬೆನ್ನೂರಿಗೆ ಪೇಪರ ಪಾಂಡಪ್ಪ ಅಂತಲೇ ಪರಿಚಯ. ಹುಬ್ಬಳ್ಳಿಯಿಂದ ಮುಂಜಾನೆ ನಾಲ್ಕಕ್ಕೇ ಬರುತ್ತಿದ್ದ ಏಕಮಾತ್ರ ಕನ್ನಡ ದಿನ ಪತ್ರಿಕೆ ಸಂಯುಕ್ತ ಕರ್ನಾಟಕದ ಅಧಿಕೃತ ಏಜೆಂಟ ಅವನು. ನಾಲ್ಕು ಘಂಟೆಗೆ ಪ್ರಾರಂಭವಾಗುತ್ತಿದ್ದ ಅವನ ಪೇಪರ ಹಾಕುವ ಕಾರ್ಯಕ್ರಮ ಆರು ಘಂಟೆಗೆಲ್ಲಾ ಮುಗಿದು ಹೋಗುತ್ತಿತ್ತು. ಊರಾದರೂ ಎಷ್ಟು ದೊಡ್ಡದಿತ್ತು , ಈ ಕಡೆ ಗೌಡ್ರ ಓಣಿಯಿಂದ ರೈಲ್ವೇ ಸ್ಟೇಷನವರೆಗೂ , ಆ ಕಡೆ ಪಶ್ಚಿಮ ಪ್ಲಾಟನಿಂದ ಚೌಡವ್ವನ ಗುಡಿಯವರೆಗು ಮುಗಿಯಿತು ಊರು ಇದ್ದಿದ್ದೆ ಅಷ್ಟು. ಅದರಲ್ಲೂ ಕನ್ನಡ ಪತ್ರಿಕೆ ಓದುವುವರು ಶೇಕಡಾ ೬೦ಇದ್ದರು ಅನ್ನಿ, ಮಿಕ್ಕವರು ಎಲ್ಲಾ ಮಾರವಾಡಿ ಶೇಠಗಳೆ ತುಂಬಿದ್ದರು ಊರಿನಲ್ಲಿ. ಪಾಂಡಪ್ಪನೂ ಪಕ್ಕದ ಹಾವನೂರಿನಿಂದ ವಲಸೆ ಬಂದವನೆ . ಅವನ ಪೂರ್ವಜರೆಲ್ಲ ಅವರ ಕುಲಕಸುಬಾದ ನೇಯ್ಗೆ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತ ಬದುಕಿನ ಕಡೆಯ ದಿನಗಳನ್ನು ಮುಗಿಸುವ ಪ್ರಯತ್ನದಲ್ಲಿದ್ದರು. ತಾನು ಇವರಂತಾಗುವುದು ಬೇಡವೆಂದು ಪಾಂಡಪ್ಪ ಮದುವೆಯಾದ ತಕ್ಷಣ ರಾಣೇಬೆನ್ನೂರು ಸೇರಿಕೊಂಡಿದ್ದ. ಕಲೆತ ನಾಲ್ಕನೇ ಕ್ಲಾಸು ಸಂಯುಕ್ತ ಕರ್ನಾಟಕ ಮಾರಾಟಕ್ಕೆ ಸಹಾಯ ಮಾಡಿತ್ತು. ಪಾಂಡಪ್ಪನ ಹೆಂಡತಿ ಸೀತವ್ವ ಗಂಡ ಮುಂಜಾನೆ ನಾಲ್ಕಕ್ಕೆ ಎದ್ದು ಹೋಗುವುದನ್ನ ಭಯ ಮಿಶ್ರಿತ ಆಶ್ಚರ್ಯಗಳಿಂದ ನೋಡುತ್ತಿದ್ದಳು. ತನ್ನ ಕೆಲಸವೇ ಅದು, ಜನರಿಗೆ ಪೇಪರ ಹಂಚುವುದು ಮತ್ತು ಅದರಿಂದಲೇ ನಮ್ಮ ಹೊಟ್ಟೆಗೆ ಅನ್ನ ಅಂತ ಸಿಗುವುದು ಅಂತ ಅವಳಿಗೆ ತಿಳಿಸುವುದರಲ್ಲಿ ಸಾಕು, ಸಾಕಾಗುತ್ತಿತ್ತು ಅವನಿಗೆ.ಹೀಗೆ ಸುಖವಾಗಿ ಸಾಗುತ್ತಿದ್ದ ಪಾಂಡಪ್ಪನ ಸಂಸಾರದಲ್ಲಿ ಮಕ್ಕಳಿಲ್ಲ ಎನ್ನುವ ಕೊರಗು ಮಾತ್ರ ಬಿಟ್ಟು ಬಿಡದೆ ಕಾಡುತ್ತಿತು. ಗಂಡಹೆಂಡತಿ ಸುತ್ತಮುತ್ತಲಿನ ಎಲ್ಲಾ ದೇವರಿಗೂ ಹೋಗಿಬಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಕಡೆಗೆ ಮನೆ ದೇವರಾದ ಹಾವನೂರದ್ಯಾಮವ್ವನಿಗೆ ಜೋಡಿ ಕುರಿಗಳ ಬ್ಯಾಟಿ ಕೊಡುತ್ತೆವೆ ಎಂದು ಹರಕೆ ಹೊತ್ತಾಗಲೇ ಸೀತವ್ವನ ಹೊಟ್ಟೆಯಲ್ಲಿ ಪಾಂಡಪ್ಪನ ಮೊದಲ ಬೀಜ ಮೊಳಕೆಯೊಡೆದಿದ್ದು. ಅದನ್ನು ಸೀತಮ್ಮ ಪ್ರಕಟಿಸಿದ್ದು ತನ್ನ ಕುರಿಪಲ್ಯವನ್ನು ತಿನ್ನುವ ಆಸೆಯಿಂದಲೇ. ಅವತ್ತು ಪಾಂಡಪ್ಪ ಇಡೀ ಊರಿಗೆ ಸಂಯುಕ್ತಕರ್ನಾಟಕದ ಜೊತೆಗೆ ಸಿಹಿಬೂಂದಿಯನ್ನು ಹಂಚಿದ್ದ.ಪೇಪರ ಏಜನ್ಸಿಯಿಂದ ಬರುತ್ತಿದ್ದ ಹಣ ಕೇವಲ ಇಬ್ಬರ ಹೊಟ್ಟೆಗೆ ಸರಿ ಹೋಗುತ್ತಿತ್ತು ಈಗ ಕ್ರಿಷ್ಣನ ಆಗಮನ,ಮತ್ತು ಅವನಿಗಾಗಿ ಹೊತ್ತ ಹರಕೆಗಳನ್ನು ಪೂರೈಸುವುದು, ಇವಿಗಳಿಗೆಲ್ಲಾ ಹಣ ಎಲ್ಲಿಂದ ತರುವುದು . ಸಾಲ ಜನ್ಮದಲ್ಲೆ ಮಾಡುವುದಿಲ್ಲವೆಂದು ನಿರ್ಧಾರ ಬೇರೆ ಮಾಡಿದ್ದನಲ್ಲ. ಆಗ ಪಾಂಡಪ್ಪ ( ಸ.ಕ) ಜೊತೆಗೆ ವರ್ಷದ ಕ್ಯಾಲೆಂಡರ್ ಮಾರುವುದಕ್ಕೆ ಶುರುಮಾಡಿದ. ಅದನ್ನು ಹುಬ್ಬಳ್ಳಿಯಿಂದಲೇ ತರುತ್ತಿದ್ದ. ಪಿ ಸಿ ಶಾಬಾದಿಮಠ ಕ್ಯಾಲೆಂಡರ್ ಅಂದ್ರೆ ಪ್ರತಿಷ್ಠೆಯೇ ಸರಿ ಜನ ಮುಗಿಬಿದ್ದು ಖರೀದಿಸುತ್ತಿದ್ದರು। ಪಾಂಡಪ್ಪನಿಗೆ ಗೊತ್ತಿತ್ತು ಕ್ಯಾಲೆಂಡರ್ ವ್ಯಾಪಾರವೆನಿದ್ದರೂ ಕೇವಲ ಎರಡೇ ತಿಂಗಳಿನದು ಅಂತ ಅದಕ್ಕೆ ಅದರ ಜೊತೆ ಎ ಬಿ ಸಿ ಡಿ , ನಂಬರಿನ ತೂಗುಪಟ, ಆಗ ತಾನೆ ಪ್ರಾರಂಭವಾಗಿದ್ದ ಕರ್ಮವೀರ ವಾರಪತ್ರಿಕೆ,ಹೊಸ ಕನ್ನಡ ಚಿತ್ರಗೀತೆಗಳು , ಸಿನಿಮಾ ನಾಯಕರ ಭಾವಚಿತ್ರಗಳು,ದಸರೆಗೆ ದೇವಿ ಮಹಾತ್ಮೆ, ಊರಿನಲ್ಲಿ ಹೊಸದಾಗಿ ಕಟ್ಟಿದ ಏಸು ಸ್ವಾಮಿ ದೇವಸ್ಥಾನಕ್ಕೆ ಸಂಭಂದಿಸಿದ ಪುಸ್ತಕ, ರಾಜ್ಯೋತ್ಸವ, ಅಗಸ್ಟ ೧೫ ಕ್ಕೆ ಬಾವುಟಗಳ ಮಾರಾಟ, ಹೀಗೆ ಪಟ್ಟಿ ಬೆಳೆಯುತ್ತ ಹೋಯಿತು ಆದರೆ ಪಾಂಡಪ್ಪ ದುಡ್ಡು ಅಂತ ಕಂಡದ್ದು ವರಮಾಹಾಲಕ್ಷ್ಮಿ ಪೋಜೆಯ ಪುಸ್ತಕದಲ್ಲಿಯೇ ಅಷ್ಟೊಂದು ಮಾರಾಟವಾಗುತ್ತಿತ್ತದು । ನಂತರದ ದಿನಗಳಲ್ಲಿ ಪಾಂಡಪ್ಪ ತಿರುಗಾಡಿದ್ದು ಸಾಕೆಂದು ಎಮ್ ಜಿ ರಸ್ತೆಯ(ರಾಣೇಬೆನ್ನೂರಿನಲ್ಲೂ ಒಂದು ಎಮ್ ಜಿ ರಸ್ತೆ ಇದೆ) ಸಂಪತ್ ಸ್ಟೀಲ್ ಅಂಗಡಿಯ ಶೇಠನ ಕೈಕಾಲು ಹಿಡಿದು ಅವನ ಅಂಗಡಿಯ ಎದುರು ತನ್ನ ಪುಸ್ತಕ ಮಾರಾಟಕ್ಕೆ ಜಗ ಗಿಟ್ಟಿಸಿಕೊಂಡ ಆ ಜಾಗ ಸಿಕ್ಕ ಮೇಲೆಯೇ ಪಾಂಡಪ್ಪ ಒಂದು ಸ್ವಂತ ಮನೆ , ಹೆಂಡತಿಯ ಕೊರಳತಾಳಿಗೆ ಎಂಟು ಅರಗು ಮಿಶ್ರಿತ ಬಂಗಾರದ ಗುಂಡುಗಳು, ಬೆಳೆದ ಮಗನಿಗೆ ಒಂದು ಸೈಕಲ್ಲು(ಆದರೆ ಕ್ರಿಷ್ಣ ತನ್ನ ಜೀವಮಾನದಲ್ಲೇ ಸೈಕಲ್ಲ ಓಡಿಸುವುದನ್ನು ಕಲೆಯಲಿಲ್ಲ) ಅಂತ ಮಾಡಿದ್ದು. ಇಷ್ಟೇಲ್ಲಾ ಆದ ನಂತರ ಅವನ ಮನೆಗೆ ಸಂಭಂದಿಕರ ಆಗಮನವು ಹೆಚ್ಚಾಯಿತು. ಮೊದಲು ಪಾಂಡಪ್ಪ ಯಾರ ಮನೆಗಾದರೂ ಹೋದರೆ ಹಣಕ್ಕೆ ಬಂದಿರಬಹುದು ಎಂದು ಊಹಿಸುತ್ತ, ಮತ್ತು ಅವನು ಕೇಳದೆ ಇದ್ದಾಗ ತಮ್ಮ ಊಹೆ ತಪ್ಪಾಯಿತು ಎಂದು ಬೇಸರ ಪಡುತ್ತಿದ್ದ ಅದೇ ಜನ ಈಗ ಅವನ ಬಾಗಿಲಿಗೆ ಬರುವಂತಾಗಿದ್ದರು.ಪಾಂಡಪ್ಪ ಬಂದವರನ್ನು ಸರಿಯಾಗಿ ಉಪಚರಿಸಿಯೆ ಕಳುಹಿಸಿಕೊಡುತ್ತಿದ್ದ.ಕ್ರಿಷ್ಣಪ್ಪ ಎಂಟನೇ ಕ್ಲಾಸಿನ ವರೆಗೂ ಕಲೆತು ನಂತರ ಮುಂದೆ ಶಾಲೆಗೆ ಹೋಗದೆ ಅದೇ ಎಮ್ ಜಿ ರಸ್ತೆಯ ಹರಕಚಂದ ಶೇಠನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ ಪಾಂಡಪ್ಪ ತನ್ನ ಕೆಲಸ ತನ್ನ ಜೊತೆಗೆ ಮಣ್ಣಾಗುತ್ತದೆ ಎಂದು ತುಂಬ ವ್ಯಥೆಪಟ್ಟುಕೊಂಡ. ಕ್ರಿಷ್ಣಪ್ಪ ಮದುವೆ ವಯಸ್ಸಿಗೆ ಬಂದಾಗ ಪಾಂಡಪ್ಪ ಸಭಂದಿಕರಲ್ಲೆ ಹೆಣ್ಣು ತರದೆ ದೂರದ ಹುಬ್ಬಳ್ಳಿಯಿಂದ ಹೊರಗಿನ ಹೆಣ್ಣುತಂದು ಮದುವೆ ಮಾಡಿದ.ಪಾಂಡಪ್ಪನ ಹೆಂಡತಿ ಸೀತವ್ವ ಯಾವುದಕ್ಕೂ ತಕರಾರು ಮಾಡದೆ ತನ್ನ ಪಾಡಿಗೆ ತಾನಿದ್ದಳು। ಒಂದು ರೀತಿಯಲ್ಲಿ ಅವಳ ಜಗತ್ತು ತೀರ ಚಿಕ್ಕದು, ತಾನು, ತನ್ನ ಗಂಡ, ಮತ್ತು ಮಗ, ಇಷ್ಟೇ.ಅವಳ ತವರು ಮನೆಕಡೆಯವರು ಯಾರು ಬದುಕಿರಲಿಲ್ಲ. ಅವಳ ತಮ್ಮನ ಮಗ ಹುಬಳ್ಳಿಯ ಬಸ್ಯ್ಟಾಂಡ ಹತ್ತಿರ ಯಾವುದೊ ಮಿಠಾಯಿ ಅಂಗಡಿಯಲ್ಲಿ ಇದ್ದಾನೆ ಎಂದು ತಿಳಿದಿತ್ತು ಅಷ್ಟೆ ಯಾರು ನೋಡಿರಲಿಲ್ಲ. ಆದರೆ ಆ ಕೊರಗು ಅವಳನ್ನು ಸಾಯುವವರೆಗೂ ಬಿಡಲಿಲ್ಲ. ಸೂಕ್ಷ್ಮಗ್ರಾಹಿ ಪಾಂಡಪ್ಪ ಹುಬ್ಬಳ್ಳಿಗೆ ಹೋದಾಗಲೆಲ್ಲ ಅವನನ್ನು ಹುಡುಕುವ ಪ್ರಯತ್ನ ಪಟ್ಟಿದ್ದ. ಎಲ್ಲಿಂದ ಸಿಕ್ಕಾನು ಅಂತಹ ದೊಡ್ಡ ಶಹರದಲ್ಲಿ ಅವನ ಒಂದು ಫೋಟೊ ಸಹ ಇಲ್ಲ ಇವರ ಹತ್ತಿರ. ಸೀತವ್ವ ಗಂಡ ಊರಿನಿಂದ ಬಂದ ತಕ್ಷಣ ಅವನ ಮುಖ ನೋಡುತ್ತಿದ್ದಳು ಇವನಲ್ಲಿ ಉತಾರವಿರುತ್ತಿರಲಿಲ್ಲ.
ಕೇವಲ ಒಂದೇ ಸಂತಾನ ಪಡೆದಿದ್ದ ಪಾಂಡಪ್ಪನ ಮನೆ ಕ್ರಿಷ್ಣಪ್ಪನ ಮದುವೆಯ ನಂತರವೇ ನಂದಗೋಕುಲವಾಗಿದ್ದು ,ಆದರೆ ಕ್ರಿಷ್ಣಪ್ಪನಿಗೆ ಹುಟ್ಟಿದ ಮೂರು ಮಕ್ಕಳು ಹೆಣ್ಣಾಗಿದ್ದರಿಂದ ಕ್ರಿಷ್ಣಪ್ಪನ ಮುಖದಲ್ಲಿ ಒಂದು ಚಿಂತೆಯ ಗೆರೆ ಅಚ್ಚಳಿಯದಂತೆ ಉಳಿದು ಹೋಯಿತು. ಕ್ರಮೆಣ ಕ್ಷೀಣವಾಗುತ್ತಿದ್ದ ಅಪ್ಪನ ವ್ಯಾಪಾರ ,ರೋಗಗ್ರಸ್ಥ ತಾಯಿ, ಶ್ರೀಮಂತ ಹೆಂಡತಿಯ ಹಂಗಿನ ಮಾತುಗಳು, ಇವುಗಳೆಲ್ಲದರಿಂದ ಕ್ರಿಷ್ಣಪ್ಪ ಈ ಲೋಕದ ಮನುಷ್ಯನಾಗೆ ಇರಲಿಲ್ಲ. ಹುಟ್ಟಿದ ಮೂರು ಮಕ್ಕಳಲ್ಲಿ ನಂತರದ ಎರಡು ಹುಡುಗಿಯರು ಸಣ್ಣ ತಲೆಯವು ಹುಟ್ಟಿದ್ದವು, ಹೀಗೆ ಹೇಳುವುದಾದರೆ ಮನುಷ್ಯರ ದೇಹ ಕುರಿಯ ತಲೆ, ಕ್ರಿಷ್ಣಪ್ಪನ ಹೆಂಡತಿಗೆ ಇದು ಹೊಸದಾಗಿ ಕಂಡರೆ ಅವನ ಅಪ್ಪ, ಅಮ್ಮ, ಇದು ಯಾವ ತಪ್ಪಿ ಹೋದ ಹರಕೆಯ ಶಾಪ ಎಂದು.ಕ್ರಿಷ್ಣಪ್ಪ ಒಂದು ವಿಚಿತ್ರವಾದ ಯಾರಿಗೂ ಹೇಳಿಕೊಳ್ಳಲಿಕ್ಕಾಗದ ಸಂತೋಷದಲ್ಲಿದ್ದ. ಸಣ್ಣ ತಲೆಯ ಮಕ್ಕಳು ಅಬ್ಬಬ್ಬಾ ಅಂದರೆ ಐದು ವರ್ಷ ಬದುಕಿಯಾವು ನೋಡಿಲ್ವಾ ನಾನು ಚಿಕ್ಕಪ್ಪನ ಮಕ್ಕಳೇ ಹುಟ್ಟಿದ್ದವಲ್ಲಾ ಹೀಗೆ ಸಣ್ಣ ತಲೆಯವು ,ಸರಿಯಾಗಿ ಐದು ವರ್ಷವು ಬದುಕಲಿಲ್ಲ ಅವು ಒಂದರಹಿಂದೆ ಒಂದರಂತೆ ಎರಡೇವರ್ಷಗಳ ಅಂತರದಲ್ಲಿ ಹೋರಟೆ. ಗಂಡಾಗಲಿ, ಗಂಡಾಗಲಿ ಎಂದು ಪ್ರಯತ್ನಿಸಿ ಮೂರು ಹೆಣ್ಣನ್ನೆ ಕರೆತಂದಿದ್ದ ಕ್ರಿಷ್ಣಪ್ಪ ಮೂರು ಅದೇ ಆದಾಗ ತನ್ನ ಪ್ರಯತ್ನಕ್ಕೆ ಪೂರ್ಣವಿರಾಮ ಹಾಕಿದ್ದ। ಈಗ ಮೂರರಲ್ಲಿ ಎರಡಕ್ಕೆ ಸಣ್ಣತಲೆ, ಬೆಳೆಯುವ ಮೊದಲೆ ಮುರಿದು ಬಿದ್ದಿದ್ದವು ಅವು. ಕ್ರಿಷ್ಣಪ್ಪ ಅದಕ್ಕೆ ಸಂತೋಷವನ್ನು ಪಡಲಿಲ್ಲ, ದುಖ;ವಂತೂ ಮೊದಲೆ ಆಗಲಿಲ್ಲ. ಈಗ ಉಳಿದಿರುವ ಒಬ್ಬಳು ಖರ್ಚು ಆದರೆ ಮುಗಿಯಿತು ನನ್ನ ಜವಾಬ್ದಾರಿ ಅಂದುಕೊಂಡಿದ್ದ.ಅಷ್ಟರಲ್ಲೆ ಶುರುವಾಯಿತಲ್ಲಾ ಸೀತವ್ವನ ವಿಚಿತ್ರ ಕಾಯಿಲೆ. ಸರುರಾತ್ರಿ ಮನೆಯಿಂದ ಓಡುವುದಕ್ಕೆ ಶುರುಮಾಡಿದಳೆಂದರೆ ಹೋಗಿ ನಿಲ್ಲುತ್ತಿದ್ದದ್ದು ಉಕ್ಕಡಗಾತ್ರಿ ಕಡೆ ಹೋಗುವ ರಸ್ತೆಯ ಕಡೆಗೆ. ಗಂಡಸರ ತರಹ ನಿಂತುಕೊಂಡೆ ಜಲಭಾದೆ ತೀರಿಸುವುದು, ಎಲ್ಲರನ್ನೂ ಅವ್ಯಾಚ್ಚ ಶಬ್ದಗಳಿಂದ ನಿಂದಿಸುವುದು ಇದರಿಂದ ಎಲ್ಲರಿಗೂ ಸಾಕು ಸಾಕಾಗಿತ್ತು ಯಾವುದೊ ದೆವ್ವ ಹಿಡಿದಿದೆ ಅಂತಲೇ ಮಾತಾಡಿಕೊಂಡರು ಅದರೆ ಅವಳಿಗೆ ಬಂದಂತಹ ಕಾಯಿಲೆ ಯಾವುದು ಅಂತ ತಿಳಿದುಕೊಳ್ಳುವುದಕ್ಕೆ ಯಾರು ಪ್ರಯತ್ನ ಪಡಲಿಲ್ಲ. ಅವಳ ಎಲ್ಲ ಆಟಗಳು ನಿಂತಿದ್ದು ಅವಳ ಸಾವಿನ ನಂತರವೇ . ಒಬ ಪಾಂಡಪ್ಪನ ಹೊರತಾಗಿ ಯಾರಿಗೂ ಅಷ್ಟು ನೋವೂ ಆಗಲಿಲ್ಲ.ಪಾಂಡಪ್ಪ ಅಂದಿನಿಂದ ಮಾತೆ ನಿಲ್ಲಿಸಿದ, ಅವನ ಪಕ್ಕದಲ್ಲಿ ತಟ್ಟೆ ಬಂದರೆ ಊಟ ಇಲ್ಲದಿದ್ದರೆ ಊಪವಾಸ . ಕ್ರಿಷ್ಣಪ್ಪನು ಅದರ ಬಗ್ಗೆ ಹೆಚ್ಚು ತೆಲೆ ಕೆಡಿಸಿಕೊಂಡಿರಲಿಲ್ಲ. ಸೀತವ್ವನ ತಿಂಗಳ ತಿಥಿಯಾಗಿ ಸರಿಯಾದ ಒಂದು ವಾರಕ್ಕೆ ಶಾರಿಯ ಹುಚ್ಚಾಟಗಳು ಶುರುವಾಗಿದ್ದವು. ರಾತ್ರಿ ವೇಳೆ ಪೂಜೆಗೆ ಕೂಡುವುದು, ಅಜ್ಜಿಯ ಹಾಗೆ ಗಂಡಸರ ತರಹ ನಿಂತುಕೊಂಡು.. . ಅವಳಂತೆಯೆ ಮಾತನಡುವುದು, ನನ್ನ ಮೊಮ್ಮಗನನ್ನ ಹುಡಕಲಿಲ್ಲ ನೀವು ಎಂದು ಎದೆ , ಎದೆ ಬಡಿದುಕೊಳ್ಳುವುದು, ಇದೆಲ್ಲದರಿಂದ ರೋಸಿಹೋದ ಕ್ರಿಷ್ಣಪ್ಪನ ಹೆಂಡತಿ ಮಗಳನ್ನು ಹೊರಗೆ ಕಳುಹಿಸುವುದನ್ನೆ ನಿಲ್ಲಿಸಿದಳು. ಮನೆಯಲ್ಲಿ ಕುರಿಪಲ್ಯ ಮಾಡಿಹಾಕ್ರೋ ಅಂತ ಮನೆ ಸೂರು ಕಿತ್ತು ಹೋಗುವ ಹಗೆ ಕಿರುಚುವುದು,ಊಟಕ್ಕೆ ಕುಳಿತರೆ ಇಪ್ಪತ್ತು ರೊಟ್ಟಿಗಳನ್ನು ಒಂದೇ ಸಾರಿ ಮುಗಿಸುವುದು, ಮತ್ತು ಅಜ್ಜಿಯ ತರಹವೇ ಉಕ್ಕಡಗಾತ್ರಿಯ ದಾರಿಗೆ ಹೋಗಿ ನಿಲ್ಲುವುದು, ಇನ್ನು ಸುಮ್ಮನಿದ್ದದ್ದು ಸಾಕೆಂದು ಪಾಂಡಪ್ಪ ಬಾಯಿಬಿಟ್ಟಿದ್ದ.ಸೀತವ್ವನ ದೆವ್ವವೇ ಶಾರಿಗೆ ಹಿಡಿದುಕೊಂಡಿರುವುದು ಅಂತ.ಕ್ರಿಷ್ಣಪ್ಪನ ಹೆಂಡತಿ ಹ್ಯಾಗೆ ನಂಬಿಯಾಳು ಅಷ್ಟೊಂದು ಓದಿದವಳು. ಡಾಕ್ಟರ ಸಹ ಕೈಚಿಲ್ಲಿದಾಗ, ಕುರಿಪಲ್ಯ ಮಾಡಿ ಇನ್ನೊಮ್ಮೆ ಸೀತವ್ವನ ತಿಥಿ ಮಾಡಿದರೂ ಹುಚ್ಚಾಟ ನಿಲ್ಲದಿದ್ದಾಗ ಉಕ್ಕಡಗಾತ್ರಿಯ ಅಜ್ಜಯ್ಯನ ಹತ್ತಿರ ಹೋದರೆ ಅಲ್ಲಿ ಶಾರಿ ಹುಚ್ಚು ಅತೀರೆಕಕ್ಕೆ ಹೋಯಿತು ಯಾವುರ್ ಅಜ್ಜಯ್ಯಲೆ ನೀನು ನನ್ನ ಮೊಮ್ಮಗ ಸಿಗೊಗಂಟ ಹೋಗಕಿ ಅಲ್ಲ ನಾನು, ಥೂ ನಿನ್ನ ಜನ್ಮಕ್ಕ ಬೆಂಕಿ ಹಾಕ ನನ್ನ ತಮ್ಮನ ಮಗನಿಗೆ ನನ್ನ ಮೊಮ್ಮಗಳನ್ನ ಕೊಡಬೇಕ ಅನ್ನೋ ಆಸೆ ಹಂಗ ಉಳಿಸಿ ಬಿಟ್ಟೆಲ್ಲೊ ಅಜ್ಜಯ್ಯಾ, ಬರಲಿ ಅಮವಾಸಿ ಅವತ್ತ ಮಾಡತೆನಿ ನಿನಗ ಅಂದವಳೆ ದೇವಸ್ಥಾನ ತುಂಬ ಉರುಳಾಟ ಪ್ರಾರಂಭಿಸಿ ಬಿಟ್ಟಳು. ಊರಿಗೆ ಬಂದ ತಕ್ಷಣ ಕ್ರಿಷ್ಣಪ್ಪ ಒಂದು ವಾರಕ್ಕೆ ಆಗುವಷ್ಟು ಬಟ್ಟೆಗಳೊಂದಿಗೆ ಹುಬಳ್ಳಿಗೆ ಹೊರಟುಹೋದ.

ನಮ್ಮ ಬೀchi ನೆನಪು

ನಾವು ಇಂದು ನೋಡುತ್ತಿರುವ, ಅನುಭವಿಸುತ್ತಿರುವ ಗಬ್ಬುತನವನ್ನು ಬೀಚಿಯವರು ಅಂದೇ ಕಂಡಂತಿದೆ । ಅವರ "ಉತ್ತರಭೂಪ" ಕೃತಿಯಿಂದ ಆಯ್ದ ಪ್ರಶ್ನೋತ್ತರಗಳು ಹೀಗಿವೆ।

ನಮ್ಮ ದೇಶದಲ್ಲಿರುವ ಅದ್ಭುತಾಶ್ಚರ್ಯಗಳಾವುವು??

ಬೇಕಾದಷ್ಟಿವೆ-ಹಣ ಮಾಡದ ರಾಜಕಾರಣಿ,ವಿನಯಶೀಲ ಸಾಹಿತಿ,
ಲೈಟ ಕಂಬಕ್ಕೆ ಕಲ್ಲು ಹೊಡೆಯದ ವಿದ್ಯಾರ್ಥಿ,
ಎಲ್ಲ ತಪ್ಪೂ ವಿದ್ಯಾರ್ಥಿಯದೇ ಅನ್ನದ ಗುರು,
ಹೆಂಡತಿಗೆ ಹೆದರದ ಅಧಿಕಾರಿ,
ಗಂಡನ ಮೇಲೆ ಸಂಶಯವಿಲ್ಲದ ಹೆಂಡತಿ,
ತಾನು ತ್ರಿಲೋಕ ಸುಂದರಿ ಎಂದು ತಿಳಿಯದ ಹೆಣ್ಣು,
ಅಂತಹವಳು ಹಿಂದು ಬರುವಾಗ ತಿರಿತಿರಿಗಿ ನೋಡದ ಮುದುಕ,
ಅಪಪ್ರಚಾರಕ್ಕೆ ಆಸ್ಪದ ಕೊಡದ ಸ್ವಾಮಿಗಳು-ಈ ಒಂಬತ್ತು ಅದ್ಭುತಾಶ್ಚರ್ಯಗಳಲ್ಲವೇ??
ಈಗ ಇವುಗಳನ್ನ ಇಂದಿಗೆ ಹೀಗೆ ಹೊಲಿಸಬಹುದೆ।

ಪಕ್ಷ ಬಿಟ್ಟು ಹೊಗುತ್ತೆನೆ ಎಂದು ಹೇಳುವ ಸಹ ರಾಜಕಾರಣಿಗೆ ನಿನ್ನ ಹಗರಣಗಳನ್ನು ಬಯಲಿಗೆಳೆಯುತ್ತೆನೆ ಅನ್ನದ ರಾಜಕಾರಣಿ,
ಬಡ್ಡಿ ಇಲ್ಲದೆ ಸಾಲ ನೀಡುವ ಬ್ಯಾಂಕುಗಳು,
ಕರೆದಲ್ಲಿಗೆ ಬರುವ ಬೆಂಗಳೂರಿನ ಅಟೋಗಳು,
ಹಗರಣಗಳಿಲ್ಲದ ಸಂಸ್ಥೆಗಳು,
ವಶಿಲಿಗಳಿಲ್ಲದೆ ಸಿಗುವ ನೌಕರಿಗಳು,
ಐದು ವರ್ಷ ಸ್ಥಿರವಾಗಿ ನಡೆಯುವ ಸರ್ಕಾರಗಳು,
ಸಹೊದ್ಯೋಗಿಗಳಿಗೆ ಕಿರಿಕಿರಿ ಮಾಡದ ಪ್ರೊಜೆಕ್ಟ ಮ್ಯಾನೆಜರಗಳು,
ಆಸ್ತಿಯಿಲ್ಲದ ಹೈಟೆಕ್ ಸ್ವಾಮಿಗಳು,
ಮತ್ತು ಹೋದ ತಕ್ಷಣಕ್ಕೆ ಆಗುವ ಸರ್ಕಾರಿ ಕೆಲಸಗಳು।

ಇನ್ನಷ್ಟು ಬೀಚಿಯವರ ಬರಹಗಳು ಹೀಗಿವೆ।

ಮನುಷ್ಯನ ಅಧ:ಪತನದ ನಾಂದಿ, ಯಾವುದು??

ಪರ ವಂಚನೆಯಿಂದ ನಾಂದಿ, ಆತ್ಮ ವಂಚನೆಯಿಂದ ಮುಕ್ತಾಯ।

ಇನ್ನೊಂದು
ದಿನದಿನಕ್ಕೆ ಮಾನವ ಸುಧಾರಿಸಿದಂತೆ
ಅವನ ಅಕಾರವೇಕೆ ಬದಲಾಗುತ್ತಿಲ್ಲ??

ಆಕಾರ ಇದ್ದ ಹಾಗೇ ಇರುತ್ತದೆ।ವಿಕಾರಗಳಷ್ಟೇ ಬೇಗ ಬೇಗ ಬದಲಾಗುತ್ತದೆ।
ಮತ್ತೊಂದು
ಆಹಾರ ಸಮಸ್ಯ ಎಂದಿನವರೆಗೆ?
ಹಸಿವು ಇರುವವರೆಗೆ ಮಾತ್ರ।
ಬರೆದರೆ ಬ್ಲಾಗೆ ತುಂಬಿತು ಅಂತ ನೀವೆನಂತೀರಿ??

Monday, December 3, 2007

ಆಗಾಗ ಮೂಡಿದ....

ಅಲ್ಲಿತ್ತು ಕತ್ತಲೆ
ಎಲ್ಲೆಲ್ಲೂ ಅಜ್ಞಾನದ ಕತ್ತಲೆ
ಜ್ಞಾನೋದಯದ ಹೊತ್ತಲೆ
ಜಗವಾಗಿತ್ತಲ್ಲ ಬೆತ್ತಲೆ!!


ಮನದ ಕನ್ನಡಿ ಒಡೆದು ನೂರು ಚೂರಾಯಿತು
ಒಂದರಲ್ಲಿ ಎಕಾಂಗಿ ನಾನಿದ್ದೆ
ಮತ್ತೆಲ್ಲದರಲ್ಲೂ ಮೋಸವೆಂಬ ಚಿತ್ರವಿತ್ತು


ಒಂದು ಹಸುಗನಸ ಕೊಲ್ಲುವುದಕ್ಕೆ
ಸಾವಿರ ಕೊಲೆಪಾತಕ ಕಾರಣಗಳು ಇಲ್ಲಿ
ಹಿಡಿ ಸಂತೋಷಕ್ಕೆಸಾವಿರ ವಿಘ್ನಗಳಿಲ್ಲಿ
ಎನಾಗಿದೆ ಜಗಕೆ ಬರಿ ಸ್ವಾರ್ಥಿಗಳೆ ತುಂಬಿಹರಲ್ಲ ಇಲ್ಲಿ


ಕತ್ತಲು ತುಂಬಿದ ರಾತ್ರಿಗೆ ಲಕ್ಷ ನಕ್ಷತ್ರಗಳ ಆಸರೆ
ನೊಂದ ಮನಸ್ಸಿಗೆ ಸಾವಿರಸಾಂತ್ವಾನಗಳ ಆಸರೆ
ಆದರೂ ಬದುಕೆಕೆ ಮತ್ತೊಬ್ಬರ ಕೈಸೆರೆ

Wednesday, October 24, 2007

ಮಳೆ

ಇನ್ನೂ ಎರಡೆ ನಿಮಿಷ ಕಾಲುವೆ ತುಂಬಲಿಕ್ಕೆ ರಸ್ತೆಯ ಮಟ್ಟದಿಂದ ಆರಡಿ ಕೆಳಗೆ ಕಾಲುವೆ ಇದೆ, ಇದೇ ರೀತಿ ಮಳೆ ಸುರಿದರೆ ಪಕ್ಕದಲ್ಲಿರುವ ಗುಡಿಸಲುಗಳಿಗು ನುಗ್ಗುತ್ತೆ ನೀರು, ಯಾವ ಕಾಲವಾಗಿತ್ತು ಬೆಂಗಳೂರಿಗೆ ಇಂತಹ ಮಳೆ ಬಂದು, ನಾನು ಮೂರು ವರ್ಷದವನಿದ್ದಾಗ ಬಂದಿತ್ತಂತೆ ಇಂತಹದೆ ಮಳೆ ಆಗ ನಮ್ಮೆಲ್ಲ ಗುಡಿಸಲುಗಳು ತೆಲಿಕೊಂಡು ಹೋಗಿದ್ವಂತೆ. ಇದು ಅಂತಹದೆ ಮಳೆನಾ ಮತ್ತೊಮ್ಮೆ ಮುಗಿಲಿನತ್ತ ಮುಖ ಮಾಡಿದ ಎಪ್ಪತ್ತು ವರ್ಷದ ವೃದ್ದ ಶಂಕ್ರಯ್ಯ , ಮತ್ತೆನು ಬೆಂಗಳೂರಿಗೆ ಬೆಂಗಳೂರೆ ಮಾತಾಡಿಕೊಳ್ತಿಲ್ವಾ ಈ ಮಳೆ ಬಗ್ಗೆ.

ಮುಂಜಾನೆಯೆ ಶುರುವಾಗಿದೆ ಈ ಶನಿ ಮಳೆ ಮುಗಿಲೆ ಹರಿದು ಹೋಗಿದೆಯೆನೊ ಅನ್ನೋ ತರಹ. ಏ ಸೋಮ ಆ ಬಕೆಟ ತಾ ಇಲ್ಲಿ ಇನ್ನೇನು ನೀರು ಒಳಗೆ ಬರಬಹುದು ಹಾಗೆ ನಿಮ್ಮ ಅಜ್ಜಿಗೆ ಸ್ವಲ್ಪ ಬೆಚ್ಚಗಿರೊ ಜಾಗದಲ್ಲಿ ಮಲಗಿಸು. ಎ ಕಾಳ ಮಲಗಿದಿಯೆನೊ ಅಂದಿದ್ದಕ್ಕೆ ಅವನ ಮುದ್ದಿನ ಕಡುಗಪ್ಪು ನಾಯಿ ಇಲ್ಲವೆನ್ನುವಂತೆ ಒಮ್ಮೆ ಮೆಲ್ಲಗೆ ಬೊಗಳಿತು,ಥೂ ಇನ್ನೂ ಜೋರಾಯಿತು ಈ ಮನೆಹಾಳು ಮಳೆ ಹೀಗೆ ಸಾಗಿತ್ತು ಶಂಕ್ರಯ್ಯನ ಸ್ವಗತ .
ಶಂಕ್ರಯ್ಯನಿಗೆ ವಯಸ್ಸು ಎಪ್ಪತ್ತಾದರು ಇನ್ನೂ ನಲವತ್ತರ ಹರೆಯದವರ ಹಾಗೆ ತುಂಬ ಲವಲವಿಕೆಯಿಂದಿರುರ ಮನುಷ್ಯ, ಸೋಮ ಅವನ ಖಾಸಾ ಮೊಮ್ಮಗ ಶಂಕ್ರಯ್ಯನ ಮಗ ಮತ್ತು ಸೊಸೆಯನ್ನ ಇದೇ ಬೆಂಗಳೂರಿನ ಟ್ರಾಫಿಕ್ಕು ನುಂಗಿತ್ತು ಮತ್ತು ಆವಾಗಲು ಮಳೆ ಬರ್ತಿತ್ತು ಅದಕ್ಕೆ ಮಳೆ ಅಂದ್ರೆ ಶಂಕ್ರಯ್ಯನಿಗೆ ಜನ್ಮ ಜನ್ಮಾಂತರಗಳ ದ್ವೇಷ.

ಶಂಕ್ರಯ್ಯನ ತಂದೆ ಸೋಮಯ್ಯ ದೂರದ ಕಂಚೀಪುರದಿಂದ ಹೊಟ್ಟೆಪಾಡಿಗಾಗಿ ತನ್ನ ಹದಿಮೂರನೆ ವಯಸ್ಸಿಗೆ ಬೆಂಗಳೂರಿಗೆ ಬಂದು ಸೇರಿದ್ದ. ಆ ಕಂಚೀಪುರವೆಂಬ ಕುಗ್ರಾಮದಲ್ಲಿ ಸುಮಾರು ವರ್ಷ ಮಳೆ ಬಾರದೆ ಸುತ್ತಲಿನ ಕಾಡೆಲ್ಲಾ ಒಣಗಿಹೋಗಿತ್ತು ಕಾಡನ್ನೆ ನಂಬಿ ಬದುಕು ನಡೆಸುತ್ತಿದ್ದ ಕಂಚೀಪುರದ ಜನ ಸಾಮೂಹಿಕವಾಗಿ ಊರನ್ನು ತೊರೆಯುತ್ತಿದ್ದ .ಅವರೆಲ್ಲಾ ಆ ಊರನ್ನು ಬಿಡಲು ಇನ್ನೊಂದು ಪ್ರಬಲ ಕಾರಣ ಕಂಚೀಪುರದ ಗುಡ್ಡದಲ್ಲಿದ್ದ ಸಸ್ಯಹಾರಿ ಪ್ರಾಣಿಗಳೆಲ್ಲಾ ಒಂದೊಂದಾಗಿ ಹಸಿವೆಯಿಂದ ಮತ್ತು ಗುಡ್ಡದಲ್ಲಿ ಬಿಡುಬಿಟ್ಟಿದ್ದ ಜೋಡಿ ಹುಲಿಗಳಿಗೆ ಆಹಾರವಾಗಿ ಸಂಪೂರ್ಣನಾಶವಾದಾಗ. ಹುಲಿಗಳಿಗೆ ಆಹಾರ ದೊರಕದಂತಾಗಿ ಅವು ಕಂಚೀಪುರದತ್ತ ನಡೆದಾಗಲೆ ಎಲ್ಲರೂ ಊರನ್ನು ಖಾಲಿ ಮಾಡಿದ್ದು,ಎಲ್ಲರೂ ದಾವಣಗೆರೆ, ಚಿತ್ರದುರ್ಗ, ಸೇರಿದರೆ ಸೋಮಯ್ಯ ದೂರದ ಬೆಂಗಳೂರಿಗೆ ಬಂದು ಸೇರಿದ್ದ. ಇಲ್ಲಿ ಬಂದವನಿಗೆ ತಕ್ಷಣಕ್ಕೆ ಮೈಸೂರು ರೋಡಿನಲ್ಲಿ ಅವನ ಕುಲ ಕಸುಬಾದ ಕಟ್ಟಿಗೆ ಒಡೆಯುವ ಕೆಲಸವೆ ದೊರಕಿತ್ತು ಊರಲ್ಲಿ ಮರ ಊರುಳಿಸುತ್ತಿದ್ದ ಇಲ್ಲಿ ಊರುಳಿಸಿ ತಂದ ಮರಗಳನ್ನು ತುಂಡು ಮಾಡುವ ಕೆಲಸ ಒಟ್ಟಿನಲ್ಲಿ ಪರಿಸರ ನಾಶಕರ್ತರಲ್ಲಿ ಅವನು ಒಬ್ಬ ಆದರೆ ಆ ವಿಷಯ ಅವನಿಗೆ ಹೊಟ್ಟೆಪಾಡು. ಅಂತಹ ಸೋಮಯ್ಯನಿಗೆ ಬೆಂಗಳೂರಿಗೆ ಬಂದು ಎರಡು ವರ್ಷಕ್ಕೆ ಮದುವೆನೂ ಆಗಿತ್ತು. ಹುಡುಗಿ ತಿಗಳರಪಾಳ್ಳ್ಯದ ಚಕ್ಕೆ(ಮರದ ತೊಗಟೆ) ಆರಿಸುವ ಸಾವಿ ಅಂತ.ಸೋಮಯ್ಯ ಶಂಕ್ರ ಹುಟ್ಟಿದ ಮೇಲೆನೆ ಒಂದು ಗುಡಿಸಲು ಅಂತ ಕಟ್ಟಿದ್ದು ಮೈಸೂರು ರೋಡಿನ ಋಷಭಾವತಿಯ ದಂಡೆಯ ಮೇಲೆ. ಕಾಲ ಉರುಳಿದಂತೆ ಸೋಮಯ್ಯ ಸಾವಿತ್ರಮ್ಮ ಶಂಕ್ರಯ್ಯನಿಗೆ ಮದುವೆ ಮಾಡಿ ಮೊಮ್ಮಗನನ್ನು ಕಂಡು ಕಾಲವಾಗಿದ್ದು ಅದೇ ಬಂಗಲೆ!!!!! ಯಲ್ಲೆ. ಶಂಕ್ರಯ್ಯ ತನ್ನ ಮಗನ ಮದುವೆ ಮಾಡಿ ಅವನ ಮಗನಿಗೆ ಸೋಮಯ್ಯ ಅಂತ ತನ್ನ ತಂದೆಯ ಹೆಸರಿಟ್ಟು ಧನ್ಯನಾಗಿದ್ದ . ಇಷ್ಟೆಲ್ಲಾ ಆದರೂ ಬೆಂಗಳೂರು ತನ್ನ ಪಾಡಿಗೆ ನಗುತ್ತ ನಗಿಸುತ್ತ ಸಾಗಿತ್ತು. ಆದರೆ ಇಂದು ಯಾರಮೇಲಿನ ಕೋಪದಿಂದಲೋ ಅಥವಾ ದುಖ:ದಿಂದಲೊ ಸುರಿಸುತ್ತಿದ್ದ ಮಳೆ ನಿಲ್ಲವ ಸೂಚನೆಯನ್ನೆ ಕೊಡುತ್ತಿಲ್ಲ.

ಏ ಸೋಮ ನಿಮ್ಮ ಅಜ್ಜಿ ಮಲಗಿದ್ಲಾ ಅಂತ ನೋಡಪ್ಪ ಸ್ವಲ್ಪ ನನ್ನದು ಅಂತ ಇರೋದು ಅದೇ ಒಂದು ಜೀವ. ಅದೇ ಗುಡಿಸಲಿನಲ್ಲಿ ನಾಲ್ಕು ಸಾವನ್ನು ಕಂಡ ಶಂಕ್ರಯ್ಯನ ಮಾತಿನಲ್ಲಿ ದುಖ: ಸಹಜವಾಗಿ ಹೊರಹೊಮ್ಮಿತ್ತು. ಮಳೆ ಇನ್ನೂ ಭೋರ್ಗರೆದು ಅಕ್ಕಪಕ್ಕದ ಗುಡಿಸಲುಗಳೆಲ್ಲಾ ಸ್ವಲ್ಪ ಸ್ವಲ್ಪವೆ ನೀರಿಗೆ ಆಹುತಿಯಾಗುತ್ತಿದ್ದವು. ರಸ್ತೆಯ ಪಕ್ಕದ ಬಸ್ಟ್ಯಾಂಡಿನಲ್ಲಿ ಜನರ ಹಾಹಾಕಾರ ಮುಗಿಲು ಮುಟ್ಟುವಂತಿತ್ತು, ಅವರನ್ನು ನೋಡುತ್ತಿದ್ದರೆ ಕುರಿಯ ಮಂದೆ ನೆನಪಿಗೆ ಬರುವಂತಿತ್ತು. ನೀರಿನ ರಭಸಕ್ಕೆ ಗುಡಿಸಲುಗಳಲ್ಲಿಯ ಪ್ಲಾಸ್ಟಿಕಿನ ಸಾಮಾನುಗಳೆಲ್ಲ ರಸ್ತೆಗೆ ಬರುತ್ತಿದ್ದಂತೆ ಶಂಕ್ರಯ್ಯ ಒಂದು ನಿರ್ಧಾರಕ್ಕೆ ಬಂದವನಂತೆ ಮೊಮ್ಮಗ ಸೋಮನನ್ನು ಹತ್ತಿರ ಕರೆದು ಮಗ ನೀನು ಕಾಳನ ಜೊತೆ ಸ್ಟ್ಯಾಂಡಿನಲ್ಲಿ ನಿಂತಿರು ನಾನು ನಿಮ್ಮ ಅಜ್ಜಿಯನ್ನು ಕರೆದುಕೊಂಡು ಬರುತ್ತೆನೆ ಅಂತ ಸೋಮನನ್ನು ಕಳುಹಿಸಿ ಆಮೇಲೆ ತಾನು ಗುಡಿಸಲಿನಲ್ಲಿ ಸೇರಿಕೊಂಡಬಿಟ್ಟ. ಶಂಕ್ರಯ್ಯ ತನ್ನ ಹೆಂಡತಿ ಎದುರಿಗೆ ನಿಂತುಕೊಂಡು ನೀಲು ಇದೇ ಗುಡಿಸಲಿನಲ್ಲಿ ನನ್ನ ಅಪ್ಪ, ಅವ್ವ ಸತ್ರು ಇದರ ಮುಂದೆನೆ ಮಗ ಸೊಸೆನು ಸತ್ರು ,ಮೊಮ್ಮಗನು ಇಲ್ಲೆ ಇದ್ದು ಸಾಯೊದು ಬೇಡ ಅಂತ ಹೋರಗೆ ಕಳಿಸಿದೆ ಕಣೆ ನೀನು ಕೋಪ ಮಾಡಿಕೊಳ್ಳಬೇಡ ಈ ಸಾವು ಅನ್ನೊದು ನಮಗೆ ಇದೇ ಗುಡಿಸಲಿನಲ್ಲಿ ಬರೆದಿದ್ದರೆ ಇಲ್ಲೆ ಸಾಯಣಾ ಅಂತ ಹೆಂಡತಿ ಕೈ ಹಿಡಿದರೆ ಎಲ್ಲಿಯ ಕೋಪ ಅವಳಾಗಲೆ ಚಳಿಗಾಳಿ ತಡೆಯಲಾರದೆ ಸಾವಿನ ಮನೆಯನ್ನು ಸೇರಿಯಾಗಿತ್ತು. ಶಂಕ್ರಯ್ಯ ಕಣ್ಣಿರು ಸಹ ಹಾಕಲಿಲ್ಲ ತಾನು ಇನ್ನೆನು ಸಾಯುವವನೆ ನನಗೆ ಎಂತಹ ಕಣ್ಣಿರು ಅನ್ನುವ ರೀತಿ ಇತ್ತು ಅವನ ಮುಖ .ನೀರು ಆಗಲೆ ನೀಲವ್ವನ ಅರ್ಧ ದೇಹವನ್ನು ಆವರಿಸಿಕೊಂಡಿತ್ತು ಶಂಕ್ರಯ್ಯ ಕೊನೆಯ ಬಾರಿಗೆ ಗುಡಿಸಲಿನಿಂದ ಹೊರಗೆ ಬಂದು ಬಸ್ಟ್ಯಾಂಡಿನತ್ತ ಕಣ್ಣಾಡಿಸಿದ ಅವನ ವಂಶದ ಕೊನೆಯ ಕುಡಿ ಮತ್ತು ಅವನ ಮುದ್ದಿನ ನಾಯಿ ಕಾಳ ಸುರಕ್ಷಿತವಾಗಿರುವುದನ್ನು ಕಂಡು ಒಳಗೆ ಹೋದವನು ಮತ್ತೆಂದು ಹೋರಗೆ ಬರಲೆ ಇಲ್ಲ .ಸೋಮನಿಗೆ ತನ್ನ ಗುಡಿಸಲು ಇಷ್ಟಿಷ್ಟೆ ನೀರಿನಲ್ಲಿ ಮುಳುಗುತ್ತಾ ಕಡೆಗೆ ನೀರು ಮಾತ್ರ ಕಾಣುವಂತಾಯಿತು, ಮಳೆ ಮಾತ್ರ ಇನ್ನೂ ನಿಂತಿಲ್ಲ. ಸೋಮ ತನ್ನ ಅಜ್ಜ,ಅಜ್ಜಿಯ ದಾರಿ ಇನ್ನೂ ಕಾಯುತ್ತಿದ್ದಾನೆ.

Wednesday, July 18, 2007

ಶಾಂತಿ ಸತ್ತಾಗ

ನಿನ್ನೆ ಶುರುವಾಗಿದ್ದ ಕಣ್ಣಿರು ಇನ್ನು ಆದರೂ ಮುಗಿದಿಲ್ಲ ಶಾಲೆ ಹೋಗೊಕೆ ಶುರು ಮಾಡಿ ಇನ್ನು ಎರಡು ತಿಂಗಳು ಸಹ ಆಗಿರರಲಿಲ್ಲ ಮಗಳು ಶಾಂತಿ ಐದು ವರ್ಷದ ಮುದ್ದು ಕಂದ ಇವತ್ತು ಜಗತ್ತಿನ ಯಾವುದೇ ಹಂಗಿಲ್ಲದೆ ಅವರ ಎದುರಿಗೆ ಹೆಣವಾಗಿ ಮಲಗಿದಾಳೆ ಅಮ್ಮನಿಗೆ ವಿಶ್ವಾಸ ಮಲಗಿದವಳು ಇನ್ನೇನು ಎದ್ದು ಕೂಡ್ತಾಳೆ ಅಂತ ,ಇದ್ದ ಒಬ್ಳೆ ಮಗಳನ್ನ ಕಳೆದುಕೊಂಡ ಸಂಕಟ ಮೂರ್ತಿಯ ಕಣ್ಣಲ್ಲೆ ಕಾಣತಿತ್ತು ಅಲ್ಲಿ ಅವರಿಬ್ಬರಿಗೆ ಸಮಾಧಾನ ಮಾಡೊಕೆ ಯಾರು ಇರಲಿಲ್ಲ ,
ಒಂದು ಪುಸ್ತಕ ಜಾಸ್ತಿ ಆದರೆ ಅಳುತ್ತಿದ್ದ ಕಂದ ಈಗ ಮೈಮೆಲೆ ಹೂವಿನ ರಾಶಿಯೆ ಇದೆ ಆದರೂ ಮಿಸುಗಾಡುತ್ತಿಲ್ಲ ಅವಳ ಮುಖದಲ್ಲಿ ಜಗತ್ತಿನ ಎಲ್ಲಾ ಪಾಪಗಳಿಂದ ಮುಕ್ತಿ ಹೊಂದಿದ ನಿರಾಳ ಭಾವ
ಮೊನ್ನೆ ಆಗಿದ್ದಾದರು ಏನು ಶಾಲೆಯ ಆಟದ ಸಮಯದಲ್ಲಿ ಶಾಂತಿ ತನ್ನ ಹಿರಿಯ ಗೆಳತಿ ಹತ್ತನೇ ಕ್ಲಾಸಿನ ಸಾವಿತ್ರಿ ಜೊತೆ ಆಡುವಾಗ ಸಾವಿತ್ರಿ ಅವಳನ್ನ ಶಾಲೆಯ ಎರಡನೇಯ ಅಂತಸ್ತಿನಲ್ಲಿರುವ ಕಟ್ಟೆಯ ಮೇಲೆ ಕೂಡ್ರಿಸಿ ಮುದ್ದು ಮಾಡೋವಾಗ ಯಾರೋ ಸಾವಿತ್ರಿ ಅಂತ ಕೂಗಿದಾಗ ತಿರುಗಿನೋಡೊಕೆ ಅಂತ ಆಸರೆ ಅಂತ ಹಿಡಿದಿದ್ದ ಕೈ ಬಿಟ್ಟಾಗ ಶಾಂತಿ ಹೈದಿನೈದು ಅಡಿಯಿಂದ ಕೆಳಗೆ ,,,,,,,,,,,, ಅಷ್ಟೇ ಅವಳಿಗೆ ಗೊತ್ತಾಗಿದ್ದು ತಿರುಗಿ ಅವಳಿಗೆ ಎಚ್ಚರವಾದಾಗ ತನ್ನ ಮನೆಯಲ್ಲಿ ಇದ್ಲು ಅವ್ವ ಬ್ಯಾಡ ಅಂದ್ರು ಶಾಂತಿ ಮನೆಗೆ ಹೊದ್ರೆ ಅಲ್ಲಿ ಶಾಂತಿ ಅಮ್ಮ ಮಗಳನ್ನ ಕೊಂದ ರಾಕ್ಷಸಿ ಅನ್ನೊ ರೀತಿಲಿ ನೋಡಿದ್ರೆ ಶಾಂತಿ ಅಪ್ಪ ನಿಂದೇನೂ ತಪ್ಪಿಲ್ಲ ಅಂತ ಸಮಾಧಾನ ಮಾತು ಹೇಳಿ ಸುಮ್ಮನಾದರು
ಮನೆ ಹೋರಗೆ ಶಾಲೆ ನಡೆಸುವ ದೊಡ್ಡ ಜನ ತಪ್ಪು ನಮ್ಮ ಕಡೆಯಿಂದನೇ ಆಗಿರೊದು ನಾವು ಅದಕ್ಕೆ ಶಾಂತಿ ಮನೆಯವರಿಗೆ ಒಂದು ಲಕ್ಷ ಕೊಡುವ ಭರವಸೆ ಪತ್ರಿಕೆಗೆ ನೀಡ್ತಾ ಇದ್ರು,ನಮ್ಮೂರಿನ ಕಾರ್ಪೋರೆಟ್ ರಾಜ್ಯದ ಶಿಕ್ಷಣ ಮಂತ್ರಿ ಎಲ್ಲಾ ಬಂದಿದ್ರು ಕಾರ್ಪೋರೆಟಗೆ ಪೆಪರನಲ್ಲಿ ಪೊಟೋ ಬರೊ ಸಂಭ್ರಮ ಇತ್ತ ಕಡೆ ಮಂತ್ರಿಗಳ ಇನ್ನು ಮೇಲೆ ಈ ತರಹದ ಘಟನೆಗಳು ನಡಿದಿರೊ ಹಾಗೆ ನೋಡಿಕೊಳ್ಳುತ್ತೆವೆ ಎಂಬ ಭರವಸೆ, ಇವರಿಗೆಲ್ಲಾ ಯಾವುದಾದರು ಸುರಕ್ಷಾ ಕೆಲಸ ವಾಗಬೇಕಾದರೆ ಅಲ್ಲಿ ಒಂದು ಹೆಣ ಬಿಳಲೆಬೇಕು,
ಅಲ್ಲಿ ಶಾಲೆಯ ಹತ್ತಿರ ನಮ್ಮೂರಿನ ಒಬ್ಬ ಮಾಜಿ ಅದಾಗಲೆ ಶಾಂತಿಯ ಆತ್ಮಕ್ಕೆ ಶಾಂತಿ ಕೊರಿ ಉಪವಾಸ ಕುಳಿತಿದ್ದ ಅವನು ಈಗೀಂದಲೇ ಮುಂದಿನ ಚುನಾವಣೆಗೆ ತಯ್ಯಾರಿ ನಡೆಸಿದವನ ತರಹ ಆಡ್ತಿದಾನೆ,
ಹೀಗೆ ಇಲ್ಲಿ ಹೊರಪ್ರಪಂಚದಲ್ಲಿ ಎಲ್ಲರೂ ನಾಟಕ ಆಡುವಾಗ ಅಲ್ಲಿ ಒಳಗೆ ಶಾಂತಿ ನೆಮ್ಮದಿಯಿಂದ ಮಲಗಿದ್ದಳು,
ಅಷ್ಟೋತ್ತಿಗೆ ಯಾರೋ ಕೂಗಿದ್ರು ಕೂಸಿನ ಹೆಣಾ ಎತ್ರೊ ವ್ಯಾಳೆ ಭಾಳ ಅಗೆದ ಅಂತ
ಕಾರ್ಪೋರೆಟರು ಶಿಕ್ಷಣಮಂತ್ರಿ ಎಲ್ಲಾ ಮುಗಿಸಿ ಕಾರಿನಲ್ಲಿ ಕುಳಿತಾಗ ಪೇಪರಿನವರು ಮತ್ತೆ ಯಾವಾಗಾ ಬರ್ತಿರಾ ಸಾರ್ ನಮ್ಮೂರಿಗೆ ಕೇಳಿದಾಗ ಬೇರೆ ಯಾರೋ ಉತ್ತರಿಸಿದ್ದರು
ಇನ್ನೊಂದ ಹೆಣಾ ಬಿದ್ದ ಮ್ಯಾಲೆ

Monday, July 16, 2007

ನಾನ ಕತೆ ಬರೆದ್ರೆ




ಕತಿ ಬರೆಬೇಕು ಅಂತ ಕೂತ್ರ ಬರೆ ಹೀಂಗ ಆಗತೆತಿ ಯಾರರ ಬಂದ ಇಲ್ಲದ ಸುದ್ದಿ ಹೇಳಿ ತಲಿ ತಿನ್ನತಿರ್ತಾರ,ಮೊನ್ನೆನು ಹೀಂಗ ಆತ ಹುಬ್ಬಳ್ಳಿಯಿಂದ ಬೆಂಗ್ಳೂರಿಗೆ ಬರಾಕತ್ತಿದ್ದೆ ರಾತ್ರಿ ಬಸ್ಸನ್ಯಾಗ ಕುಂತ್ರ ಏನರ ಹೋಳಿತೆತಿ ಯಾರು ಗುರ್ತೆನೆರೂ ಇರಂಗಿಲ್ಲಾಅಂತ ಆದ್ರ ಆಗಿದ್ದ ಬ್ಯಾರೆ, ಬಸ್ಸಿನ್ಯಾಂವ ಹೊಸಾ ಬಸ್ಟ್ಯಾಂಡನಿಂದ ಹಳೇಬಸ್ಟ್ಯಾಂಡ ಒಳಗ ಬಂದ ಅರ್ಧಾತಾಸ ಬೆಂಗ್ಳೂರ ಬೆಂಗ್ಳೂರ ಹುಚ್ಚ ಹಿಡ್ದೊರಂಗ ವದರಾಕ ಶುರು ಮಾಡಿದಾ ನಾಕ್ ನಾಕ ಮಂದಿ ಹತ್ತಿದ್ರು ಅಲ್ಲಿಂದ ಬಸ್ ಚೆನ್ನಮ್ಮಾಸರ್ಕಲ್ಲಿಗೆ ಒಂದ ರೌಂಡ ಹಾಕಿ ಬಂಕಾಪುರ ಚೌಕನ್ಯಾಗ ಮತ್ತ ನಿಂತು....... ಅಲ್ಲಿ ಒಂದ ಯಾಡ ಎಣ್ಣಿ ಗಿರಾಕಿ ಹತ್ತಿ ನನ್ನ ಮುಂದಿನ ಸೀಟಿಗೆ ಕುಂತ್ರ , ಮುಂದಿನ ಹತ್ತ ನಿಮಿಷಕ್ಕ ಲೈಟೆಲ್ಲಾ ಆರಿದ ಮ್ಯಾಲೆ ನಾ ಮತ್ತ ತಲ್ಯಾಗ ಕತಿ (ಕತೆ)ತುಂಬ್ಕೊಂಡ ಕುಂತ್ಯಾ ಒಂದ ಎಳಿ ಸಿಕ್ತು ಅದನ್ನ ಹೇಳ್ತಿನಿ ಈಗ.




ಸ್ವಪ್ನಾ ಮುಂಜಾನೆ ಮನೆಗೆ ರಂಗೋಲಿ ಹಾಕೋವಾಗ ದುತ್ತಂತ ಪ್ರತ್ಯಕ್ಷವಾಗ್ತಾನೆ ಯಾರೋ ಎನೋ, ಬೀದಿಲಿ ಯಾರಾದ್ರು ಸಂಶಯ ಬಂದು ಕೇಳಿದ್ರೆ ಹೇಳೊಕೆ ಹಾಕಿಕೊಂಡಿರುವ ಜಾಗಿಂಗ ಡ್ರೆಸ್ ಇದೆ ಆಮೇಲೆ ಯಾರೂ ಕೇಳೊದು ಇಲಾ ಬಿಡಿ ಇತ್ತಿಚಿಗೆ ಮನೆ ಬೀದಿ ಯಾವ್ಯ್ದು ಮಾರ್ಕೆಟ ಬೀದಿ ಯಾವುದು ಅಂತ ಹೇಳೊಕೆ ಆಗದೆ ಇರೋ ಅಷ್ಟು ನಮ್ಮ ಬೆಂಗಳೂರು ಬೆಳೆದಿದೆ, ಅವನಿಗೆ ಬಯ್ದು ಕಳಿಸೋಕು ಮನಸ್ಸಿಲ ಇವಳಿಗೆ ಅಷ್ಟೊಂದು ಚೆಂದವಾಗಿದಾನೆ ಹೀಗೆ ಸುಮಾರು ದಿನ ನಡೆಯಿತು ಅವನು ಬಂದು ನಿಲ್ಲುತ್ತಿದ್ದನೆ ವಿನಹ ಯಾವತ್ತು ಮಾತನಾಡಿಸುವ ಧೈರ್ಯ ಮಾಡಿರಲಿಲ್ಲ ಇವಳೆ ಆ ಕೆಲಸ ಮಾಡೊ ನಿರ್ಧಾರ ತೆಗೆದುಕೊಂಡು ಮಾರನೆ ದಿನ ಕೇಳೇ ಬಿಟ್ಲು ಏನಾದ್ರೂ ಹೇಳಬೇಕಾ??? ಈ ಬೆಪ್ಪ ಎನಿಲ್ಲಾ ನೀವು ರಂಗೋಲೆ ಚೆನ್ನಾಗಿ ಬಿಡಿಸುತ್ತಿರಾ ಅದಕ್ಕೆ ಸುಮ್ಮನೆ........................................




ಅಷ್ಟೊತ್ತಿಗೆ ಬಸ್ಸು ರಾಣೆಬೆನ್ನೂರ ಮುಟ್ಟಿತ್ತು ಕಂಡಕ್ಟರ ಮತ್ತ ಒದರಾಕ ಶುರು ಮಾಡಿದ್ದಕ್ಕ ನನ್ನ ಕತಿ ಅರ್ಧಕ್ಕ ನಿಂತು, ಕತಿ ಮುಂದವರಸೊದ ಹೆಂಗ ಅಂತ ವಿಚಾರ ಮಾಡೊವಾಗ ಚಳಗೆರಿ ಹತ್ರ ಆಗಿತ್ತ ಡ್ರೈವರ್ ಬ್ರಿಜ್ ಮ್ಯಾಲಿಂದ ಹೋಗುದು ಅಂತ ಇಲ್ಲಾ ಕೆಳಗನಿಂದ ಅಂತ ಚಳ್ಗೇರಿ್ ಕ್ರಾಸ್ ಇಳ್ಯಾಂವ ಜಿದ್ದ ಕಡಿಗೆ ದ್ರೈವರನ ಬ್ರಿಜ್ ಕೆಳಗ ಒಯ್ದ ನಿಲ್ಲಿಸಿದಾ ಇಳಿಯಂವಾ ಇಳದ ಅಲ್ಲಿಂದ ಇನ್ನೊಬ್ಬ ಹತ್ತ್ಕೊಂಡ ಬಸ್ ಮುಂದ ಹೊಂಟಿತ್ತು ಅಷ್ಟ್ರಾಗ ಹಿಂದ ಕೂಂತವ್ರ ಚಾಲು ಮಾಡಿದ್ರ ಬೇಕಂತ ಮಾಡ್ತಾರ್ರಿ ಟೈಮ್ ಸೆನ್ಸ್ ಇಲ್ಲ ಮಂದಿಗೆ ಇಷ್ಟ ಹೇಳಿದ್ದ ತಡ ಚಳ್ಗೇರಿ ಕ್ರಾಸ್ ನಿಂದ ಹತ್ತಿದ್ದ ಮನಷ್ಯಾ ಜಮದಗ್ನಿ ಅವತಾರಾ ತಾಳೇ ಬಿಟ್ಟ ಹೇಂಗ ಅಂತೀರಿ ಸಾಯೇಬ್ರ ಅಲ್ಲಿ ಸ್ಟಾಪ್ ಐತಿ ಅಂತ ನಿಂತಾನ ಇಲ್ಲಾಂದ್ರ ನಾನರ ಯಾಕ ಅಲ್ಲಿ ರಾತ್ರಿ ಹೊತ್ತನ್ಯಾಗ ಬಸ್ಸಿಗೆ ಕಾಯ್ಕೊಂತ ನಿಂದ್ರತಿದ್ದೆ ಮಾತ್ಡಾತಿರಿ ಹಂಗ ಇದ ಶಾಂತ ಆತು ಅನ್ನೊವಾಗ ಇನ್ನೊಬ್ಬ ಶುರು ಮಾಡಿದಾ ಇಂವಾ ಇಷ್ಟ ಮೆಲ್ಲಗ ಹೊದ್ರ ನಾವ್ ಬೆಂಗ್ಳೂರ ಮುಟ್ಟಿದಂಗ ಆತು,,,,,,,ಅದಕ್ಕ ಒಂದ ನಾಕ ದನಿ ಸೇರಿದ್ವು ಇದು ಮುಗ್ಯಾಕ ಬಂತು ಅನ್ನೊ ಹೊತ್ತ್ನ್ಯಾಗ ಮುಂದ ಡ್ರೈವರ್ ಬಾಜು ಒಂದ ಜಗಳ ಶುರು ಅವ್ರ ಎದಕ್ಕ ಹೊಡ್ದಾಕನೊತಾರ ಅಂತ ಯಾರಿಗೂ ಬ್ಂಗ್ಳೂರ ಮಟ್ಟೊಮಟ ತಿಳಿಲೆ ಇಲ್ಲಾ


ಒಬ್ಬಂವಾ ಸಾಕ ಸುಮ್ಮನಾಗ ಅನ್ನೊಂವಾ ಇನ್ನೊಬ್ಬಾಂವ ಬಾ ತೊರಸ ಬಾಲೇ ಮಗನ ಅನ್ನೊಂವಾ ತಲಿ ಅನ್ನೊದು ಏನ ಕೇಳ್ತಿರಿ


ಅಷ್ಟೊತ್ತಿಗೆ ನನ್ನ ಕತಿ (ಕತೆ) ಅತ್ಮಹತ್ಯ ಮಾಡ್ಕೊಂಡಿತ್ತ ಅದಕ ನಮ್ಮ್ ಲೇಖಕರು ಹೇಳೊದು ಕಥೇ ಎಲ್ಲರಿಗೂ ಸಿದ್ದಿಸುವುದಿಲ್ಲ ಅಂತ, ಮುಂದಿನ ಸಾರಿನರ ಪೂರ್ತಿ ಕತಿ ಬರಿಯೊ ಪ್ರಯತ್ನ ಮಾಡ್ತೆನಿ


Sunday, July 15, 2007

ಆಸೆ ನೂರು ಆಸೆ


ನಮಗೆ ಹುಟ್ಟಿನಿಂದ ಬಂದ ಬಳುವಳಿ ಇದೊಂದೆ ಆಟಿಕೆಯಿಂದ ಶುರುವಾಗಿ ಎಲ್ಲಿಗೆ ಮುಟ್ಟುತ್ತೆ ಅಂತ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲಾ.

ಕಂದನಿಗೆ ದೊಡ್ಡವರ ತರಹ ನಡೆಯಬೇಕೆಂಬ ಆಸೆಯಿಂದ ಮತ್ತೆ ಮತ್ತೆ ಬೀಳುತ್ತಿರುತ್ತದೆ, ಸೈಕಲ್ ನಡೆಸುವವನಿಗೆ ಬೈಕ್ ಓಡಿಸುವ ಆಸೆ, ತಂದೆ ತಾಯಿಗೆ ತಮ್ಮ ಮಗನನ್ನ ಹೇಗೆ ಬೆಳೆಸಿದಿವಿ ಅಂತ ಜನ ಮಾತಾಡ್ಲಿ ಅನ್ನೊ ಆಸೆ,ಅವನಿಗೆ ತನ್ನವಳೊಂದಿಗೆ ಇವತ್ತಾದರೂ ಬಾಲ್ಕನಿಯಲ್ಲಿ ಕುಂತು ಸಿನಿಮಾ ನೋಡೊ ಆಸೆ, ಭಿಕ್ಷುಕನಿಗೆ ಆವತ್ತಿನ ಊಟದ ಆಸೆಯಾದ್ರೆ ಒಬ್ಬ ಮಧ್ಯಮ ವರ್ಗಿಗೆ ಈ ಸಂಬಳಕ್ಕಾದರೋ ಹೆಂಡತಿನಾ ಹೋಟೆಲಿಗೆ ಕರೆದೊಯ್ಯುವ ಆಸೆ, ಹೆಂಡತಿಗೆ ಗಂಡ ಇನ್ನೊಂದು ಚಿನ್ನದ ಸರ ಕೊಡಿಸಲಿ ಅನ್ನೊ ಆಸೆ.

ಸಿರಿವಂತನಿಗೆ ತನ್ನ ಸಂಪತ್ತು ಇನ್ನೂ ಬೆಳಿಬೇಕು ಅಂತ ಆಸೆಯಾದ್ರೆ,ಸೋತ ನಿರ್ಮಾಪಕನಿಗೆ ಈ ಚಿತ್ರ ಗೆದ್ದರೆ ಹಳೇ ಸಾಲ ತೀರಿಸುತ್ತೆನೆ ಎನ್ನುವ ದೂರದ ಆಸೆ ವಿದೇಶಿ ವ್ಯಾಮೋಹಿ(ಕ್ಷಣಿಕ)ಗಳಿಗೆ ತಾಯ್ನೆಲಕ್ಕೆ ಯಾವಾಗ ವಾಪಸಾಗುತ್ತೆವೆ ಎಂಬ ನಿರಿಕ್ಷೆಭರಿತ ಆಸೆ,

ಯಾವುದೇ ಕಾರಣದಿಂದ ಜೈಲು ಸೇರಿದ ಖೈದಿಗೆ ಯಾವಾಗ ಇಲ್ಲಿಂದ ಮುಕ್ತಿ ಎಂಬ ಕ್ಷಿಣಾತಿಕ್ಷೀಣ ಆಸೆ, ಇಷ್ಟೆಲ್ಲಾ ಆದ ಮೇಲೆ ನನಗೆ ನೆಮ್ಮದಿ ಬೇಕು ಶಾಂತಿ ಬೇಕು ಅನ್ನೊರಿಗೆ ಎನನ್ನೊದು???????

ಮನಸಿನ್ಯಾಗೊಂದು ಮನಸ್ಸು: ನೆನಪುಗಳ ಜಾತ್ರೆ

ಮನಸಿನ್ಯಾಗೊಂದು ಮನಸ್ಸು: ನೆನಪುಗಳ ಜಾತ್ರೆ

Friday, July 13, 2007

ನೆನಪುಗಳ ಜಾತ್ರೆ


ಈ ನೆನನಪುಗಳು ಮನುಷ್ಯನ ಎನರ್ಜಿಕ ಟಾನಿಕ್ಕು ಹೌದು ಮನಸಿನ ನೆಮ್ಮದಿ ಕದಡುವ ನಶೆಯು ಹೌದು.

ನಿತ್ಯ ಬದುಕಿನ ಜಂಜಾಟದಲ್ಲಿ ಕಳೆದು ಹೋಗುವ ನಮಗೆ ನೆನಪೆ ಅಲ್ಟಿಮೆಟ್ ಜೊತೆಗಾರ ನೆನಪುಗಳು ಇಲ್ಲದ ಮನುಷ್ಯ? ಕಲ್ಪನೆಗೂ ಸಾಧ್ಯವಿಲ್ಲಾ, ಅದಕ್ಕೆ ಇರಬೇಕು ನಮ್ಮ ಕವಿಗಳು ನಮಗೆ ನೆನಪಿನ ಗೀತೆಗಳ ಸರಮಾಲೆಯನ್ನೆ ನಿಡಿದ್ದಾರೆ.


ಅಮ್ಮನಿಗೆ ತನ್ನ ಕಂದಮೊದ್ಮೊದಲು ತೊದಲುತೊದಲಾಗಿ ಅಮ್ಮ ಅಂದದ್ದು ,ಅಂಬೆಗಾಲಿಟ್ಟು ಮನೆಯ ಹೊಸ್ತಿಲು ದಾಟಿದ್ದು, ಅವನಿಗೆ ಬಾನಂಗಳದ ಚಂದಿರನ ತೋರಿಸಿ ಕೈತುತ್ತು ತಿನ್ನಿಸಿದ್ದು, ಬಾಲವಾಡಿಗೆ ಹೋಗುವ ಮೊದಲ ದಿನ ಗಳಗಳನೆ ಅತ್ತದ್ದು ಒಂದಾ ಎರಡಾ..........


ಇವನಿಗೆ ಮೊದಲು ಸೈಕಲ್ ಕಲಿಯುವಾಗ ಆದ ಮಂಡಿಗಾಯ, ಅಪ್ಪನ ಧರ್ಮದೇಟು , ಪಕ್ಕದ ಮನೆಯ ಹುಡುಗನೊಂದಿಗೆ ಬುಗುರಿಗಾದ ಜಗಳ, ಮೊದಲು ಅವರ ಮನೆಗೇ ಬಣ್ಣದ ಟಿವಿ ಬಂದಾಗ ಅವನೊಂದಿಗೆ ಬೆಳೆಸಿದ ಗೆಳೆತನ, ಮೊದಲ ದಿನ ಹೈಸ್ಕೂಲಿಗೆ ಹೋದಾಗ ಆದ್ ಕಸಿವಿಸಿ ಅರ್ಥವೇ ತಿಳಿಯತಿದ್ದ ಮ್ಯಾಥ್ಸು,ಖೋ ಖೋ ಆಟದಲ್ಲಿ ಯಾವಾಗಲು ಬರುತ್ತಿದ್ದ ಫಸ್ಟ್ ಪ್ರೈಜು(ಆವಾಗ ಕ್ರಿಕೆಟ್ಟು ಎಲ್ಲಿತ್ತು),ಕನ್ನಡ ಮೇಷ್ಟ್ರ ಅದ್ಭುತ ವ್ಯಾಕರಣ,ಮುಂದಿನ ಬೆಂಚಿನ ಹುಡುಗಿಯ ಜಡೆ ಜಗ್ಗಿದ್ದಕ್ಕೆ ಬಿದ್ದ ಇಂಗ್ಲಿಷ ಸರ್ ವದೆಗಳು.


ಮುಂದೆ ಹೈಸ್ಕೂಲ ಮುಗಿಸಿ ಕಾಲೇಜಿಗೆ ಯುನಿಪಾರ್ಮ ಇಲ್ಲದೆನೆ ಹೋಗಬಹುದಲ್ಲ ಅನ್ನೊ ಸಂತೋಷ ಒಂದು ಕಡೆಯಾದರೆ ragging ಮಾಡ್ತಾರಾ ಅನ್ನೊ ಭಯ ಒಂದು ಕಡೆ, ಸ್ವಲ್ಪೆ ದಿನಗಳಲ್ಲಿ ನಾವೇ ಮತ್ತೊಬ್ಬರಿಗೆ ಹಿರಿಯರು ಹಾಕಿಕೊಟ್ಟ ದಾರಿ ಅಂತ ಅದೇ ragging ಮಾಡಿದ್ದು ,ಮೊಟ್ಟಮೊದಲು ಸಿಗರೇಟಿಗೆ ಮುತ್ತಿಟ್ಟಿದ್ದು, ಇದೆಲ್ಲ ಒಂದು ಕಡೆಯಾದರೆ ಅವಳ ನೆನಪು ಇದೆಯಲ್ಲಾ ಅದನ್ನ ಹ್ಯಾಗೆ


ಅವಳನ್ನು ಮೊದಲ ಸಾರಿ ನೋಡಿದಾಗಿನ ಪುಳುಕ, ಅವಳ ಕೈಗಿತ್ತ ಮೊದಲ ಪ್ರೇಮಪತ್ರ, ಅವಳಿಂದ ದೊರೆತ ಒಪ್ಪಿಗೆ ಕಾಲೇಜಿನ ಗುಲಾಬಿ ತೋಟದಲ್ಲಿ ಎರಡೆ ಸೀಟುಗಳ ಬೆಂಚಿನಲ್ಲಿ ಕುಳಿತಾಗ ಅವಳು ಮೊದಲು ಮುತ್ತಿಟ್ಟು ಎದೆಯಲ್ಲಿ ಗುಬ್ಬಚ್ಚಿಯ ಹಾಗೆ ಮುಖ ಹುದುಗಿಸಿದಾಗ ಆದ ರೋಮಾಂಚನ, ಅದಕ್ಕೆ ಸಾಕ್ಷಿಯಾದ ಸಂಪಿಗೆ ಗಿಡದ ಕಂಪು, ಅವಳು ಕಾರಣ ಕೊಡದೆನೇ ಕೈಕೊಡವಿಕೊಂಡು ಎದ್ದು ಹೋದದ್ದು ,ಇದೆಲ್ಲದರ ಫಲಿತಾಂಶವೆಂಬಂತೆ ಆ ವರ್ಷದ ಎಲ್ಲಾ ವಿಷಯದಲ್ಲೂ ಫೇಲಾದದ್ದು, ಎಲ್ಲಾ ಕೊಡವಿಕೊಂಡು ಹೊಸ ಕನಸು ಅರಸಿ ಮೊದಲ ಕೆಲಸಕ್ಕೆ ಸೇರಿದ್ದು.

ನೆನಪುಗಳು ನಿರಂತರ


Thursday, July 12, 2007

ನಾ ಓದಿದ ಜೋಗಿ ಕಥೆಗಳು




ನಿನ್ನೆ ಜೋಗಿಯವರ ಹೊಸ ಪುಸ್ತಕ <ಜೋಗಿಯ ಕಥೆಗಳು> ಓದುತ್ತಿರುವಂತೆ ಅನ್ನಿಸಿದ್ದು ಅಕ್ಷರಗಳಲ್ಲಿ,


ಸುಬ್ಬಣ್ಣ-;ಹತಾಶೆ ಅಹಂಕಾರ ಅವ್ಯಕ್ತ ಭಯ ಹೊಟ್ಟೆಕಿಚ್ಚು ನಮ್ಮೆಲ್ಲರಲ್ಲೂ ಇವೆ ಅದನ್ನ ಜೋಗಿಯವರು ಸುಬ್ಬಣ್ಣನ ಮೂಲಕ?


ಇಲ್ಲಿ ಭೀಮಸೇನಜೋಶಿಯವರು ಒಮ್ಮೆ ಅಭಿಮಾನವಾದರೆ ಮತ್ತೊಮ್ಮೆ ಹೊಟ್ಟೆಕಿಚ್ಚಿನ ಹರದಾರಿಯಾಗುತ್ತಾರೆ ಸುಬ್ಬಣ್ಣಹುಚ್ಚುಖೋಡಿಮನಸುಗಳಿಗೆ ಹಿಡಿದ ಕೈಗನ್ನಡಿಯಾ?




ಗೋವಿಂದ ವಿಠಲ ಹರಿ ಹರಿ-; ದೇವರು ನಂಬಿಕೆ ಮನುಷ್ಯ ಮತ್ತು ಪ್ರೀತಿ , ಜೋಗಿಯವರು ಇಲ್ಲಿ ಇದನ್ನು ಅದ್ಭುತವಾಗಿ ಸಮ್ಮಿಲನಗೊಳಿಸಿದ್ದಾರೆ ನನಗನ್ನಿಸಿದ್ದು ಇಲ್ಲಿ ಮನುಷ್ಯ ದೇವರನ್ನು ಒಂದು ಕೆಲಸದಲ್ಲಿ ಕಂಡುಕೊಳ್ಳುವ ಪ್ರಯತ್ನವಾ .


ದೇವರು ಪ್ರೀತಿ ಇಲ್ಲವೆಂದ ಜೋಶಿಯವರು ಕರ್ತವ್ಯದ ನೆಪದಲ್ಲಿ ಎರಡನ್ನು ಒಂದೇ ಗುಕ್ಕಿನಲ್ಲಿ ಒಪ್ಪಿಕೊಳ್ಳುತ್ತಾರೆ ಜೋಗಿಯವರಿಗೆ ಸಲಾಂ




ವಿಶ್ವಸುಂದರಿ-; ಮನಸಿನ ಭಾವನೆಗಳೊಂದಿಗೆ ಜೋಗಿ ಸರ್ ಲೀಖನಿ ಅದ್ಭುತವಾಗಿ ಮಾತನಾಡಿದೆ.




ಇನ್ನೊಬ್ಬ-; ಊಹೂಂ ಇದು ನನ್ನ ಯೋಚನಾಲಹರಿಗೆ ನಿಲುಕದ್ದು, ಸಂಬಂಧಗಳ ಗಾಢತೆಯಾ? ಸ್ನೇಹಲೋಕದ ನಿಗೂಢತೆಯಾ?


ತನ್ನನ್ನೆ ತಾನು ಕಂಡುಕೊಳ್ಳುವ ವಿಚಿತ್ರ ಯತ್ನವಾ ಜೋಗಿ ಸರ್ ದಯವಿಟ್ಟು ಪರಿಹರಿಸಿ.




ಕನ್ನಡಿಯೊಳಗೆ ಗಳಗನಾಥರಿಲ್ಲ-; ಹಾಗಿದ್ದರೆ(ನನಗಷ್ಟೆ ಬದುಕಿದ್ದು ಇನ್ನೊಬ್ಬರ ಪಾಲಿಗೆ ಸತ್ತಂತಿದ್ದರೆ ನಾನು ನನಗೆ ಮಾತ್ರ ಕಾಣಿಸುತ್ತೆನಾ) ಗಮನವಿಟ್ಟು ಓದದಿದ್ದರೆ ಎಂದಿಗೂ ಅರ್ಥವಾಗದ ಮಾತು ಅನ್ನಿಸುತ್ತೆ, ಮನುಷ್ಯನ ಸ್ವಾರ್ಥಕ್ಕೆ ಕೊಡಬಹುದಾದ ಅತ್ಯುತ್ತಮ ಉದಾಹರಣೆ


ಭ್ರಮಾಲೋಕದಲ್ಲಿ ವಿಹರಿಸುವಾಗಲೆ ವಾಸ್ತವತೆಯೆಡೆಗೆ ಬದುಕು ಒದ್ದೊಡಿಸುವುದು ಅಂದ್ರೆ ಇದೇನಾ...... ನಮ್ಮ ಕಿಂದರಿಜೋಗಿಯ ಜೋಳಿಗೆಯಲ್ಲಿ ಇನ್ನು ಎನೇನು ಅಡಗಿದೆಯೊ

ಶಾಪಿಂಗ


ಒಂದು ಕಾಲ ಇತ್ತು ಹಬ್ಬ ಬಂದ್ರೆ ಬಟ್ಟೆ, ತಿಂಗಳಿಗೆ ಒಂದು ಸಾರಿ ಮನೆಗೆ ಕಿರಾಣಿ ಬರತಿತ್ತು, ಅದಕ್ಕಾಗಿ ನಮ್ಮೂರಿನ ಗುರುವಾರದ ಸಂತೆಗೊ ಅಥವಾ ಹುಬ್ಬಳ್ಳಿಯ ಶನಿವಾರದ ಸಂತೆಗೊ ಹೋಗುತ್ತಿದ್ದ ನೆನಪು, ಅಲ್ಲಿ ಮಾರವಾಡಿಯ ಅಂಗಡಿಯಲ್ಲಿ ಅಜ್ಜನಿಗೆ ಚಹಾ ನಮಗೆ ನಿಂಬಿಹುಳಿ ಪೆಪ್ಪರಮೆಂಟ್ ಎಲ್ಲಾ ಸಿಗೊದು ನಾವು ಬೇರೆ ಅಂಗಡಿಗೆ ಹೋಗಬಾರ್ದು ಅಂತ !!!, ನಾವು ಕೂಡ ಅಲ್ಲೆ ಐವತ್ತು ರೂಪಾಯಿ ಹೇಳಿದ ಬಟ್ಟೆ ಚೌಕಾಸಿ ಮಾಡಿ ಮೂವತ್ತು ರೂಪಾಯಿಗೆ ತಂದ್ವಿ ಅನ್ನೊ ಸುಳ್ಳೆ ಶ್ಯಾಣೆತನ , ತಿಂಗಳಿಗೆ ಒಂದು ಸಾರಿ ಸಿಗುತ್ತಿದ್ದ ಕಾಮತ್ ಹೋಟೆಲ್ ಮಸಾಲಾದೋಸೆಯ ಸೌಭಾಗ್ಯ ಎದುರಿಗೆ ಈದ್ಗಾಮೈದಾನದಲ್ಲಿ ದೊಂಬರಾಟದವರ ತರೆವಾರಿ ಕಸರತ್ತುಗಳು ನೋಡೊ ಸಂಭ್ರಮ…… ಇನ್ನು ಟೈಮು ಸಿಕ್ಕರೆ ಅಜ್ಜ ನಮ್ಮನ್ನ ಬಸ್ಟ್ಯಾಂಡ ಪಕ್ಕದಲ್ಲಿ ಇರೊ ಸುಜಾತಾ ಟಾಕಿಜಿನಲ್ಲಿ ಯಾವದಾದ್ರು ಅಣ್ಣಾವ್ರ ಸಿನಿಮಾಕ್ಕೆ ಕರೆದೊಯ್ಯುತ್ತಿದ್ದ ನೆನಪು, ಇಂತಹ ಸಂಭ್ರಮಗಳ ಸರಮಾಲೆಗೆ ಖರ್ಚಾಗುತ್ತಿದಾದ್ದು ಐನುರು ಆಗತಿರಲಿಲ್ಲ.
ಆದ್ರೆ ಈಗ ಸಂಡೇ ಬಂದ್ರೆ ಶಾಪಿಂಗ್ ಮಾಲು ಅಲ್ಲಿ ಎನಿಲ್ಲ ಹೇಳಿ, ಸಾಲು ಸಾಲು ಝಘ ಮಘಿಸುವ ಸಾಲಂಗಡಿಗಳು ಎಲ್ಲಕ್ಕಿಂತ ಮೊದಲು ದ್ವಾರಬಾಗಿಲಿನಲ್ಲಿ ನಾವು ಚಿಕ್ಕವರಿದ್ದಾಗ ನೋಡುತ್ತಿದ್ದ ದೊಂಬರಾಟದ ಹೊಸ ರೂಪ, ಆಗ ಅವರು ಹೊಟ್ಟೆಹೊರೆಯೊಕೆ ಅಂತ ಬಿದಿಬದಿಲಿ ದೊಂಬರಾಟ ಆಡ್ತಿದ್ರು ಈಗ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಜಾಹಿರಾತಿನ ಪ್ರಚಾರಕ್ಕೆ ಶಾಪಿಂಗ ಬರುವ ಜನಗಳಿಂದ ಅದನ್ನ ಮಾಡಿಸುತ್ತವೆ, ಇನ್ನು ಒಳ್ಗಡೆ ಎನಾದ್ರು ಖರೀದಿಸಿ ಚೌಕಾಸಿ ಮಾಡೊಣ ಅಂದ್ರೆ ಪಕ್ಕದಲ್ಲಿ ಇರೊರು ನಮ್ಮನ್ನ ಆದಿಮಾನವರ ತರಹ ನೋಡೊದ್ರಲ್ಲಿ ಸಂದೇಹ ಬೇಡ ನಮ್ಮ ಮಾರವಾಡಿ ಅಂಗಡಿಲಿ ಇದೆ ಬಟ್ಟೆ ನೂರಕ್ಕೆ ಸಿಗತಿತ್ತು ಇಲ್ಲಿ ಅದಕ್ಕಿಂತ ಹತ್ತು ಪಟ್ಟ ಜಾಸ್ತಿ ಕೊಟ್ಟು ತೊಗಂಡ ಹೋಗಲೆಬೇಕು ಇಲ್ಲದಿದ್ರೆ ಪಕ್ಕದ ಮನೆಯವರಿಂದ ಶಾಪಿಂಗ್ ಹೋಗಿ ಹಾಗೆ ಬಂದ್ರು ಅನ್ನೊ ಅವಹೆಳನಕಾರಿ ಮಾತು ಮತ್ತು ಜೊತೆಗೆ ಬಂದಿರೊ ಜನಕ್ಕೆ ಎಂತದೊ ಕಸಿವಿಸಿ.
ಇನ್ನು ಹಸಿವೆಯಾಗಿ ಎನಾದ್ರೂ ಹೋಟಲ್ ಹುಡುಕಿದ್ರೆ ಅದು ನಮಗೆ ಸಿಗಲ್ಲ, ಅಲ್ಲೆನಿದ್ರು ಫಾಸ್ಟಫುಡ್ಡಗಳು ಅಲ್ಲಿ ನಮ್ಮ ದೋಸೆ ಕನಸು ಮಾತ್ರ ಅಲ್ಲೆನಿದ್ರು ಪಿಜ್ಜಾ, ಬರ್ಗರ್ ಕೆಂಟುಕಿ ಚಿಕನ್ನ ಅದು ಮಾಡಿದವರಿಗೆ ಪ್ರೀತಿ.
ಇದೆಲ್ಲಾ ಮುಗಿಸಿ ಹೋರ ಬರೊಣ್ ಅಂದ್ರೆ ಮೇಲೆ ಪಿ ವಿ ಅರ್ ಸಿನಿಮಾ ಕೈಬಿಸೆ ಕರಿತಾ ಇರುತ್ತೆ ಟಿಕೆಟ ದರ ಕೆವಲ ಐನೂರು (ಇನ್ನೂ ಊರಲ್ಲಿ ಆ ದುಡ್ಡಿಂದ ಒಂದು ಮಿಡ್ಲಕ್ಲಾಸ ಸಂಸಾರ ತಿಂಗಳಿಗೆ ಆಗೋ ಕಿರಾಣಿ ಕೊಂಡಕೊಬಹುದು ಆ ಮಾತು ಬೇರೆ)ನಾನ ಟೀಕೆಟ ತೆಗಿಯಲ್ಲಾ ಅಂದ್ರೆ ನಮ್ಮ ಜೋತೆ ಬಂದಿರೊಳು ತೆಗಿತಾಳೆ!! ಇದಕ್ಕಿಂತ ಬೇರೆ ಅವಮಾನ ಉಂಟಾ.
ಈಗ ಹೇಳಿ ಯಾವುದು ಚೆನ್ನ ಅಂತ ……..
ಆಗ ಐನೂರಲ್ಲಿ ಒಂದು ತಿಂಗಳ ಮನೆ ಸಾಮಾನು, ಸಿನಿಮಾ , ಕಾಮತ್ ಮಸಾಲೆ ದೋಸೆ ಎಲ್ಲಾ ಮುಗಿತಿತ್ತು
ಈಗ ಒಂದು ತಿಂಗಳ ಸಂಬಳನಾ ಶಾಪಿಂಗ ಮಾಲ್ ಗಳು ಒಂದೇ ಒಂದು ಸಂಜೆಗೆ ಹೀರಿ ಬಿಡುತ್ತವೆ!!


ಮನದಂಗಳದಲಿ ಮಳೆಹನಿ....................


ಸುರಿಯುವ ಸೋನೆಯಲಿ ನೆನೆದೆ ನಿನ್ನಂದ

ಹೇಳಲಿ ನ ಹೇಗೆ ನನ್ನ ಮನದಳದ ಮಾತಿಂದ

ಆದರು ಕೇಳು ಒಲವೆ ನಿನ್ನ ನೆನಪಿನಿಂದ ಆದ್ ಬೆರಗೊಂದ


ಆ ಸೋನೆಯಲಿ ಜೊತೆಯಾದೆ ನೀ

ಆ ಸಂಜೆ ಸುರಿದ ಮಳೆಗೆ ಸ್ವಾತಿಯ ಮುತ್ತಾದೆ ನೀ

ಆರ್ಭಟಿಸಿದ ಸಿಡಿಲಿಗೆ ಹರಿಣಿಯಾದೆ ನೀ

ಕಣ್ಣಕೊರೈಸುವ ಮಿಂಚಿಗೆ ನನ್ನೆದೆಗೂಡಿನ ಗುಬ್ಬಚ್ಚಿಯಾದೆ ನೀ


ಅಂದು ನೀ ನುಡಿದೆದ್ದೆ ನೀ ನನ್ನವಳೆಂದು

ನಾ ನಿನ್ನವನೆಂದು

ಲೋಕದ ಹಂಗಿನ್ಯಾಕೆಂದು

ಅಂದು ಸುರಿದ ಸೋನೆಗೆ ಶಪಿಸುವೆ ನಾನಿಂದು

ಹೇಳು ಇಂದು ಬಂದ ಸೋನೆಗೆ ಹೇಗೆ ಹೇಳಲಿ ನಿನೆಲ್ಲೆಂದು


ನಾನಿನ್ನು ಹುಡುಕುತಲಿರುವೆ

ನೀ ಮಳೆಯಲಿ ನಡೆದು ಬಂದ ಹೆಜ್ಜೆಯ ಗುರುತ

ಕೈ ಬಳೆಯ ನಾದವ

ನೀ ಮುಡಿದ ಮಲ್ಲಿಗೆಯ ಘಮ ಘಮವ

ಮತ್ತೊಮ್ಮೆ ಬರಲಾರೆಯಾ ಒಲವೆ ನನ್ನ

ಮನದಂಗಳಕೆ ಸೋನೆ ನಂತರದ ತಂಗಾಳಿಯ ಹಾಗೆ


ಸುರಿಯುವ ಸೋನೆಯಲಿ ನೆನೆದೆ ನಿನ್ನಂದ
ಹೇಳಲಿ ನ ಹೇಗೆ ನನ್ನ ಮನದಳದ ಮಾತಿಂದ
ಆದರು ಕೇಳು ಒಲವೆ ನಿನ್ನ ನೆನಪಿನಿಂದ ಆದ್ ಬೆರಗೊಂದ


ಮಹೆಶ ಎಸ್ ಎಲ್

Wednesday, July 11, 2007

ಪ್ರಕಾಶ ಶೆಟ್ಟರ ಕುಂಚದಲ್ಲಿ ನಾ

ಮೊನ್ನೆ ಭಾನುವಾರ ಪೋರಂ ಎಂಬ ಮಾಯಾಲೋಕಕ್ಕೆ( ಜೇಬು ಕತ್ತರಿಸುವ) ಹೋದಾಗ ನಮ್ಮ ಚಿತ್ರಕಾರ ಪ್ರಕಾಶ ಶೆಟ್ಟಿಯವರ ಕುಂಚದಲ್ಲಿ ನಾ ಕಂಡದ್ದು, ಬಿಡುವಿಲ್ಲದ ಬೆಂಗಳೂರು ಅದರ ಜೊತೆ ಹ್ಯಾಂವಕ್ಕೆ ಬಿದ್ದಿರೊ ನಾವು, ಇವುಗಳ ನಡುವೆ ಸಿಗುವ ಇಂತಹ ಎಷ್ಟೊ ಸಣ್ಣ ಸಣ್ಣ ಕ್ಷಣಗಳನ್ನ ಹಾಗೆ ಕಳೆದುಕೊಂಡು ಬಿಡುತ್ತೆವೆ , ಅಂತಹ ಒಂದು ಸಂತೋಷದ ಕ್ಷಣ ನನ್ನದಾಗಿಸಿದ ಮಿತ್ರ ರಫೀಕನಿಗೆ ಮತ್ತು ಚಿತ್ರಕಾರ ಪ್ರಕಾಶ ಶೆಟ್ಟರಿಗೆ ನನ್ನ ದನ್ಯವಾದಗಳು

ಹೀಗೆ ಅವಳ ನೆನಪಲ್ಲಿ ಮೂಡಿ ಬಂದದ್ದು

ಹೀಗೆ ಅವಳ ನೆನಪಲ್ಲಿ ಮೂಡಿ ಬಂದದ್ದು
ನಿನ್ನಿಂದ ದೂರಾದ ಮನವಿಂದು
ದು:ಖದ ಜಲಪಾತವೇಕೆ
ನನ್ನೊಂದಿಗೆಕೆ ಆ ಚಂದ್ರನಿಗೂ ನೋವು
ರಾತ್ರಿಗೆಕೋ ಮತ್ತೆ ಮತ್ತೆ ಕಣ್ಣಿರ ಮಳೆ,
ನಿನ್ನ ನಿರ್ಭಂದನೆಗಳ
ನನ್ನ ಕಳವಳಗಳ ನಡುವೆ
ನನ್ನ ಹಣೆಬರಹವೆ ನನಗೆ ಶತ್ರುವಾಯಿತೆ
ನಾನಾದರೂ ಎನೆಂದು ಹೇಳಲಿ ನನ್ನೊಲವೆ
ನನ್ನ ಮನದಿಂದ ನೀ ದೂರಾದ ಮೇಲೆ,
ನನ್ನೊಂದಿಗೆಕೆ ಆ ಚಂದ್ರನಿಗೂ ನೋವು
ರಾತ್ರಿಗೆಕೋ ಮತ್ತೆ ಮತ್ತೆ ಕಣ್ಣಿರ ಮಳೆ,
ನನ್ನಸೆಗಳೆಲ್ಲಾ ಮಣ್ಣಾಗಿ
ಕನಸುಗಳೆಲ್ಲಾ ಚೂರಾಗಿ
ಬದುಕಿರುವೆ ನಿನ್ನಿಂದ ದೂರಾಗಿ
ಸಾಯಲು ಸಾದ್ಯವಿಲ್ಲಾ ನಿನ್ನ ನೆನಪಿನಿಂದಾಗಿ
ನಿನ್ನಿಂದ ದೂರಾದ ಮನವಿಂದು
ದು:ಖದ ಜಲಪಾತವೇಕೆ
ನನ್ನೊಂದಿಗೆಕೆ ಆ ಚಂದ್ರನಿಗೂ ನೋವು
ರಾತ್ರಿಗೆಕೋ ಮತ್ತೆ ಮತ್ತೆ ಕಣ್ಣಿರ ಮಳೆ,




ಮಹೇಶ ಎಸ್ ಎಲ್

ಹಂಗಾರ ನೀ ಹೋಗ್

ಈ ಮಾತನ್ನ ಅವನು ಯಾವುದೆ ಉದ್ವೇಗವಿಲ್ಲದೆ ಹುಟ್ಟಿದ ಆ ಇಪ್ಪತೈದು ವಸಂತಗಳಲ್ಲಿ ಆ ರೀತಿ ಸಮಾಧಾನವಾಗಿ ಹೇಳಿದ್ದ ಹಂಗಾರ್ ನೀ ಹೋಗ್
ಅವನಿಗೆ ತನ್ನ ಈಗಿನ ಪರಿಸ್ಥಿತಿಗಿಂತ ಅದನ್ನ ತಂದೊಡ್ಡಿದ ದರಿದ್ರ ಜಾತಿ ಪ್ರಪಂಚದೆಡೆಗೆ ಒಂದು ಸಿಟ್ಟು ಅನ್ನೊದಕ್ಕಿಂತ ದಿವ್ಯ ನಿರ್ಲಕ್ಶತನ ಬಂದು ಬಿಟ್ಟಿತ್ತು
ಅವನ ಆಗಿನ ಸ್ಥಿತಿಗೆ ಒಂದು ರೀತಿ ಅವನೆ ಕಾರಣ ಅವನೂ ಸಹ ಜಗತ್ತಿನ ಸಮಸ್ತ ಜೀವಿಗಳಂತೆ ಪ್ರೀತಿಯ ಬೆಂಬತ್ತಿದ್ದ ಅವಳು ಸಹ ಅದನ್ನೆ ಮಾಡಿದ್ಲು ಅದು ಐದು ಸಂವತ್ಸರ ಗಳಿಂದ ನಿರಂತರ ಸಾಗಿದ ಒಲವಿನ ಪಯಣ,,,,
ಅದರಲ್ಲಿ ಸ್ವಲ್ಪ ಸಿಟ್ಟು, ಚೂರು ಬಿಗುಮಾನ ಮುಂದೆ ಬರುವ ಎಲ್ಲಾ ಜನ್ಮಕ್ಕೂ ಕೊಟ್ಟರೂ ಮುಗಿಯಲಾರದ ಒಲವು, ಎಲ್ಲಾ ಇತ್ತು ಆದರೂ ಜಾತಿ ಸುಳಿಗೆ ಸಿಕ್ಕ ಪ್ರೀತಿಯ ದೋಣಿ ಐದೇ ಸಂವತ್ಸರಕ್ಕೆ ಮುಳುಗಿ ಹೋಗಿತ್ತು.

ಕುವೆಂಪು ಹೇಳಿದ್ರು __
ಜಾತಿ ಸುಡೊ ಮಂತ್ರ ಕಿಡಿ
ಪ್ರೀತಿ ಅಂತ
ಆದ್ರೆ ನಮ್ಮ ಜಾತಿಯ ಭೂತಗಳು ಅದನ್ನ ಮಾಡಿದ್ದು
ಪ್ರೀತಿ ಸುಡೊ ಮಂತ್ರ ಕಿಡಿ
ಜಾತಿ ಅಂತ

ಕಟ್ಟಿಕೊಂಡ ಕನಸುಗಳು , ಒಬ್ಬ್ಬರಿಗೊಬ್ಬರು ಕೊಟ್ಟುಕೊಂಡ ಆಶ್ವಾಸನೆಗಳು, ಬರೆದುಕೊಂಡ ಪ್ರೀತಿಯ ಪತ್ರಗಳು , ಒಲವಿನ ಹಾಡು ತಿರುಗಾಡಿದ ಬೀದಿಗಳು , ಒಟ್ಟಿಗೆ ಕುಳಿತು ಮೊದಲು ಹುಟ್ಟುವ ಹೆಣ್ಣು ಮಗುವಿಗೆ ಇಡಬೇಕಾದ ಹೆಸರು.ಇದೆಲ್ಲವನ್ನು ಒಂದೆ ಉಸಿರಲ್ಲಿ ಕೊಚ್ಚಿ ಹಾಕಿದ್ದು ಜಾತಿ ಎಂಬ ಪಾಪಾತ್ಮ!!!!!!!

ಹುಡುಗಾ ಪ್ರೀತ್ಸ್ ತಿಯಾ ಅಂತ ಕೇಳ್ದಾ
ಹುಡುಗಿ ಹೇಳ್ತು ಹೂಂ ಜಾತಿನಾ!!

ಅದಕ್ಕೆ ಹುಡುಗಾ ಹೇಳಿದ್ದು ಹಂಗಾರ್ ನೀ ಹೋಗ್
ಅಂತ
ಗೆಳೆಯರೆ ಕೊನೆಯ ಒಂದು ಮಾತು
ಯಾವ ಕಾಲದಲ್ಲಿ ಇದಾರೆ ಇನ್ನು ಇವರು ಜಾತಿ ಬಗ್ಗೆ ಮಾತಾಡ್ತಾರೆ ಇವರ ಪೂಜೆಯ ವಿಧಾನ ವನ್ನ ಇವರದೆ ಮನೆಯಿಂದ ಹೋರಗೆ ಹೋಗುವ ಇವರ ಕಂದ ಬಾರಲ್ಲಿ ಅದರ ಅರ್ಥ ಹೆಳ್ತಾ ಕೂತಿರುತ್ತೆ
ಜಾತಿ ಜಿಂದಾಬಾದ್